Health Tips: ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಪರಿಹಾರ ಕ್ರಮ!
ಇತ್ತೀಚಿನ ವರ್ಷಗಳಲ್ಲಿ ಸರಿಸುಮಾರು ವಾರ್ಷಿಕ 4೦ ಲಕ್ಷ ಜನ ಬೊಜ್ಜು ಮತ್ತದರ ಮುಂದುವರಿದ ಸಮಸ್ಯೆ ಗಳಿಂದಲೇ ಸಾವನ್ನಪ್ಪುತ್ತಿದ್ದಾರೆ ಎನ್ನುತ್ತದೆ ಒಂದು ಜಾಗತಿಕ ಸಮೀಕ್ಷೆ. ಕೆಲವು ಸರಳ ಜೀವನ ಶೈಲಿಯ ಬದಲಾವಣೆ ಗಳಿಂದ ತೂಕವನ್ನು ನಿಯಂತ್ರಿಸಿ, ಕೊಬ್ಬು ಕರಗಿಸಿ, ಆರೋಗ್ಯಪೂರ್ಣರಾಗಿ ಜೀವನ ನಡೆಸಬಹುದು. ಅಂದರೆ ಏನು ಮಾಡಬೇಕು?

obesity

ನವದೆಹಲಿ: ಬೊಜ್ಜು (Obesity) ಅಥವಾ ಅತಿತೂಕದ ಸಮಸ್ಯೆ ಇಂದಿನ ದಿನಗಳಲ್ಲಿ ಬಿಸಿಲು, ಮಳೆಯಷ್ಟೇ ಸಾಮಾನ್ಯ ಎನಿಸಿದೆ. ಆದರೆ ಅದರ ನೇರ ಮತ್ತು ಪರ್ಯಾಯ ಪರಿಣಾಮಗಳ ಬಗ್ಗೆ ಗಮನ ಹರಿಸಿದರೆ, ಇತ್ತೀಚೆಗೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಅರ್ಥಕ್ಕರ್ಧ ರೋಗಗಳಿಗೆ ಅತಿತೂಕವೇ ಕಾರಣ ಎಂಬುದಂತೂ ಹೌದು. ʻವ್ಯಾಯಾಮ ಮಾಡುವುದಕ್ಕೆ ಸಮಯವೇ ಇಲ್ಲʼ ಎನ್ನುವವರು ಒಂದೆಡೆಯಾದರೆ, ಸಿಕ್ಕಿದ್ದೆಲ್ಲಾ ತಿನ್ನುವವರು ಇನ್ನೊಂದೆಡೆ. ಹೀಗೆ ಸಿಕ್ಕಿದ್ದನ್ನು ತಿನ್ನುವವರು ಮತ್ತು ತಿಂದಿದ್ದನ್ನು ಕರಗಿಸದೆ ಉಳಿಯುವವರಲ್ಲಿ ದೇಹದೆಲ್ಲೆಡೆ ಕೊಬ್ಬು ಶೇಖರಣೆಯಾಗುತ್ತದೆ. ಸಾಮಾನ್ಯ ಚಟುವಟಿಕೆಯ ವ್ಯಕ್ತಿಯೊಬ್ಬ ದಿನಕ್ಕೆ ಅಂದಾಜು 8000 ಕ್ಯಾಲರಿ ಆಗುವಷ್ಟು ಆಹಾರವನ್ನು ತೆಗೆದುಕೊಂಡರೆ ಸಾಕಾಗುತ್ತದೆ. ಇದಕ್ಕಿಂತ ಹೆಚ್ಚಿನದು ಕೊಬ್ಬಾಗಿ ಪರಿವರ್ತನೆ ಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸರಿಸುಮಾರು ವಾರ್ಷಿಕ 4೦ ಲಕ್ಷ ಜನ ಬೊಜ್ಜು ಮತ್ತದರ ಮುಂದುವರಿದ ಸಮಸ್ಯೆಗಳಿಂದಲೇ ಸಾವನ್ನಪ್ಪುತ್ತಿದ್ದಾರೆ ಎನ್ನುತ್ತದೆ ಒಂದು ಜಾಗತಿಕ ಸಮೀಕ್ಷೆ. ಕೆಲವು ಸರಳ ಜೀವನಶೈಲಿಯ ಬದಲಾವಣೆ ಗಳಿಂದ ತೂಕವನ್ನು ನಿಯಂತ್ರಿಸಿ, ಕೊಬ್ಬು ಕರಗಿಸಿ, ಆರೋಗ್ಯಪೂರ್ಣರಾಗಿ ಜೀವನ ನಡೆಸಬಹುದು. ಅಂದರೆ ಏನು ಮಾಡಬೇಕು?
ನಾರುಭರಿತ ಆಹಾರ: ಪ್ರತಿದಿನ ಕನಿಷ್ಟ 2ಸಂಪೂರ್ಣ ಸರ್ವಿಂಗ್ ಹಣ್ಣು ಮತ್ತು ತರಕಾರಿಗಳಿರಲಿ ಆಹಾರದಲ್ಲಿ. ಹೆಚ್ಚು ನಾರುಭರಿತ ಆಹಾರ ಬೇಗನೇ ನಮ್ಮ ಹೊಟ್ಟೆಯನ್ನು ತುಂಬುತ್ತದೆ ಮತ್ತು ದೀರ್ಘಕಾಲ ಹಸಿವಾಗದಂತೆ ಕಾಪಾಡುತ್ತದೆ. ಇಂಥ ಆಹಾರಗಳ ಮೂಲಕ ದೇಹಕ್ಕೆ ಯಥೇಚ್ಛವಾಗಿ ದೊರೆಯುವ ಸೂಕ್ಷ್ಮ ಪೋಷಕಾಂಶಗಳಿಂದ ನಾನಾ ರೀತಿಯ ಅನುಕೂಲಗಳಿವೆ.
ಸಂಸ್ಕರಿತ ಆಹಾರ ಬೇಡ: ನಾರು, ತೌಡು ಮುಂತಾದ ಒಳಿತನ್ನೆಲ್ಲಾ ತೆಗೆದು ಬರಿಯ ಬೂಸಾ ನೀಡುವ ಸಂಸ್ಕರಿತ ಆಹಾರಗಳು ಬೇಡವೇಬೇಡ. ಇವು ಅತಿ ಹೆಚ್ಚಿನ ಕ್ಯಾಲರಿಯನ್ನು ದೇಹಕ್ಕೆ ತುಂಬಿ ಅತಿ ಕಡಿಮೆ ಪೋಷಕಾಂಶಗಳನ್ನು ಒದಗಿಸುತ್ತವೆ. ಬಿಳಿ ಬ್ರೆಡ್ ಸೇರಿದಂತೆ ಮೈದಾ ಭರಿತ ಆಹಾರಗಳು, ಯಾವ್ಯಾವುದೋ ಕೊಬ್ಬು ತುಂಬಿರುವ ತಿಂಡಿ-ತಿನಿಸುಗಳಿಗೆ ಗಟ್ಟಿ ಮನಸಿನಿಂದ ಟಾಟಾ ಹೇಳುವುದು ಕ್ಷೇಮ. ಇಡೀ ಧಾನ್ಯಗಳು ಮತ್ತು ತೌಡು ಸಹಿತವಾದ ಆಹಾರವನ್ನು ಬಳಸಿ.
ಸಕ್ಕರೆ ಕಡಿಮೆಯಾಗಲಿ: ಬಾಯಿಗೆ ಸಹಿಯಾಗುವ ಸಕ್ಕರೆ ಹೊಟ್ಟೆಗೆ ಕಹಿ. ಪ್ಯಾಕ್ ಮಾಡಿದ ಜ್ಯೂಸ್, ಸೋಡಾ, ಎನರ್ಜಿ ಡ್ರಿಂಕ್‌ಗಳಲ್ಲಿ ಸಿಕ್ಕಾಪಟ್ಟೆ ಸಕ್ಕರೆ ಸೇರಿಸುತ್ತದೆ. ಕೇಕ್, ಐಸ್‌ಕ್ರೀಮ್, ಜಿಲೇಬಿಯಂಥ ಸಿಹಿ ತಿನಿಸುಗಳನ್ನು ʻಬೇಡʼ ಎನ್ನುವುದಕ್ಕೆ ಕಷ್ಟವಾದರೂ ಇವೆಲ್ಲ ದೇಹಕ್ಕೆ ಬೇಕಾದ ಆಹಾರವಲ್ಲ. ಅದರಲ್ಲೂ ಕೃತಕ ಸ್ವೀಟ್ನರ್‌ಗಳಂತೂ ಇನ್ನೂ ಹಾನಿ ಮಾಡುತ್ತದೆ. ಹಾಗಾಗಿ ಸಿಹಿ ತಿನಿಸುಗಳನ್ನು ಆದಷ್ಟೂ ಕಡಿಮೆ ತಿಂದರೆ ಜೀವಕ್ಕೆ ಕ್ಷೇಮ.
ನೀರು ಬೇಕು: ದಿನಕ್ಕೆ ಮೂರು ಲೀ.ನಷ್ಟು ನೀರು, ಕಷಾಯ, ಮಜ್ಜಿಗೆ, ಗ್ರೀನ್ ಟೀ, ಸೂಪಿನಂಥ ಪಾನೀಯಗಳು ಹೊಟ್ಟೆ ಸೇರಿದರೆ ಸಿಹಿ, ಕರಿದಿದ್ದು ಮುಂತಾದ ಅನಗತ್ಯ ಚಪಲಗಳಿಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಜೊತೆಗೆ ಸಾಧ್ಯವಾದಷ್ಟೂ ಮನೆಯ ಆಹಾರವೇ ಇರಲಿ. ಸದಾ ಮನೆಯೂಟ ಮಾಡುವವರಲ್ಲಿ ಟೈಪ್‌೨ ಮಧುಮೇಹ ತಲೆದೋರುವ ಸಾಧ್ಯತೆ ಕಡಿಮೆ.
ಸಸ್ಯಾಹಾರ: ತೂಕ ಈಗಾಗಲೇ ಹೆಚ್ಚಿದೆ ಎನ್ನುವವರು, ತೂಕ ಇಳಿಕೆಯ ಗುರಿ ಮುಟ್ಟುವವರೆಗೆ ಸಸ್ಯಾಹಾರಿಗಳಾದರೆ ಕ್ಷೇಮ. ಈ ಬಗ್ಗೆ ವೈದ್ಯರಲ್ಲಿ ಮಾತನಾಡಿ, ಆಯಾ ದೇಹಕ್ಕೆ ಹೊಂದಿ ಕೊಳ್ಳುವಂಥ ಡಯೆಟ್ ಯೋಜನೆಯನ್ನು ತಯಾರಿಸಿಕೊಂಡು, ಸುರಕ್ಷಿತ ತೂಕ ಇಳಿಕೆಯನ್ನು ಸಾಧಿಸಬಹುದು.
ಇದನ್ನು ಓದಿ: Health Tips: ವಯಸ್ಕರಲ್ಲಿ ಮೊಡವೆ: ಪರಿಹಾರವೇನು?
ವ್ಯಾಯಾಮ: ದೇವರ ತಲೆಯ ಮೇಲೆ ಹೂವು ತಪ್ಪಿದರೂ ವ್ಯಾಯಾಮ ತಪ್ಪುವಂತಿಲ್ಲ. ದಿನಕ್ಕೆ ಕನಿಷ್ಟ ೪೦ ನಿಮಿಷದಂತೆ ವಾರಕ್ಕೆ ಐದು ದಿನಗಳಾದರೂ ವ್ಯಾಯಾಮ ಬೇಕು. ಕ್ಷಿಪ್ರ ನಡಿಗೆ ಈ ಮಟ್ಟಿಗೆ ಒಳ್ಳೆಯ ಫಲಿತಾಂಶವನ್ನೇ ನೀಡುತ್ತದೆ. ನಡಿಗೆಯೇ ಆಗಬೇಕಂತಿಲ್ಲ, ಅವರವರ ಆಸಕ್ತಿ, ಅನುಕೂಲಕ್ಕೆ ತಕ್ಕಂತೆ ಯೋಗ, ಏರೋಬಿಕ್ಸ್, ಪಿಲಾಟೆ, ಝುಂಬಾ, ಸೈಕ್ಲಿಂಗ್, ಈಜು- ಯಾವು ದಾದರೂ ಆದೀತು, ಅಂತೂ ದಿನವೂ ಬೆವರಿಳಿಸಿ.
ಒತ್ತಡ ನಿವಾರಣೆ: ಒತ್ತಡ ಇಲ್ಲದವರು ಯಾರಿದ್ದಾರೋ ಗೊತ್ತಿಲ್ಲ. ಆದರೆ ಅದನ್ನು ನಿವಾರಣೆ ಮಾಡಿಕೊಳ್ಳುವುದು ಪ್ರತಿಘಳಿಗೆ ಉಸಿರಾಡುವಷ್ಟೇ ಮುಖ್ಯ. ಇದಕ್ಕಾಗಿ ಯೋಗ, ಧ್ಯಾನ, ಪ್ರಾಣಾ ಯಾಮ, ಸಂಗೀತ ಕೇಳುವುದು, ಇಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು- ಇಂಥದ್ದೇನಾದರೂ ಅಗತ್ಯವಾಗಿ ಬೇಕು. ಸ್ಟ್ರೆಸ್ ಹಾರ್ಮೋನುಗಳಿಂದ ಹೆಚ್ಚುತ್ತಿದ್ದಂತೆ ತಿನ್ನಬೇಕೆಂಬ ಬಯಕೆ ಹೆಚ್ಚುತ್ತದೆ, ತೂಕವೂ ಏರುತ್ತದೆ.
ನಿದ್ದೆ: ಇದೊಂದು ಹೆಚ್ಚಿನವರಿಗೆ ಕಷ್ಟದ ಕೆಲಸ. ಆದರೆ ದಿನವೂ 7-8 ತಾಸು ನಿದ್ದೆ ಮಾಡಲೇಬೇಕು. ನಿನ್ನೆಯನ್ನು ನಿನ್ನೆಗೇ ಬಿಟ್ಟು ಇಂದಿನಲ್ಲಿ ಬದುಕುವ ಅತ್ಯಂತ ಪ್ರಾಯೋಗಿಕ ಮಾರ್ಗವಿದು. ದೇಹದ, ಮನಸ್ಸಿನ ಹತ್ತು-ಹಲವು ಸಮಸ್ಯೆಗಳನ್ನು ಗುಣಪಡಿಸುವ ಸಾಮರ್ಥ್ಯ ನಿದ್ದೆಗಿದೆ. ಬೇಗ ಮಲಗಿ ಬೇಗ ಏಳುವುದನ್ನೇ ಪಥ್ಯವಾಗಿಸಿಕೊಂಡರೆ ಆರೋಗ್ಯ ಹಸನಾಗುತ್ತದೆ. ಬಲೂನ್ ಹೊಟ್ಟೆ, ಗುಢಾಣದಂಥ ದೇಹದಿಂದ ಮುಕ್ತಿ ಪಡೆಯಬಹುದು.