ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Best Face Masks: ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಎಂಥಾ ಮಾಸ್ಕ್‌ ಸೂಕ್ತ?

ದೇಶದ ಬಹುತೇಕ ನಗರಗಳ ಗಾಳಿಯ ಗುಣಮಟ್ಟ ಅತಿಯಾಗಿ ಕ್ಷೀಣಿಸುತ್ತದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸತ್ಯವೇ ಆದರೂ ಈಗಾಗಲೇ ಹಾಳಾಗಿರುವ ಗಾಳಿಯನ್ನೇ ಉಸಿರಾಡಿಕೊಂಡು ಬದುಕಬೇಕು ಎನ್ನುವುದು ಅಷ್ಟೇ ಸತ್ಯ. ಇಂಥ ದುರ್ಬರ ಸ್ಥಿತಿಯಲ್ಲಿ ತಾತ್ಕಾಲಿಕ ನೆರವು ನೀಡುವಂಥವು ಒಳ್ಳೆಯ ಗುಣಮಟ್ಟದ ಮಾಸ್ಕ್‌ಗಳು. ಆದರೆ ಎಂಥಾ ಮಾಸ್ಕ್‌ ಸೂಕ್ತ? ಎಂಬುದರ ಕುರಿತ ವರದಿ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ನವೆಂಬರ್‌ ಬರುತ್ತಿದ್ದಂತೆ ಚಳಿಯ ಸೂಚನೆಗಳು ಮೆಲ್ಲನೆ ಆರಂಭವಾಗುತ್ತವೆ. ದೇಶದ ಹಲವು ನಗರಗಳಲ್ಲಿ ಈಗಾಗಲೇ ವಾಯು ಮಾಲಿನ್ಯದ ಪ್ರಮಾಣವು ಆತಂಕ ಹುಟ್ಟಿಸುವ ಮಟ್ಟಕ್ಕೆ ಹೆಚ್ಚುತ್ತಿದೆ. ಇದಿಷ್ಟು ಸಾಲದೆಂಬಂತೆ ದೀಪಾವಳಿಯೂ ಬರಲಿದ್ದು, ಪಟಾಕಿ ಹೊಡೆಯಲಾಗುತ್ತದೆ. ಅಲ್ಲಿಗೆ ದೇಶದ ಬಹುತೇಕ ನಗರಗಳ ಗಾಳಿಯ ಗುಣಮಟ್ಟ ಅತಿಯಾಗಿ ಕ್ಷೀಣಿಸುತ್ತದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಸತ್ಯವೇ ಆದರೂ ಈಗಾಗಲೇ ಹಾಳಾಗಿರುವ ಗಾಳಿಯನ್ನೇ ಉಸಿರಾಡಿಕೊಂಡು ಬದುಕಬೇಕು ಎನ್ನುವುದು ಅಷ್ಟೇ ಸತ್ಯ. ಇಂಥ ದುರ್ಬರ ಸ್ಥಿತಿಯಲ್ಲಿ ತಾತ್ಕಾಲಿಕ ನೆರವು ನೀಡುವಂಥವು ಒಳ್ಳೆಯ ಗುಣಮಟ್ಟದ ಮಾಸ್ಕ್‌ಗಳು (Masks). ಇವುಗಳನ್ನೇ ನಂಬಿಕೊಂಡು ಬದುಕು ಕಳೆಯುವಂತಿಲ್ಲವಾದರೂ, ಗಾಳಿಯ ಗುಣಮಟ್ಟ ತೀರಾ ಹಾಳಾಗಿರುವ ಸಂದರ್ಭದಲ್ಲಿ ಇವು ಸಹಾಯ ಮಾಡಬಲ್ಲವು. ಆದರೆ ಎಂಥಾ ಮಾಸ್ಕ್‌ ಸೂಕ್ತ?

ಯಾವುದು ಸರಿ?

ವಾಯು ಗುಣಮಟ್ಟ ಸೂಚಿಯು (AQI) ಹೆಚ್ಚಿನ ನಂಬರ್‌ಗಳನ್ನು ತೋರುತ್ತಿದೆ ಎಂದರೆ ಮಾಲಿನ್ಯ ಹೆಚ್ಚಾಗಿದೆ ಎಂದರ್ಥ. ಇಂಥ ಸಂದರ್ಭಗಳಲ್ಲಿ ಭೂಮಿಗೆ ಹತ್ತಿರದಲ್ಲೇ ಸಾಂದ್ರವಾದ ಘನಕಣಗಳು ಹೆಚ್ಚಿ, ನಮ್ಮ ಉಸಿರಿನ ಮೂಲಕ ಶ್ವಾಸಕೋಶ ಪ್ರವೇಶಿಸಿ, ಇನ್ನಿಲ್ಲದ ತೊಂದರೆ ತರುತ್ತವೆ. ಹೀಗಿರುವಾಗ ಸರಳವಾದ ಬಟ್ಟೆಯ ಮಾಸ್ಕ್‌ಗಳು, ನೆಗಡಿ-ಕೆಮ್ಮಿನ ಸಂದರ್ಭಗಳಲ್ಲಿ ಬಳಸುವ ಅಥವಾ ಸರ್ಜಿಕಲ್‌ ಉಪಯೋಗಕ್ಕಿರುವ ಮಾಸ್ಕ್‌ಗಳು ಸಾಕಾಗುವುದಿಲ್ಲ. ಹಾಗಾದರೆ ದುಬಾರಿ ಬೆಲೆಯ ಮಾಸ್ಕ್‌ಗಳು ಮಾತ್ರವೇ ಮಾಲಿನ್ಯದಿಂದ ರಕ್ಷಣೆ ನೀಡುತ್ತವೆಯೇ ಅಥವಾ ಯಾವುದನ್ನು ಗಮನಿಸಬೇಕು?

ಇದಕ್ಕಾಗಿ ಪ್ರಬಲವಾದ N95, N99, FFP2 ಇತ್ಯಾದಿ ಮಾಸ್ಕ್‌ಗಳು ಬೇಕಾಗುತ್ತವೆ. ಇವುಗಳನ್ನು ಪಿಎಂ 2.5 ಘನಕಣಗಳನ್ನು ತಡೆಯುವಂತೆಯೇ ರೂಪಿಸಲಾಗಿದ್ದು, ಸಾಂದ್ರವಾದ ಮಾಲಿನ್ಯವು ಉಸಿರಿನಲ್ಲಿ ಪ್ರವೇಶಿಸುವುದನ್ನು ದೊಡ್ಡ ಮಟ್ಟದಲ್ಲಿ ತಡೆಯಬಲ್ಲವು. ಎನ್‌ 95 ಮತ್ತು ಕೆಎನ್‌ 95 ಮಾಸ್ಕ್‌ಗಳು ಗಾಳಿಯ ಘನಕಣಗಳನ್ನು ಶೇ.95ರಷ್ಟು ತಡೆಯಬಲ್ಲವು. ಎಫ್‌ಎಫ್‌ಪಿ 2 ಮಾಸ್ಕ್‌ಗಳು ಶೇ. 94ರಷ್ಟು ತಡೆಯಬಲ್ಲವು. ಎನ್‌ 99 ಮತ್ತು ಎನ್‌ 100 ಮಾಸ್ಕ್‌ಗಳು ಶೇ. 99ರವರೆಗೂ ಸೂಕ್ಷ್ಮ ಮಾಲಿನ್ಯವನ್ನು ತಡೆಯಬಲ್ಲವು. ಆದರೆ ಈ ಬಗೆಯ ಮಾಸ್ಕ್‌ಗಳನ್ನು ದೀರ್ಘಕಾಲ ಧರಿಸುವುದರಿಂದ ಉಸಿರುಕಟ್ಟಿದ ಅನುಭವ ಆಗುವುದೂ ಇದೆ. ಹಾಗಾಗಿ ಅತಿಯಾದ ಮಾಲಿನ್ಯವಿರುವ ಸ್ಥಳಗಳಿಗೆ ಮಾತ್ರವೇ ಇದು ಸೂಕ್ತ. ಈ ಪ್ರಮಾಣಗಳೆಲ್ಲವೂ ಪ್ರಯೋಗಾಲಯದಲ್ಲಿ ದಾಖಲಾಗಿದ್ದು, ನಿಜ ಜೀವನದಲ್ಲಿ ವ್ಯತ್ಯಾಸವಾಗಬಹುದು. ಆದರೆ ನಿಶ್ಚಿತವಾಗಿ ಉಳಿದ ಸಾಧಾರಣ ಮಾಸ್ಕ್‌ಗಳಿಗಿಂತ ಹೆಚ್ಚಿನ ರಕ್ಷಣೆಯನ್ನು ನೀಡಬಲ್ಲವು.

ಹೇಗೆ ಹಾಕುವುದು?

ಇದೇನು ಬ್ರಹ್ಮವಿದ್ಯೆ ಅಂದುಕೊಳ್ಳಬಹುದು. ಆದರೆ ಗಲ್ಲ, ಕೆನ್ನೆ ಮತ್ತು ಮೂಗಿನ ಮೇಲೆ ಸರಿಯಾದ ರೀತಿಯಲ್ಲಿ ಮಾಸ್ಕ್‌ ಕುಳಿತುಕೊಳ್ಳದೆ, ಸುತ್ತೆಲ್ಲ ಕಿಂಡಿಗಳಿವೆ ಎಂದಾದರೆ, ಸಾಕಷ್ಟು ಮಾಲಿನ್ಯದ ಕಣಗಳು ನಮ್ಮ ಉಸಿರನ್ನು ಪ್ರವೇಶಿಸಬಲ್ಲವು. ಹಾಗಾಗಿ ಎಲ್ಲಿಯೂ ಅಳ್ಳಕವಾಗದೆ ನಮ್ಮ ನಮ್ಮ ಮುಖದ ಅಳತೆಗೆ ತಕ್ಕಂಥ ಮಾಸ್ಕ್‌ಗಳನ್ನೇ ಖರೀದಿಸುವುದು ಸೂಕ್ತ. ಮಕ್ಕಳಿಗೆ ಮಾಸ್ಕ್‌ ಉಪಯೋಗಿಸುವ ಅಗತ್ಯವಿದ್ದರೆ, ಅವರ ಅಳತೆಯದ್ದನ್ನೇ ತೆಗೆದುಕೊಳ್ಳಿ. ಆಗ ಮಾತ್ರವೇ ಅದು ಪರಿಣಾಮಕಾರಿ.

ಹೆಚ್ಚಿನ ಸಮಯ ಪ್ರಯಾಣ ಮಾಡುವವರು ಅಥವಾ ಹೊರಗೆ ಓಡಾಡುವವರು ನೀವಾದರೆ, ಕಿವಿಯ ನೆರವಿನಿಂದ ನಿಲ್ಲುವ ಮಾಸ್ಕ್‌ಗಳ ಬದಲು ತಲೆಯ ನೆರವಿನಿಂದ ನಿಲ್ಲುವ ಮಾಸ್ಕ್‌ಗಳು ಸೂಕ್ತ. ಅವು ಹೆಚ್ಚು ಸುಭದ್ರವಾಗಿ ದೀರ್ಘಸಮಯದವರೆಗೆ ಇರಬಲ್ಲವು. ಹಾಗೆಯೇ ಖರೀದಿಸುವ ಮುನ್ನ, ಮಾಸ್ಕ್‌ ತಯಾರಕರು ಮತ್ತು ಅದರ ಮೇಲಿನ ಮಾರ್ಗದರ್ಶನವನ್ನು ಗಮನಿಸಬೇಕು. ಮರುಬಳಕೆಯ ಮಾಸ್ಕ್‌ ಎಂದು ತಯಾರಕರು ಉಲ್ಲೇಖಿಸಿದ್ದಾರೆಯೇ ಎಂಬುದನ್ನು ಖರೀದಿಸುವಾಗಲೇ ಪರಿಶೀಲಿಸಿ. ಅವರ ನಿಯಮದಂತೆ ಅದನ್ನು ಸ್ವಚ್ಛಗೊಳಿಸಿ, ಶೇಖರಿಸಿ. ಆದಾಗ್ಯೂ ಮಾಸ್ಕ್‌ ಮಳೆಯಲ್ಲಿ ನೆನೆದು ಒದ್ದೆಯಾಗಿದೆ, ಗಲೀಜಾಗಿದೆ ಎಂದರೆ ಬದಲಿಸಬೇಕೇ ಎಂಬುದನ್ನು ಪರಿಶೀಲಿಸಿ. ಹರಿದ ಮಾಸ್ಕ್‌ಗಳನ್ನು ಎಂದಿಗೂ ಬಳಸಬೇಡಿ.‌

ಆಗಸದಲ್ಲಿ 'ಆಕಾಸ ಏರ್' ಹೊಸ ಮೈಲಿಗಲ್ಲು: ನಿತ್ಯ 200 ವಿಮಾನಗಳ ಹಾರಾಟ, ಬೆಂಗಳೂರಿನಿಂದ ಹೆಚ್ಚಾಯ್ತು ಸೇವೆ

ಅಸ್ತಮಾ ಇದ್ದವರಿಗೆ?

ಅಸ್ತಮಾ ಅಥವಾ ಬೇರಾವುದೇ ಬಗೆಯ ಉಸಿರಾಟದ ತೊಂದರೆ ಇದ್ದವರು ಮಾಸ್ಕ್‌ ಬಳಸಬಹುದೇ ಎಂಬುದನ್ನು ಅವರವರ ವೈದ್ಯರೇ ಸೂಚಿಸಬೇಕು. ಕಾರಣ, ದೀರ್ಘ ಕಾಲ ಮಾಸ್ಕ್‌ ಧರಿಸಿದಾಗ ಕೆಲವೊಮ್ಮೆ ಸಾಮಾನ್ಯರಿಗೂ ಉಸಿರುಕಟ್ಟಿದ ಅನುಭವವಾಗುತ್ತದೆ. ಈಗಾಗಲೇ ಸಿಒಪಿಡಿಯಂಥ ಉಸಿರಾಟದ ಸಮಸ್ಯೆ ಇದ್ದರೆ ಇದು ಮತ್ತೂ ಕಷ್ಟವಾಗಬಹುದು. ಹಾಗಾಗಿ ಈ ಕುರಿತು ಅವರವರ ವೈದ್ಯರಿಂದಲೇ ಸಲಹೆ ಪಡೆಯುವುದು ಸೂಕ್ತ.