ಬೆಂಗಳೂರು: ವ್ಯಸನಗಳ ಬಗ್ಗೆ ಗುಟ್ಟಾಗಿ ಮಾತಾಡುತ್ತಿದ್ದ ಕಾಲವೊಂದಿತ್ತು. ಕುಡಿತ, ಜೂಜು ಮುಂತಾದ ಯಾವುದೇ ಚಟಗಳಿದ್ದರೂ ಅದು ಕಿವಿಯಿಂವ ಕಿವಿಗೆ ಪಿಸು ಮಾತಿನಲ್ಲಿ ಹರಡುತ್ತಿತ್ತು. ಆದರೀಗ ವ್ಯಸನಗಳ ಬಗ್ಗೆಯೂ ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಯುವ ಜನರ ಬಾಯಿ ತೆರೆಸಿದರೆ, ಸ್ಮಾರ್ಟ್ ಫೋನ್ ಹೇಗೆ ಚಟವಾಗಿದೆ ತಮಗೆ ಎಂಬುದನ್ನು ತುಂಬಿದ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ! (Smartphone Addiction) ʻನಮ್ಮ ಅಸಿಸ್ಟೆಂಟ್ʼ ಎಂಬ ಹಣೆಪಟ್ಟಿಯೊಂದಿಗೆ ಬರುವ ಈ ಗೆಜೆಟ್‌ಗಳಿಗೆ ಈಗ ನಾವೇ ಗುಲಾಮರಾಗಿದ್ದೇವಲ್ಲ ಎಂಬ ಹಳಹಳಿಕೆ ಹಲವರ ಬಾಯಲ್ಲಿ ಬರುತ್ತಿದೆ. ಹಾಗಾದರೆ ಉಳಿದೆಲ್ಲ ಚಟಗಳನ್ನು ಬಿಡಿಸಿದಂತೆ ಸ್ಮಾರ್ಟ್‌ಫೋನ್ ವ್ಯಸನವನ್ನೂ ಬಿಡಿಸಬಹುದೇ?
ವ್ಯಸನ ಎಂದರೇನು?
ಇದನ್ನು ಮೊದಲು ಅರಿಯೋಣ. ನಿಯಂತ್ರಣ, ಒತ್ತಡ ಮತ್ತು ಪರಿಣಾಮಗಳ ಬಗ್ಗೆ ಯೋಚಿಸದೆಯೇ ಮಾಡುವ ಕೆಲಸಗಳನ್ನು ವ್ಯಸನ ಎನ್ನಬಹುದು. ಸ್ಮಾರ್ಟ್‌ಫೋನ್ ಉದಾಹರಣೆಯನ್ನೇ ತೆಗೆದುಕೊಂಡರೆ, ನಮ್ಮ ನಿಯಂತ್ರಣ ಮೀರಿ ಮತ್ತೆ ಮತ್ತೆ ಸ್ಮಾರ್ಟ್‌ಫೋನ್ ಬಳಸುವುದು; ಆಗಾಗ ಫೋನಿನ ಮೇಲೆ ಅಥವಾ ನೋಟಿಫಿಕೇಷನ್‌ಗಳ ಮೇಲೆ ಕೈಯಾಡಿಸಲೇಬೇಕೆಂಬ ಒತ್ತಡ; ಪರಿಣಾಮವಾಗಿ ದಿನದ ಕೆಲಸ, ಮನಸ್ಸಿನ ನೆಮ್ಮದಿ, ಬದುಕಿನ ಸೌಂದರ್ಯವೆಲ್ಲಾ ಹಾಳಾದರೂ ಲೆಕ್ಕಕ್ಕಿಲ್ಲ ಎನ್ನುವ ಹಾಗಾದರೆ ಅದು ಖಂಡಿತಕ್ಕೂ ವ್ಯಸನ. ಮೆಸೇಜ್‌ಗಳನ್ನು ಪದೇಪದೆ ನೋಡುವುದು, ಟಿಕ್‌ಟಾಕ್, ಫೇಸ್‌ಬುಕ್‌ಗಾಗಿ ಫೋನಿನ ಪರದೆ ಗೀರುತ್ತಿರುವುದು, ಫೋನಿನ ಬ್ಯಾಟರಿ ಖರ್ಚಾಗಿಬಿಟ್ಟರೆ, ಸ್ಮಾರ್ಟ್‌ಫೋನನ್ನೆಲ್ಲೋ ಬಿಟ್ಟು ಬಂದರೆ, ಬೆಳಗ್ಗೆ ಎದ್ದಾಗ ದಿಂಬಿನಡಿ ಫೋನ್ ಕಾಣದಿದ್ದರೆ- ಹೀಗೆ ಫೋನ್ ಕೈಯಲ್ಲಿಲ್ಲ ಎಂಬಂಥ ಯಾವುದೇ ಸಂದರ್ಭದಲ್ಲಿ ವ್ಯಕ್ತಿ ಅತಿಯಾಗಿ ಒತ್ತಡಕ್ಕೊಳಗಾಗುವುದನ್ನು ನೋಡುತ್ತೇವೆ. ಕೋಪ-ತಾಪ, ಹತಾಶೆ, ಸುತ್ತಲಿನವರ ಮೇಲೆ ಅನಗತ್ಯವಾಗಿ ರೇಗಾಡುವುದು, ಕಿರಿಕಿರಿ, ದಣಿವು ಮುಂತಾದವೆಲ್ಲಾ ಸ್ಮಾರ್ಟ್‌ಫೋನ್ ವ್ಯಸನದ ಲಕ್ಷಣಗಳು ಎನ್ನಬಹುದು.
ಇನ್ನೂ ಸೂಕ್ಷ್ಮವಾಗಿ ಹೇಳಬೇಕೆಂದರೆ- ಸ್ಮಾರ್ಟ್‌ಫೋನ್‌ಗಾಗಿ ಮಕ್ಕಳು ಸುಳ್ಳು ಹೇಳುವುದು, ಹೋಂವರ್ಕ್ ಅಥವಾ ದಿನದ ಕೆಲಸಗಳನ್ನು ಮುಗಿಸಲು ಹಿಂದೆ ಬೀಳುವುದು, ಆಪ್ತರಿಂದ ದೂರವಾಗುವುದು, ಸ್ಮಾರ್ಟ್‌ಫೋನ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುವುದು, ಕುಟುಂಬದೊಂದಿಗೆ ಸಮಯ ಕಳೆಯಲು ಮನಸ್ಸು ಮಾಡದಿರುವುದು, ಫೋನ್ ದೊರೆಯದಿದ್ದರೆ ಸಿಟ್ಟು- ಕಿರಿಕಿರಿ, ಬೋರಾಗುತ್ತಿದೆ ಎಂಬ ಕಾರಣಕ್ಕೆ ಫೋನ್ ಹಿಡಿಯುವುದು, ಯಾರ ಮನೆಗೆ ಹೋಗುವುದಿಲ್ಲ ಅಥವಾ ಯಾರು ಮನೆಗೆ ಬಂದರೂ ಲಕ್ಷ್ಯಕ್ಕಿಲ್ಲದಿರುವುದು, ಫೋನ್ ರಿಂಗಾಗದಿದ್ದರೂ ಆದಂತೆ ಕೇಳುವುದು- ಇಂಥವೆಲ್ಲವೂ ಸ್ಮಾರ್ಟ್‌ಫೋನ್ ವ್ಯಸನವನ್ನೇ ಸೂಚಿಸುತ್ತವೆ.
ಈ ಸುದ್ದಿಯನ್ನೂ ಓದಿ: ಚಹಾ V/S ಕಾಫಿ: ಯಾರು ಹಿತವರು ನಮಗೆ ಈ ಎರಡರೊಳಗೆ?
ಏನಾಗುತ್ತದೆ?
ಸ್ಮಾರ್ಟ್‌ಫೋನ್ ಚಟ ಇದ್ದರೇನೀಗ, ಕುಡಿತದಂತೆ ಆರೋಗ್ಯ ಹಾಳಾಗುವುದಿಲ್ಲವಲ್ಲ ಎಂಬುದು ಪ್ರಶ್ನೆ. ಜೂಜಿನಲ್ಲಿ ತೊಡಗಿಕೊಂಡು ಮನೆ ಮುಳುಗಿಸಿಕೊಂಡವರಿಲ್ಲವೇ? ಅವರದ್ದೂ ಆರೋಗ್ಯ ಹಾಳಾಗದಿರಬಹುದು- ಆದರೆ ಇಡೀ ಬದುಕಿನ ಮೇಲೆ ಘೋರ ಪರಿಣಾಮ ಉಂಟಾಗಿದ್ದು ಹೌದಲ್ಲ. ಹಾಗಾಗಿ ಎಲ್ಲಾ ಚಟಗಳನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದಲ್ಲ. ಒಂದೊಂದಕ್ಕೂ ಭಿನ್ನವಾದ ಕೆಟ್ಟ ಪರಿಣಾಮಗಳಿರುತ್ತವೆ. ಸ್ಮಾರ್ಟ್‌ಫೋನ್ ವ್ಯಸನ ಮೊದಲಿಗೆ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಸ್ವಾಸ್ಥ್ಯವನ್ನು ಕದಡುತ್ತದೆ.
ಅಂದರೆ, ಪದೇಪದೆ ಫೋನ್ ಗೀರುವ ಚಟದಿಂದ ರಾತ್ರಿ ನಿದ್ದೆ ಬರುವುದಿಲ್ಲ, ಬಂದರೂ ಆಗಾಗ ಎಚ್ಚರವಾಗುತ್ತದೆ. ಏಕಾಗ್ರತೆ ಸಾಧಿಸಲು ಆಗದೆ, ಸೃಜನಶೀಲತೆಯೇ ಕುಂಠಿತವಾಗುತ್ತದೆ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬಂತೆ ವಿದ್ಯಾರ್ಥಿಗಳ ವ್ಯಾಸಂಗ ಹಿಂದಾಗುತ್ತದೆ. ಒತ್ತಡ, ಕಿರಿಕಿರಿ, ಸಿಟ್ಟು, ರೇಗಾಟಗಳು ವ್ಯಕ್ತಿಯ ಮನಃಶಾಂತಿಯನ್ನು ನಾಶ ಮಾಡುತ್ತವೆ. ಎಲ್ಲರ ನಡುವೆ ಇದ್ದೂ ಒಂಟಿ ಎನಿಸುವುದು, ಆಪ್ತರೊಂದಿಗಿನ ಸಂಬಂಧ ಹಾಳಾಗುವುದು, ಅಭದ್ರತೆಯ ಭಾವನೆ, ಖಿನ್ನತೆಯಂಥ ನಾನಾ ಮಾನಸಿಕ ಸಮಸ್ಯೆಗಳಿಗೆ ಮೂಲವಾಗುತ್ತದೆ. ಇವೆಲ್ಲದರ ಫಲ ದೇಹದ ಮೇಲೂ ಕಾಣಲಾರಂಭಿಸುತ್ತದೆ.

ಗೆಲುವು ನಿಮ್ಮದು!
ಯಕಃಶ್ಚಿತ್ ನಿರ್ಜೀವ ಗೆಜೆಟ್ಟೊಂದು ನಿಮ್ಮ ಮೇಲೆ ನಿಯಂತ್ರಣ ಸಾಧಿಸುವುದು ನಿಜಕ್ಕೂ ನಾಚಿಕೆಗೇಡು! ಹಾಗಾಗಿ ಈ ಚಟದಿಂದ ಮುಕ್ತರಾಗಬೇಕೆಂಬ ಸಂಕಲ್ಪವನ್ನು ಮೊದಲು ಮಾಡಿ. ಮೊದಲಿಗೆ ದಿನಕ್ಕೆ ಇಷ್ಟೇ ಹೊತ್ತು ಫೋನ್ ಮುಟ್ಟಬಹುದು ಎಂದು ಗೆರೆ ಹಾಕಿಕೊಳ್ಳಿ. ಸ್ಕ್ರೀನ್ ಟೈಮ್ ಆನ್ ಮಾಡಿಕೊಂಡು, ಎಷ್ಟೊತ್ತು ಫೋನ್ ಹಿಡಿದಿದ್ದೀರಿ ಎಂಬುದನ್ನು ದಿನದ ಅಂತ್ಯಕ್ಕೆ ಪರೀಕ್ಷಿಸಿ. ಅನಗತ್ಯವಾದ ಎಲ್ಲಾ ಗ್ರೂಪುಗಳಿಂದ ಹೊರಬನ್ನಿ, ಸಾಮಾಜಿಕ ಮಾಧ್ಯಮಗಳಿಂದ ಡಿಟಾಕ್ಸ್ ಮಾಡಿಕೊಳ್ಳಿ. ಕ್ರಮೇಣ ವಾರಕ್ಕೊಮ್ಮೆ ಸ್ಮಾರ್ಟ್‌ಫೋನ್ ಉಪವಾಸ ಕೈಗೊಳ್ಳಿ- ಅಂದರೆ ವಾರಕ್ಕೊಮ್ಮೆ ಫೋನ್‌ಗೂ ರಜೆ!
ನಿಮ್ಮಿಷ್ಟದ ಹವ್ಯಾಸ, ಓದು, ಸಂಗೀತ ಮುಂತಾದ ಧನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಫೇಸ್‌ಬುಕ್‌ನಲ್ಲಿ ಯಾರೊಂದಿಗೋ ಮಾತಾಡುವ ಬದಲು, ಹಳೆಯ ಮಿತ್ರರನ್ನು ಎದುರಾಎದುರು ಭೇಟಿ ಮಾಡಿ ಬೈಟೂ ಚಹಾ ಹೀರಿ. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಪ್ರವಾಸ ಹೋಗುವಾಗ ಫೋನ್ ನೆಟ್‌ವರ್ಕ್ ಇಲ್ಲದ ಸ್ಥಳಗಳನ್ನು ಹುಡುಕಿ. ನಿಮ್ಮ ಅಗತ್ಯಕ್ಕೆ ಗೆಜೆಟ್‌ಗಳು ಒದಗಿಬರಬೇಕೇ ಹೊರತು, ಅವು ನಿಮ್ಮ ಜುಟ್ಟು ಹಿಡಿಯುವುದಲ್ಲ. ಈ ವ್ಯಸನದಿಂದ ಮುಕ್ತರಾಗಲು ಸಾಧ್ಯವಿದೆ, ಪ್ರಾಮಾಣಿಕವಾಗಿ ಪ್ರಯತ್ನಿಸಿದಲ್ಲಿ ಗೆಲುವು ನಿಮ್ಮದು!