ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕ ಹುದ್ದೆಯ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಹಿ ಸುದ್ದಿ ನೀಡಿದೆ. ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯಲ್ಲಿ ಖಾಲಿಯಿರುವ ಗ್ರೂಪ್-ಬಿ ವೃಂದದ ವಿವಿಧ ವಿಷಯಗಳ ಒಟ್ಟು 814 (ಉಳಿಕೆ ಮೂಲ ವೃಂದ- 778, ಕಲ್ಯಾಣ ಕರ್ನಾಟಕ-36) ಉಪನ್ಯಾಸಕ ಹುದ್ದೆಗಳ ನೇರ ನೇಮಕಾತಿಗಾಗಿ (PU Lecturer Recruitment) ಪ್ರಾಧಿಕಾರವು ಗುರುವಾರ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾಗುವ ಉಪನ್ಯಾಸಕರು ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಜತೆಗೆ ಸರ್ಕಾರ ನಿಗದಿಪಡಿಸಿದ ಶಿಕ್ಷಣ ಸಂಸ್ಥೆಗಳಲ್ಲಿ 9 ಮತ್ತು 10ನೇ ತರಗತಿಗಳಿಗೂ ಕಡ್ಡಾಯವಾಗಿ ಬೋಧನೆ ಮಾಡಬೇಕಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 26-11-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-12-2026
- ಶುಲ್ಕವನ್ನು ಪಾವತಿಗೆ ಕೊನೆಯ ದಿನಾಂಕ: 26-12-2026
ಶೈಕ್ಷಣಿಕ ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ ಶೇ. 55ರಷ್ಟು ಅಂಕಗಳೊಂದಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 50) ದ್ವಿತೀಯ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ (B.Ed) ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು (ಗಣಕವಿಜ್ಞಾನ ವಿಷಯಕ್ಕೆ ಎಂಸಿಎ, ಎಂ.ಎಸ್ಸಿ, ಎಂ.ಟೆಕ್ ಅಥವಾ ಬಿ.ಇ ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್ ಪದವಿ ನಿಗದಿಪಡಿಸಲಾಗಿದೆ).
ವಯೋಮಿತಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದಂದು ಕನಿಷ್ಠ 21 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದವರಿಗೆ ಗರಿಷ್ಠ 40 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://cetonline.karnataka.gov.in/kea/indexnew
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: 750
- ಎಸ್ಸಿ, ಎಸ್ಟಿ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: 500
- ವಿಶೇಷ ಚೇತನ ಅಭ್ಯರ್ಥಿಗಳಿಗೆ: 250 ಶುಲ್ಕ
ಸ್ಪರ್ಧಾತ್ಮಕ ಪರೀಕ್ಷೆ ಯಾವಾಗ?
ಸ್ಪರ್ಧಾತ್ಮಕ ಪರೀಕ್ಷೆಯು ಫೆಬ್ರವರಿ 2027ರಲ್ಲಿ ಆಫ್ಲೈನ್-ಓಎಂಆರ್ (Offline-OMR) ಮಾದರಿಯಲ್ಲಿ ನಡೆಯಲಿದೆ. ಪರೀಕ್ಷೆಯು 150 ಅಂಕಗಳ ಕಡ್ಡಾಯ ಕನ್ನಡ ಭಾಷಾ ಪತ್ರಿಕೆ (ಅರ್ಹತಾ ಪತ್ರಿಕೆ - ಕನಿಷ್ಠ 50 ಅಂಕ ಗಳಿಕೆ ಕಡ್ಡಾಯ) ಹಾಗೂ ಸಂಬಂಧಿಸಿದ ವಿಷಯದ ತಲಾ 150 ಅಂಕಗಳ ಎರಡು ನಿರ್ದಿಷ್ಟ ಪತ್ರಿಕೆಗಳನ್ನು (ಪತ್ರಿಕೆ-1 ಮತ್ತು ಪತ್ರಿಕೆ-2) ಒಳಗೊಂಡಿರುತ್ತದೆ.
ಉಳಿಕೆ ಮೂಲವೃಂದದ ನೇಮಕಾತಿ ಅಧಿಸೂಚನೆ ಇಲ್ಲಿದೆ
ಕೆಕೆ ವೃಂದ ನೇಮಕಾತಿ ಅಧಿಸೂಚನೆ ಇಲ್ಲಿದೆ