-ಆರ್.ಕೆ. ಬಾಲಚಂದ್ರ
ಬೆಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್ (Indian Bank) ಉದ್ಯೋಗಾಕಾಂಕ್ಷಿಗಳಿಗೆ ಅಪ್ರೆಂಟಿಸ್‌ಶಿಪ್ ನೀಡಲು ಮುಂದಾಗಿದೆ (Bank Jobs). 2025-26ನೇ ಸಾಲಿಗೆ ದೇಶದಾದ್ಯಂತ ಒಟ್ಟು 1,500 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಕರ್ನಾಟಕದಿಂದ 42 ಮಂದಿಗೆ ಅವಕಾಶ ಸಿಗಲಿದೆ (Job Guide). ಆಸಕ್ತ ಅಭ್ಯರ್ಥಿಗಳು ಆಗಸ್ಟ್ 7ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಇದು ಒಂದು ವರ್ಷದ ಉದ್ಯೋಗ ತರಬೇತಿಯಾಗಿರುತ್ತದೆ. ಅಪ್ರೆಂಟಿಸ್‌ಶಿಪ್ ಒಂದು ಉದ್ಯೋಗ ತರಬೇತಿಯಾಗಿದೆಯೇ ಹೊರತು ಬ್ಯಾಂಕ್ನಿಂದ ನಡೆಯುವ ನೇಮಕಾತಿ ಆಗಿರುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ.
ಅರ್ಹತೆಗಳೇನು?
ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ನಿಗದಿತ ವಿದ್ಯಾರ್ಹತೆ ಪಡೆದಿರಬೇಕು. 2021ರ ಏಪ್ರಿಲ್ 1ರೊಳಗೆ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ ಏಷ್ಟು?
20ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕವೆಷ್ಟು?
ಈ ಉದ್ಯೋಗ ತರಬೇತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಆರ್ಥಿಕ ದುರ್ಬಲ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದವರು 800 ರೂ. ಹಾಗೂ ಎಸ್‌ಸಿ/ಎಸ್‌ಟಿ ಮತ್ತು ವಿಶೇಷಚೇತನ ಅಭ್ಯರ್ಥಿಗಳು 175 ರೂ. ಶುಲ್ಕ ಪಾವತಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸುವವರು ಅಭ್ಯರ್ಥಿಗಳು ಸ್ಥಳೀಯ ಭಾಷೆಗಳಲ್ಲಿ ಹಿಡಿತ ಹೊಂದಿರಬೇಕು. ಹೆಚ್ಚಿನ ವಿವರಗಳಿಗೆ ಬ್ಯಾಂಕ್ ವೆಬ್‌ಸೈಟ್ www.indianbank.inಗೆ ಭೇಟಿ ನೀಡಬಹುದಾಗಿದೆ.
ಆಯ್ಕೆ ಹೇಗೆ?
ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.
ಪರೀಕ್ಷೆಯ ವಿಷಯಗಳೇನು?
ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ ತಲಾ 25 ಪ್ರಶ್ನೆ- 25 ಅಂಕ, ಕಂಪ್ಯೂಟರ್ ನಾಲೆಡ್ಜ್ ತಲಾ 10 ಪ್ರಶ್ನೆ-10 ಅಂಕ, ರೀಸನಿಂಗ್ ಅಪ್ಟಿಟ್ಯೂಡ್ 15 ಪ್ರಶ್ನೆ- 15 ಅಂಕ, ಇಂಗ್ಲಿಷ್ ಲಾಂಗ್ವೇಜ್ 25 ಪ್ರಶ್ನೆ- 25 ಅಂಕ ಹಾಗೂ ಜನರಲ್ ಅವೇರ್ನೆಸ್ ವಿಥ್ ಸ್ಪೆಶಲ್ ರೆಫರೆನ್ಸ್ ಟು ಬ್ಯಾಂಕಿಂಗ್ ಇಂಡಸ್ಟ್ರಿ 25 ಪ್ರಶ್ನೆ-25 ಅಂಕಗಳು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ 100 ಅಂಕಗಳ 100 ಪ್ರಶ್ನೆಗಳಿರುತ್ತವೆ.
ನೆನಪಿಡಿ
ಪರೀಕ್ಷೆಯನ್ನು ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ (ಬ್ಯಾಂಕ್ ನಿರ್ಧರಿಸಿದಂತೆ) ನಡೆಸಲಾಗುತ್ತದೆ. ಆದರೆ ಸಾಮಾನ್ಯ ಇಂಗ್ಲಿಷ್, ಇಂಗ್ಲಿಷ್‌ನಲ್ಲಿರುತ್ತದೆ. ನೋಂದಣಿ ಸಮಯದಲ್ಲಿ ಅರ್ಜಿ ಸಲ್ಲಿಸಿದ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಯಾವುದೇ ಮೂರು ಆದ್ಯತೆಯ ಜಿಲ್ಲೆಗಳನ್ನು ಆಯ್ಕೆ ಮಾಡಲು ಅಭ್ಯರ್ಥಿಗಳಿಗೆ ಆಯ್ಕೆಯನ್ನು ನೀಡಲಾಗುತ್ತದೆ. ಹೀಗೆಆಯ್ಕೆ ಮಾಡುವುದರಿಂದ ಆ ಜಿಲ್ಲೆಗೆ ಅಂತಿಮ ಆಯ್ಕೆಯ ಯಾವುದೇ ಹಕ್ಕನ್ನು ನೀಡಲಾಗುವುದಿಲ್ಲ ಮತ್ತು ಬ್ಯಾಂಕ್ ಖಾಲಿ ಹುದ್ದೆಗಳ ಲಭ್ಯತೆಯ ಪ್ರಕಾರ ಮತ್ತು ಅದರ ವಿವೇಚನೆಯ ಪ್ರಕಾರ ಅದನ್ನು ಹಂಚಿಕೆ ಮಾಡುತ್ತದೆ. ಆಯ್ಕೆ ಮಾಡಿದ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಯಾವುದೇ ಜಿಲ್ಲೆಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
ಪರೀಕ್ಷೆಗೆ ಕರೆ ಪತ್ರಗಳನ್ನು ಅಭ್ಯರ್ಥಿಗಳಿಗೆ ಇಮೇಲ್ ಮೂಲಕ ಅಥವಾ ಬ್ಯಾಂಕ್ ವೆವ್‌ಸೈಟ್ ಅಥವಾ https://apprenticeshipindia.org/ ಅಥವಾ https://nsdcindia.org/apprenticeship ಅಥವಾ http://bfsissc.com ಮೂಲಕ ನೀಡಲಾಗುತದೆ. ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು ಅವರ ವಿವರಗಳನ್ನು ಅಂದರೆ ನೋಂದಣಿ / ರೋಲ್ ಸಂಖ್ಯೆ ಮತ್ತು ಪಾಸ್‌ವರ್ಡ್ / ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಡೌನ್‌ಲೋಡ್ ಮಾಡಲು ಸೂಚಿಸಲಾಗಿದೆ. ಕರೆ ಪತ್ರ / ಮಾಹಿತಿ ಕರಪತ್ರ ಇತ್ಯಾದಿಗಳ ಯಾವುದೇ ಹಾರ್ಡ್ ಪ್ರತಿಯನ್ನು ಅಂಚೆ / ಕೊರಿಯರ್ ಮೂಲಕ ಕಳುಹಿಸಲಾಗುವುದಿಲ್ಲ.
ವಸ್ತುನಿಷ್ಠ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕದ 1/4 ನೇ ಭಾಗವನ್ನು ಕಡಿತಗೊಳಿಸಲಾಗುತ್ತದೆ. ಸಂದರ್ಶನ ನಡೆಸುವುದು ಅಥವಾ ಅದನ್ನು ಕೈಬಿಡುವುದು ಬ್ಯಾಂಕಿನ ವಿವೇಚನೆಗೆ ಬಿಟ್ಟದ್ದು. ಅಭ್ಯರ್ಥಿಗಳು ಸರಾಸರಿ ಅಂಕಗಳಲ್ಲಿ ಕನಿಷ್ಠ ಶೇಕಡಾವಾರು ಅಂಕಗಳನ್ನು ಗಳಿಸಬೇಕಾಗುತ್ತದೆ.(SC/ST/OBC/PwBD ಅಭ್ಯರ್ಥಿಗಳಿಗೆ, ಅದರಲ್ಲಿ 5% ವಿನಾಯಿತಿ). ಸರಾಸರಿ ಅಂಕಗಳಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನ ಬ್ಯಾಂಕ್ ನಿರ್ಧರಿಸುತ್ತದೆ. ವೈಯಕ್ತಿಕ ವಿಷಯ / ವಿಭಾಗಕ್ಕೆ ಯಾವುದೇ ಕನಿಷ್ಠ ಅರ್ಹತಾ ಅಂಕಗಳಿಲ್ಲ.
ಒಂದಿಷ್ಟು ಗಮನಿಸಿ
8, 10 ಅಥವಾ ದ್ವಿತೀಯ ಪಿಯುಸಿ ಅಥವಾ ಪದವಿಯಲ್ಲಿ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಅಪ್ರೆಂಟಿಸ್‌ಶಿಪ್ ಒಂದು ಉದ್ಯೋಗ ತರಬೇತಿಯೇ ಹೊರತು ಬ್ಯಾಂಕ್ನಿಂದ ನಡೆಯುವ ನೇಮಕಾತಿ ಆಗಿರುವುದಿಲ್ಲ.
ಈ ಸುದ್ದಿಯನ್ನೂ ಓದಿ: BOB Recruitment 2025: 2,500 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಿದ ಬ್ಯಾಂಕ್ ಆಫ್ ಬರೋಡಾ; ಹೊಸ ಅಪ್‌ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಈ ತರಬೇತಿ ಪಡೆಯುವುದಾದರೆwww.nats.education.gov.inನಲ್ಲಿ ಹೆಸರು ನೋಂದಾಯಿಸಬೇಕು. ಅಲ್ಲಿ ಅರ್ಜಿ ಸಲ್ಲಿಸುವ ಆಯ್ಕೆಯನ್ನೂ ನೀಡಲಾಗಿದ್ದು, ಒಬ್ಬ ಅಭ್ಯರ್ಥಿ ಒಂದು ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅಪ್ರೆಂಟಿಸ್ಷಿಪ್ ಪಡೆದಿರುವವರು ಮತ್ತು ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ, ಹಾಗೆಯೇ, ಈಗಾಗಲೇ ಉದ್ಯೋಗಕ್ಕೆ ಸೇರಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೇವಾನುಭವವುಳ್ಳ ಅಭ್ಯರ್ಥಿಗಳಿಗೂ ಅವಕಾಶವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪರೀಕ್ಷಾ ಕೇಂದ್ರ ಎಲ್ಲೆಲ್ಲಿ?
ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ - ದಾರವಾಡ ಮೈಸೂರು ಮತ್ತು ಮಂಗಳೂರು
ಜಿಲ್ಲಾವಾರು ಹುದ್ದೆಗಳು ಎಲ್ಲೆಲ್ಲಿ?
ಕರ್ನಾಟಕದಲ್ಲಿ ಬಾಗಲಕೋಟೆ, ಬಳ್ಳಾರಿ,ಬೆಳಗಾವಿ, ಬೆಂಗಳೂರು ಗ್ರಾಮಾಂತರ ,ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ,ಚಿಕ್ಕಮಗಳೂರು,ಚಿತ್ರದುರ್ಗ , ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ ವಿಜಯನಗರ, ವಿಜಯಪುರ, ಯಾದಗಿರಿ.
ಭಾಷಾವಾರು ನೇಮಕಾತಿ
ರಾಜ್ಯದ ಪಾಲಿನ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿಓದುವುದು, ಬರೆಯುವ ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣರಾಗಿರಬೇಕು.
ತರಬೇತಿಯ ಅವಧಿ ಮತ್ತು ಸ್ಟೈಫಂಡ್
ತರಬೇತಿ ಅವಧಿ ಕೇವಲ ಒಂದು ವರ್ಷದ್ದಾಗಿರುತ್ತದೆ. ಒಂದು ವರ್ಷ ತರಬೇತಿಯ ಅವಧಿಯಲ್ಲಿ ತಿಂಗಳಿಗೆ 15,000 ರೂ. ಮೆಟ್ರೊ / ನಗರ ಶಾಖೆಗಳಲ್ಲಿ, 12,000 ರೂ. ಗ್ರಾಮೀಣ / ಅರೆ ನಗರ ಶಾಖೆಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಸ್ಟೈಫಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.
ಅಪ್ರೆಂಟಿಸ್‌ಶಿಪ್ ಅನುಕೂಲಗಳು
ಅಪ್ರೆಂಟಿಸ್‌ಗಳು ನೇಮಕಗೊಂಡರೆ ಅದು ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಇದೊಂದು ತರಬೇತಿಯಾಗಿದ್ದು, ಭವಿಷ್ಯದಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಸಹಾಯವಾಗುತ್ತದೆ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ತರಬೇತಿ ಅವಧಿಯಲ್ಲಿ ಸಂಪೂರ್ಣವಾಗಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‌ಗಳಿಗೆ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಕೆಲವೊಂದು ನಿಯಮ ಸಡಿಲಿಕೆ ಮಾಡಲಾಗಿರುತ್ತದೆ. ಅಪ್ರೆಂಟಿಸ್‌ಶಿಪ್ ತರಬೇತಿಯ ಸಮಯದಲ್ಲಿ, ಅಪ್ರೆಂಟಿಸ್‌ಗಳು ಸೈದ್ಧಾಂತಿಕ ಭಾಗ ಮತ್ತು ಪ್ರಾಯೋಗಿಕ ಉದ್ಯೋಗ ತರಬೇತಿ ಘಟಕ ಎರಡನ್ನೂ ಒಳಗೊಂಡಿರುವ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಎಲ್ಲ ಅಪ್ರೆಂಟಿಸ್‌ಗಳ ಮೌಲ್ಯಮಾಪನ ಪರೀಕ್ಷೆಯನ್ನು ಬ್ಯಾಂಕ್ ನಡೆಸುತ್ತದೆ. ಅಪ್ರೆಂಟಿಸ್‌ಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಅಪ್ರೆಂಟಿಸ್‌ಸಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, BOAT (SR) ಡಿಜಿಟಲ್ 'ಪ್ರಾವೀಣ್ಯತೆಯ ಪ್ರಮಾಣಪತ್ರ' (COP) ನೀಡುತ್ತದೆ ಮತ್ತು ಅಪ್ರೆಂಟಿಸ್‌ಗಳು ಅದನ್ನು NATS 2.0 ಪೋರ್ಟಲ್‌ನಲ್ಲಿ ವಿದ್ಯಾರ್ಥಿ ಲಾಗಿನ್ ಅಡಿಯಲ್ಲಿ ಡೌನ್‌ಲೋಡ್ ಮಾಡಬಹುದು.
ಹೆಚ್ಚಿನ ವಿವರಗಳಿಗೆ: https://www.indianbank.in/career ಅಥವಾ https://Nats.education.gov.in ಸಂಪರ್ಕಿಸಿ.