ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಜ್ಯದ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1,425 ಹುದ್ದೆ; ಕನ್ನಡದಲ್ಲೇ ಪರೀಕ್ಷೆ ಬರೆಯಿರಿ

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ದೇಶದಾದ್ಯಂತ 28 ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿಯಿರುವ 13,217 ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1,425 ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 21 ಅರ್ಜಿ ಸಲ್ಲಿಕೆಗೆ ಕೊನೆ ದಿನ.

  • ಆರ್.ಕೆ. ಬಾಲಚಂದ್ರ

ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ(IBPS) ದೇಶದಾದ್ಯಂತ 28 ಗ್ರಾಮೀಣ ಬ್ಯಾಂಕ್‌ಗಳಲ್ಲಿ (RRB) ಖಾಲಿಯಿರುವ 13,217 ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ (Karnataka Grameena Bank Recruitment 2025). ಇದರಲ್ಲಿ ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 1425 ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 21 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ವಯೋಮಿತಿ

ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ 18ರಿಂದ 28 ವರ್ಷಗಳು. ಆಫೀಸರ್ ಸ್ಕೇಲ್-I ಹುದ್ದೆಗೆ 18 ರಿಂದ 30 ವರ್ಷಗಳು. ಆಫೀಸರ್ ಸ್ಟೇಲ್- II ಹುದ್ದೆಗೆ 21 ರಿಂದ 32 ವರ್ಷಗಳು ಹಾಗೂ ಆಫೀಸರ್ ಸ್ಟೇಲ್ - III ಹುದ್ದೆಗೆ 21 ರಿಂದ 40 ವರ್ಷದೊಳಗಿರಬೇಕು. ಎಸ್.ಸಿ ಮತ್ತು ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯ ಸಡಿಲಿಕೆ ಇದೆ.

ಅರ್ಹತೆಗಳೇನು?

ಶೈಕ್ಷಣಿಕ ಅರ್ಹತೆ ಮತ್ತು ಅನುಭವ: Group B ಆಫೀಸ್ ಅಸಿಸ್ಟೆಂಟ್ ಹುದ್ದೆ: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸ್ಥಳೀಯ ಭಾಷೆ ತಿಳಿದಿರುವುದು ಅವಶ್ಯಕ. ಕಂಪ್ಯೂಟರ್ ನಿರ್ವಹಣಾ ಜ್ಞಾನ ಹೊಂದಿರುವುದು ಕಡ್ಡಾಯ.

Group A ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ): ಯಾವುದೇ ವಿಷಯದಲ್ಲಿ ಪದವಿ. ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಅಥವಾ ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವವರಿಗೆ ಆದ್ಯತೆ. ಆದರೆ ಸ್ಥಳೀಯ ಭಾಷೆ ತಿಳಿದಿರಬೇಕಾದುದು ಅವಶ್ಯಕ. ಕಂಪ್ಯೂಟರ್ ನಿರ್ವಹಣಾ ಜ್ಞಾನ ಕಡ್ಡಾಯ.

Group A-ಸ್ಕೇಲ್–II ಅಧಿಕಾರಿಗಳು:

  • ವ್ಯವಸ್ಥಾಪಕರು (General Banking): ಯಾವುದೇ ವಿಷಯದಲ್ಲಿ ಶೇ. 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಬ್ಯಾಂಕಿಂಗ್, ಹಣಕಾಸು, ಮಾರುಕಟ್ಟೆ, ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ. ಜತೆಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
  • ಸ್ಪೆಷಲ್ ಆಫೀಸರ್ಸ್: ಇನ್‌ಫರ್ಮೇಷನ್ ಟೆಕ್ನಾಲಜಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಶೇ. 50 ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್ / ಕಮ್ಯುನಿಕೇಶನ್ / ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು. ಇದರ ಜತೆಗೆ, ASP, PHP, C++, Java, VB, VC, OCP ಸಾಫ್ಟ್ವೇರ್ ಕಲಿಕೆಯ ಪ್ರಮಾಣಪತ್ರ ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.
  • ಚಾರ್ಟೆಡ್ಅಕೌಂಟೆಂಟ್: ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಸರ್ಟಿಫೈಡ್ ಅಸೋಸಿಯೇಟ್ (CA) ಪದವಿ ಪಡೆದಿರುವುದು ಕಡ್ಡಾಯ. ಜತೆಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಒಂದು ವರ್ಷದ ಸೇವಾನುಭವ ಹೊಂದಿರಬೇಕು.
  • ಲಾ ಆಫೀಸರ್: ಶೇ. 50 ಅಂಕಗಳೊಂದಿಗೆ ಕಾನೂನು ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಎರಡು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು ಅಥವಾ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕಾನೂನು ಅಧಿಕಾರಿಯಾಗಿ ಸೇವಾನುಭವ ಹೊಂದಿರಬೇಕು.
  • ಟ್ರಶರಿ ಆಫೀಸರ್: ಹಣಕಾಸು ವಿಷಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಎಂಬಿಎ ಪದವಿ ಪಡೆದಿರಬೇಕು ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.
  • ಮಾರ್ಕೆಟಿಂಗ್ ಆಫೀಸರ್: ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಮತ್ತು ಒಂದು ವರ್ಷದ ಸೇವಾನುಭವ ಹೊಂದಿರಬೇಕು.
  • ಅಗ್ರಿಕಲ್ಚರ್ ಆಫೀಸರ್: ಈ ಹುದ್ದೆಗಳಿಗೆ ಕೃಷಿ/ತೋಟಗಾರಿಕೆ/ಹೈನುಗಾರಿಕೆ/ ಪಶುಸಂಗೋಪನೆ/ ಅರಣ್ಯಶಾಸ್ತ್ರ /ಪಶುವೈದ್ಯಕೀಯ ವಿಜ್ಞಾನ/ಕೃಷಿ ಎಂಜಿನಿಯರಿಂಗ್/ಮೀನುಗಾರಿಕೆ ವಿಷಯದಲ್ಲಿ ಶೇ 50 ಅಂಕಗಳೊಂದಿಗೆ ಪದವಿ ಪಡೆದಿರಬೇಕು ಮತ್ತು ಎರಡು ವರ್ಷದ ಸೇವಾನುಭವ ಹೊಂದಿರಬೇಕು.

ಪರೀಕ್ಷಾ ಪೂರ್ವ ತರಬೇತಿ

ಕಚೇರಿ ಸಹಾಯಕರ ಹುದ್ದೆಗೆ/ ಅಧಿಕಾರಿ ಸ್ಕೇಲ್-I ಹುದ್ದೆಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯಲು ಬಯಸುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರ ಹಿಂದುಳಿದ ವರ್ಗಗಳು/ ಅಲ್ಪಸಂಖ್ಯಾತ ಸಮುದಾಯಗಳು/ ಮಾಜಿ ಸೈನಿಕರು/ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಇತರ ಹಿಂದುಳಿದ ವರ್ಗಗಳು/ ಅಲ್ಪಸಂಖ್ಯಾತ ಸಮುದಾಯಗಳ ಹುದ್ದೆಗೆ ಅರ್ಹ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಆನ್ಲೈನ್ ವಿಧಾನದಲ್ಲಿ ಪೂರ್ವ ಪರೀಕ್ಷಾ ತರಬೇತಿಯನ್ನು ಏರ್ಪಡಿಸಬಹುದು ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ಸಂಬಂಧಿತ ಕಾಲಮ್ ಅನ್ನು ಭರ್ತಿ ಮಾಡಬೇಕು.ಪರೀಕ್ಷಾ ಪೂರ್ವ ತರಬೇತಿಗೆ ಹಾಜರಾಗುವುದರಿಂದ ಯಾವುದೇ ಅಭ್ಯರ್ಥಿಯು ಉಲ್ಲೇಖಿಸಲಾದ ಯಾವುದೇ ಭಾಗವಹಿಸುವ ಬ್ಯಾಂಕ್ಗಳಲ್ಲಿ ಆಯ್ಕೆಯಾಗುವ ಹಕ್ಕನ್ನು ಪಡೆಯುವುದಿಲ್ಲ.

ಇತ್ತ ಗಮನಿಸಿ

ಕ್ರೆಡಿಟ್ ಇತಿಹಾಸ:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಬ್ಯಾಂಕ್ ಖಾತೆ ಹೊಂದಿದ್ದರೆ, ಅವರು ಆರೋಗ್ಯಕರ ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು ಮತ್ತು ಬ್ಯಾಂಕ್ ಹುದ್ದೆಗೆ ನೇಮಕವಾಗುವ ಸಮಯದಲ್ಲಿ ಕನಿಷ್ಠ CIBIL ಸ್ಕೋರ್ ಅಥವಾ ಅದಕ್ಕಿಂತ ಹೆಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಸೇರುವ ದಿನಾಂಕದ ಮೊದಲು CIBIL ಸ್ಥಿತಿಯನ್ನು ನವೀಕರಿಸದಿದ್ದರೆ, ಮೊದಲು ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ NOC ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ / ರದ್ದುಗೊಳಿಸಲಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ ವಿಶೇಷ ಚೇತನರು / ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಬಾರಿಯ ಬದಲಾವಣೆಗಳೇನು?

ಈವರೆಗೆ ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆಯಲ್ಲಿ ನಿಗದಿಪಡಿಸಿದ ವಿಷಯಗಳಿಗೆ ಉತ್ತರ ಬರೆಯಲು ಒಟ್ಟು ಕಾಲಾವಕಾಶ ನೀಡುತ್ತಿದ್ದರು. ಉದಾ: ಪೂರ್ವಭಾವಿ ಪರೀಕ್ಷೆಯಲ್ಲಿ ರೀಸನಿಂಗ್ ಮತ್ತು ನ್ಯೂಮರಿಕಲ್ ಎಬಿಲಿಟಿಗೆ ಒಟ್ಟು 45 ನಿಮಿಷ ಸಂಯೋಜಿತ ಸಮಯ ಬರೆಯಲು ನೀಡುತ್ತಿದ್ದರು. ಆದರೆ, ಈ ವರ್ಷ ರೀಸನಿಂಗ್ ಮತ್ತು ನ್ಯೂಮರಿಕಲ್ ಎಬಿಲಿಟಿಗೆ ಕ್ರಮವಾಗಿ 25 ನಿಮಿಷ ಮತ್ತು 20 ನಿಮಿಷ ಎಂದು ಸಮಯವನ್ನು ವಿಂಗಡಿಸಿದ್ದಾರೆ. ಹಾಗೆಯೇ ಮುಖ್ಯ ಪರೀಕ್ಷೆಯಲ್ಲಿ ಐದು ವಿವಿಧ ವಿಷಯಗಳಿಗೆ ನೀಡುತ್ತಿದ್ದ 120 ನಿಮಿಷ ಸಮಯವನ್ನು ವಿಂಗಡಿಸಿ ಪ್ರತ್ಯೇಕ ಸಮಯ ನಿಗದಿಪಡಿಸಿದ್ದಾರೆ. ಹಾಗಾಗಿ ಅದಕ್ಕೆ ತಕ್ಕ ಹಾಗೆ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧರಾಗಬೇಕಾದ ಅನಿವಾರ್ಯತೆ ಇದೆ. ಈ ವರ್ಷ ಪರೀಕ್ಷೆಗೆ ಆಧಾರ್ ವೆರಿಫಿಕೇಶನ್ ಕೂಡ ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕನ್ನಡದಲ್ಲೇ ಪರೀಕ್ಷೆ ಬರೆಯಿರಿ

ಆಯಾ ರಾಜ್ಯದ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು. ಮ್ಯಾನೇಜರ್ ಹಾಗೂ ಆಫೀಸ್ ಅಸಿಸ್ಟೆಂಟ್ಗಳ ರಾಜ್ಯದ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು. ಇತರ ಭಾಷೆಗಳ ಪರಿಚಯವಿದ್ದರೆ ಬೇರೆ ರಾಜ್ಯಗಳ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಆದರೆ, ಅವುಗಳಿಗೆ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಮೇಲ್ಮಟ್ಟದ ಹುದ್ದೆಗಳಿಗೆ ಎರಡು ಹಂತದ ಹಾಗೂ ಉಳಿದವುಗಳಿಗೆ ಒಂದೇ ಹಂತದ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ.

ಸಂದರ್ಶನ

ಆಫೀಸರ್ ಸ್ಕೇಲ್-1, II ಹಾಗೂ III ರ ಹುದ್ದೆಗಳಿಗೆ 100 ಅಂಕಗಳಿಗಾಗಿ ಸಂದರ್ಶನ ನಡೆಸಲಾಗುತ್ತದೆ. ಎರಡೂ ಹಂತದ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಹೆಚ್ಚು ಅಂಕ ಗಳಿಸಿದವರನ್ನು ಆಯಾ ರಾಜ್ಯದ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು

  • ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದು.ಆದರೆ ಆಫೀಸರ್ ಕೇಡರ್‌ನಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.
  • ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯು ತನ್ನ ಕೈ ಬರಹದ ಪ್ರಮಾಣಪತ್ರವನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಅಪ್ ಲೋಡ್ ಮಾಡಬೇಕು. ಕ್ಯಾಪಿಟಲ್ ಲೆಟರ್ಸ್‌ನಲ್ಲಿ ಬರೆದ ಡಿಕ್ಲರೇಷನ್ ಮತ್ತು ಸಹಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
  • ಅರ್ಜಿ ಸಲ್ಲಿಕೆ, ಅಧಿಸೂಚನೆ ಕುರಿತ ಹೆಚ್ಚಿನ ಮಾಹಿತಿಗಾಗಿ www.ibps.in/ ಜಾಲತಾಣಕ್ಕೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: IBPS Recruitment 2025: ಬ್ಯಾಂಕ್‌ ಉದ್ಯೋಗಾರ್ಥಿಗಳಿಗೆ ಸಿಹಿ ಸುದ್ದಿ; ಬರೋಬ್ಬರಿ 13,217 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ IBPS

ಆಯ್ಕೆ ಹೇಗೆ?

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯ ಸ್ವರೂಪ ಹೇಗಿರುತ್ತದೆ ಎಂಬ ವಿವರಣೆ ಇಲ್ಲಿದೆ.

ಗಮನಿಸಿ

ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಪರೀಕ್ಷೆ ಬರೆಯುವವರು ಗಣಿತಕ್ಕೆ ಸಂಬಂಧಿಸಿದಂತೆ ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆ ಬರೆಯಬೇಕು ಹಾಗೂ ಅಧಿಕಾರಿ ಸ್ಕೇಲ್-I ಹುದ್ದೆಗಾಗಿ ಪರೀಕ್ಷೆ ಬರೆಯುವವರು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆ ಬರೆಯಬೇಕು.

ಸಮಯದ ಮಿತಿ ಅರಿಯಿರಿ

ಪರೀಕ್ಷಾ ಅವಧಿ ಒಟ್ಟು 45 ನಿಮಿಷಗಳು. ಹಾಗಾಗಿ 20 ನಿಮಿಷ ರೀಸನಿಂಗ್ ಪರೀಕ್ಷೆಗೂ ಹಾಗೂ 25 ನಿಮಿಷ ಗಣಿತ ಪರೀಕ್ಷೆಗೆ ನಿಗದಿಪಡಿಸಿದ್ದಾರೆ. ನಿಮ್ಮ ಅಭ್ಯಾಸದ ಕ್ರಮದ ಮೇಲೆ ಹಾಗೂ ನಿಮಗಿರುವ ವಿಷಯಗಳ ಸಾಮರ್ಥ್ಯದ ಮೇಲೆ ಸಮಯದ ಸದುಪಯೋಗ ಮಾಡಿಕೊಳ್ಳಬಹುದು.

ಹೇಗೆ ಭಿನ್ನವಾಗಿವೆ?

ಸಂಖ್ಯಾ ಸಾಮರ್ಥ್ಯ ಪರೀಕ್ಷೆಯು ಒಂದು ಮೂಲಭೂತ ಕೌಶಲ. ಇದರ ಮೂಲಕ ಸಂಖ್ಯೆಗಳ ವಿಷಯದಲ್ಲಿ ಅಭ್ಯರ್ಥಿಗಿರುವ ವೇಗ ಹಾಗೂ ನಿಖರತೆಯನ್ನು ಪರೀಕ್ಷಿಸಲಾಗುತ್ತದೆ. ಸಂಖ್ಯಾ ಸಾಮರ್ಥ್ಯ ಪರೀಕ್ಷೆಯಲ್ಲಿ, ಲೆಕ್ಕಾಚಾರದ ಸಾಮರ್ಥ್ಯ ಮತ್ತು ನಿಖರತೆಯನ್ನು ಸರಳ ಸಂಖ್ಯೆಯ ಪ್ರಶ್ನೆಗಳ ಮೂಲಕ ಪರೀಕ್ಷಿಸಲಾಗುತ್ತದೆ. ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ, ಪ್ರಶ್ನೆ ಅರ್ಥಮಾಡಿಕೊಳ್ಳುವುದರ ಜತೆಗೆ ಅದನ್ನ ಬಿಡಿಸಲು ಜ್ಞಾನದ ಮೂಲವನ್ನು (Basic concept) ಅನ್ವಯಿಸುವುದು ಮುಖ್ಯ ಉದ್ದೇಶವಾಗಿದೆ.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಬೀಜಗಣಿತ ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿರುವ ಪ್ರಶ್ನೆಗಳನ್ನು ಹೊಂದಿದೆ. ಇದರಲ್ಲಿ ಪ್ರಶ್ನೆಗಳನ್ನು ಬಿಡಿಸಲು ಅಭ್ಯರ್ಥಿಗಳು ತರ್ಕ ಮತ್ತು ಜ್ಞಾನವನ್ನು ಅನ್ವಯಿಸುವ ಅಗತ್ಯವಿದೆ.

ಕರ್ನಾಟಕದ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಇಂಗ್ಲಿಷ್ ಮತ್ತು ಹಿಂದಿ–ಇವುಗಳಲ್ಲಿ ಯಾವುದಾದರೊಂದು ಭಾಷೆಯ ಆಯ್ಕೆ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಭಾಷೆಯನ್ನು ಆಯ್ಕೆ ಮಾಡಿಕೊಂಡಿರಬೇಕು. ಅದೇ ಭಾಷೆಯಲ್ಲೇ ಪರೀಕ್ಷೆ ಬರೆಯಬೇಕು (ಪರೀಕ್ಷಾ ಸಂದರ್ಭದಲ್ಲಿ ಬದಲಾವಣೆಗೆ ಅವಕಾಶವಿಲ್ಲ)

ಗಮನಿಸಿ

ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್ ) ಪರೀಕ್ಷೆ ಬರೆಯುವವರು ಗಣಿತಕ್ಕೆ ಸಂಬಂಧಿಸಿದಂತೆ ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆ ಬರೆಯಬೇಕು ಹಾಗೂ ಅಧಿಕಾರಿ ಸ್ಕೇಲ್-I ಹುದ್ದೆಗಾಗಿ ಪರೀಕ್ಷೆ ಬರೆಯುವವರು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆ ಬರೆಯಬೇಕು.

ಕ್ಲಿಷ್ಟತೆಯ ಮಟ್ಟ

ಸಂಖ್ಯಾತ್ಮಕ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಳೀಕರಣ, ಸಂಖ್ಯಾ ಸರಣಿ, ಅಂಕಗಣಿತದ ಪ್ರಶ್ನೆಗಳು, ಬೀಜಗಣಿತದ ಪ್ರಶ್ನೆಗಳಿರುತ್ತವೆ. ಈ ಪರೀಕ್ಷೆ ಮೂಲಕ ಅಭ್ಯರ್ಥಿಗೆ ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಆ ಪ್ರಶ್ನೆಗಳಲ್ಲಿ ತಾರ್ಕಿಕ ಅಂಶವಿರುವುದಿಲ್ಲ.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ವಿಷಯದಲ್ಲಿ ತಾರ್ಕಿಕ ಅರ್ಹತೆ ಮತ್ತು ಸಂಖ್ಯೆಗಳೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದು ಎರಡೂ ವಿಷಯಗಳ ಸಂಯೋಜನೆ. ಇದರಲ್ಲಿ ಪ್ರಶ್ನೆಗಳು ತುಂಬಾ ಕಠಿಣವಾಗಿರುವುದಿಲ್ಲ, ಆದರೆ ಇವುಗಳನ್ನು ಬಿಡಿಸಲು ಹೆಚ್ಚು ಅಭ್ಯಾಸ ಮಾಡಿರಬೇಕು. ಆದ್ದರಿಂದ ನೀವು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಸಮಯವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಅರಿಯುವಿರಿ.

ಡೇಟಾ ಇಂಟರ್ ಪ್ರಿಟೇಷನ್ (DI) ಕುರಿತ ಪ್ರಶ್ನೆಗಳು ಸುಲಭವಾಗಿರುತ್ತವೆ. ಹಾಗಾಗಿ ಅವುಗಳನ್ನು ಮೊದಲು ಉತ್ತರಿಸಿ. ಈ ಪ್ರಶ್ನೆಗಳು ಚಿತ್ರಾತ್ಮಕ ವಿಶ್ಲೇಷಣೆ ಆಧಾರಿತವಾಗಿವೆ. ಸಾಂದರ್ಭಿಕವಾಗಿ, ಬೇಸಿಕ್ ಕೋ-ಆರ್ಡಿನೇಟ್ ಜ್ಯಾಮಿತಿ (ರೇಖೆಗಳು ಮತ್ತು ವಲಯಗಳು), ಮಾಪನಗಳಿಂದಲೂ ಕೆಲವು ಪ್ರಶ್ನೆಗಳು ಬರಬಹುದು. ಆದರೆ ಚಕ್ರ ಬಡ್ಡಿ(compound interest) ಕುರಿತ ಪ್ರಶ್ನೆಗಳು ಬಿಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಅವುಗಳನ್ನು ವಿಭಾಗದ ಕೊನೆಯಲ್ಲಿ ಬಿಡಿಸಬೇಕು.

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ, ಸಂಭವನೀಯತೆ, ಕ್ರಮಪಲ್ಲಟನೆ ಮತ್ತು ಸಂಯೋಜನೆ, ಡೇಟಾ ಸಮರ್ಪಕತೆ ಸರಾಸರಿ, ಶೇಕಡಾವಾರು, ಗುಣಾಕಾರ, ಭಾಗಾಕಾರ, ವರ್ಗ ಮೂಲಗಳು, A.P, G.P ಸೇರಿದಂತೆ ಸಂಖ್ಯಾ ಲೆಕ್ಕಾಚಾರದ ಪ್ರಶ್ನೆಗಳ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಸರಳ ಮತ್ತು ಚಕ್ರ ಬಡ್ಡಿ, ಲಾಭ/ನಷ್ಟ ಕುರಿತ ಪ್ರಶ್ನೆಗಳೂ ಇರುತ್ತವೆ. ಕೆಲಸದ ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಉದಾ: 3 ಜನರು ಒಂದು ಕೆಲಸವನ್ನು 5 ದಿನಗಳಲ್ಲಿ ಮಾಡಿದರೆ 7 ಜನರು ಆ ಕೆಲಸವನ್ನು ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಇಂಥವೂ ಇರುತ್ತವೆ.

ಋಣಾತ್ಮಕ ಮೌಲ್ಯಮಾಪನ ಇದೆ

ವಸ್ತುನಿಷ್ಠ ಮಾದರಿಯ ಪರೀಕ್ಷೆಗಳಲ್ಲಿಋಣಾತ್ಮಕ ಮೌಲ್ಯಮಾಪನ ಇದೆ. ಒಂದು ತಪ್ಪು ಉತ್ತರಕ್ಕೆ, ಅದಕ್ಕೆ ನಿಗದಿಪಡಿಸಿದ ಅಂಕಗಳಲ್ಲಿ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಪ್ರಶ್ನೆ ಖಾಲಿ ಬಿಟ್ಟರೆ, ಯಾವುದೇ ಅಂಕ ಕಳೆಯುವುದಿಲ್ಲ.ಎಲ್ಲ ಹಂತದ ಋಣಾತ್ಮಕ ಮೌಲ್ಯಮಾಪನದಲ್ಲೂ ಇದೇ ನಿಯಮ ಅನ್ವಯಿಸುತ್ತದೆ.

ಆಯ್ಕೆ ವಿಧಾನ

ಮೂರು ಹಂತದ ಹುದ್ದೆಗಳಿಗೆ ಆಯ್ಕೆ ಮಾಡುವಾಗ ಮುಖ್ಯ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು. ಪ್ರತಿ ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಆಧರಿಸಿ, ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ತಯಾರಿಸಲಾಗುತ್ತದೆ.

  • ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್) ಹುದ್ದೆಗೆ-ಮುಖ್ಯ ಪರೀಕ್ಷೆಯಲ್ಲಿ ಮಾತ್ರ ಪಡೆದ ಅಂಕಗಳನ್ನು ಅಂತಿಮ ಮೆರಿಟ್ ಪಟ್ಟಿಗಾಗಿ ಪರಿಗಣಿಸಲಾಗುತ್ತದೆ.
  • ಅಧಿಕಾರಿಗಳ ಹುದ್ದೆಗೆ ಸ್ಕೇಲ್-I–ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಸಂದರ್ಶನ ಮತ್ತು ಅಂತಿಮ ಮೆರಿಟ್ ಪಟ್ಟಿಗಾಗಿ ಶಾರ್ಟ್ಲಿಸ್ಟ್ ಮಾಡಲು ಪರಿಗಣಿಸಲಾಗುತ್ತದೆ.
  • ಅಧಿಕಾರಿಗಳ ಹುದ್ದೆಗೆ ಸ್ಕೇಲ್ II ಮತ್ತು ಸ್ಕೇಲ್ III - ಏಕ ಹಂತದ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸಂದರ್ಶನ ಮತ್ತು ಅಂತಿಮ ಮೆರಿಟ್ ಪಟ್ಟಿಗಾಗಿ ಶಾರ್ಟ್ಲಿಸ್ಟ್ ಮಾಡಲು ಪರಿಗಣಿಸಲಾಗುತ್ತದೆ.
  • ಸಂದರ್ಶನ (ಅಧಿಕಾರಿಗಳ ಹುದ್ದೆಗೆ ಮಾತ್ರ ಇದು ಅನ್ವಯಿಸುತ್ತದೆ (ಸ್ಕೇಲ್ I, II ಮತ್ತು III)
  • ಆಫೀಸರ್ಸ್ ಸ್ಕೇಲ್ I ಹುದ್ದೆಗೆ ಮುಖ್ಯ ಪರೀಕ್ಷೆಯಲ್ಲಿ ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳು ಮತ್ತು CRP RRBs-XIV ಅಡಿಯಲ್ಲಿ ಆಫೀಸರ್ಸ್ ಸ್ಕೇಲ್ II ಮತ್ತು III ಹುದ್ದೆಗೆ ಏಕ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಒಟ್ಟು ಅಂಕಗಳು 100. ಸಂದರ್ಶನದಲ್ಲಿ ಕನಿಷ್ಠ ಅರ್ಹತಾ ಅಂಕಗಳು ಸಾಮಾನ್ಯ ವರ್ಗಕ್ಕೆ ಶೇ 40. _ಎಸ್.ಸಿ/_ಎಸ್.ಟಿ/ಒಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 35. ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಸಂಯೋಜಿತ ಅಂತಿಮ ಸ್ಕೋರ್ ಅನ್ನು ತಯಾರಿಸಲಾಗುತ್ತದೆ.

'ಸಂಪಾದನಾ ವಿಂಡೋ'

ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮಾರ್ಪಡಿಸಲು/ಸರಿಪಡಿಸಲು 'ಸಂಪಾದನಾ ವಿಂಡೋ' ಸಹಾಯ ಮಾಡುತ್ತದೆ. ಆನ್‌ಲೈನ್‌ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದ ನಂತರ, ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ನಮೂನೆಯನ್ನು ಸರಿಪಡಿಸಲು/ಮಾರ್ಪಾಡು ಮಾಡಲು 2 ಅಥವಾ 3 ದಿನಗಳ ಸಂಪಾದನಾ ವಿಂಡೋವನ್ನು ಒದಗಿಸಲಾಗುತ್ತದೆ, ಇದರಲ್ಲಿ ಅಭ್ಯರ್ಥಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆನ್‌ಲೈನ್‌ ಅರ್ಜಿ ಡೇಟಾದಲ್ಲಿ ಅಗತ್ಯ ತಿದ್ದುಪಡಿಗಳು/ಬದಲಾವಣೆಗಳನ್ನು ಮಾಡಿದ ನಂತರ ಅರ್ಜಿಗಳನ್ನು ಮರು-ಸಲ್ಲಿಸಲು ಅನುಮತಿಸಲಾಗುತ್ತದೆ. ಸಂಪಾದನಾ ವಿಂಡೋದ ದಿನಾಂಕಗಳನ್ನು ಅಧಿಕೃತ IBPS ವೆಬ್‌ಸೈಟ್‌ನಲ್ಲಿ ತಿಳಿಸಲಾಗುತ್ತದೆ. ಕೇವಲ ವರ್ಗದಲ್ಲಿ(Category) ಮಾತ್ರ ಮಾರ್ಪಾಡು/ ತಿದ್ದುಪಡಿಗಳನ್ನು ಮಾಡಬಹುದು.