ಬೆಂಗಳೂರು: ಉಳಿಕೆ ಮೂಲ ವೃಂದದ ಒಟ್ಟು 505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ (VAO Exam Answer Key 2026) ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಪ್ರಕಟಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್ಸೈಟ್ನಲ್ಲಿ ಪರಿಷ್ಕೃತ ಕೀ ಉತ್ತರಗಳನ್ನು ಪಡೆಯಬಹುದಾಗಿದೆ.
ಈ ಹಿಂದೆ ಪ್ರಕಟಿಸಿದ್ದ ಕೀ ಉತ್ತರಗಳಿಗೆ ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಎರಡೂ ಪತ್ರಿಕೆಗಳ ಕೀ ಉತ್ತರಗಳನ್ನು ಇದೀಗ ಪ್ರಕಟಿಸಲಾಗಿದೆ. ಈ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.
ಉಳಿಕೆ ಮೂಲ ವೃಂದದ 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅ.04ರಂದು ರಾಜ್ಯದ ಒಟ್ಟು 1,037 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 4,11,656 ಅಭ್ಯರ್ಥಿಗಳ ಪೈಕಿ ಬೆಳಗಿನ ಸಾಮಾನ್ಯ ಜ್ಞಾನ ಪತ್ರಿಕೆಯನ್ನು 3,04,096 (ಶೇ 74ರಷ್ಟು) ಮಂದಿ ಬರೆದಿದ್ದು, ಮಧ್ಯಾಹ್ಮದ ನಿರ್ದಿಷ್ಟ ಪತ್ರಿಕೆಯನ್ನು 3,03,058 ಮಂದಿ ಬರೆದಿದ್ದರು. ಧಾರವಾಡದಲ್ಲಿ ಅತಿ ಹೆಚ್ಚು ಅಂದರೆ 60 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ವೆಬ್ ಕಾಸ್ಟಿಂಗ್ ಮೂಲಕ ಎಲ್ಲೆಡೆ ಬಿಗಿ ನಿಗಾ ವ್ಯವಸ್ಥೆ ಮಾಡಲಾಗಿತ್ತು.
ವಿಎಒ (RPC) ಪರೀಕ್ಷೆ ಕೀ ಉತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ https://cetonline.karnataka.gov.in/kea/vaorpc2026
