ದೆಹಲಿ ಕರ್ನಾಟಕ ಸಂಘದ ನಾಟಕೋತ್ಸವ: 'ಚಾರಿಟಿಯಾನ್ ಮೈಮ್' ಪ್ರಥಮ
ದೆಹಲಿ ಕರ್ನಾಟಕ ಸಂಘದ ನಾಟಕೋತ್ಸವದಲ್ಲಿ ದೆಹಲಿ ತುಳುಸಿರಿ ತಂಡವು ಪ್ರದರ್ಶಿಸಿದ 'ಚಾರಿಟಿಯಾನ್ ಮೈಮ್' ನಾಟಕವು 7 ತಂಡಗಳ ಪೈಕಿ ಪ್ರಥಮ ಸ್ಥಾನ ಗಳಿಸಿದೆ. ಜತೆಗೆ ಒಟ್ಟು 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಪ್ರಕಾಶ್ ಶೆಟ್ಟಿ ಉಳೆಪಾಡಿ ನಿರ್ದೇಶಿಸಿದ್ದಾರೆ.
-
Ramesh B
Oct 26, 2025 6:38 PM
ದೆಹಲಿ, ಅ. 26: ರಂಗಭೂಮಿಯಲ್ಲಿನ ಇತಿಹಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅದ್ಭುತ ಸಮ್ಮಿಲನಕ್ಕೆ ದೆಹಲಿ ಸಾಕ್ಷಿಯಾಗಿದೆ. ದೆಹಲಿ ಕರ್ನಾಟಕ ಸಂಘದ ನಾಟಕೋತ್ಸವದಲ್ಲಿ ದೆಹಲಿ ತುಳುಸಿರಿ ತಂಡವು ಪ್ರದರ್ಶಿಸಿದ 'ಚಾರಿಟಿಯಾನ್ ಮೈಮ್' ನಾಟಕವು 7 ತಂಡಗಳ ಪೈಕಿ ಪ್ರಥಮ ಸ್ಥಾನ ಗಳಿಸಿ, ಒಟ್ಟು 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಯಶಸ್ಸಿನ ಜತೆಗೆ, ನಾಟಕದ ತಾಂತ್ರಿಕ ಶ್ರೀಮಂತಿಕೆ ರಂಗಾಸಕ್ತರ ಗಮನ ಸೆಳೆದಿದೆ.

ಪ್ರಾಚೀನ ತುಳು ಭಾಷೆಯ ದಾಖಲೆ ಮತ್ತು ತಾಂತ್ರಿಕತೆ
ನಿರ್ದೇಶಕ ಮತ್ತು ನಾಟಕ ರಚನೆಗಾರ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರ ಸೃಷ್ಟಿಯಾದ ಈ ನಾಟಕ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಗ್ರೀಕ್ ನಾಟಕದ ಅಳಿದುಳಿದ ಪುಟಗಳ ಆಧಾರರದಲ್ಲಿ ಕಾಲ್ಪನಿಕವಾಗಿ ಬರೆದ ಕಥೆಯನ್ನು ಹೊಂದಿದೆ.
ಈ ನಾಟಕದ ವಿಶೇಷತೆಯೆಂದರೆ ಮೂಲ ಗ್ರಂಥದಲ್ಲಿ ಭಾರತದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಬಳಕೆಯಲ್ಲಿರುವ ತುಳು ಭಾಷೆಯ ಅತ್ಯಂತ ಪುರಾತನ ಕುರುಹುಗಳು ನಮೂದಾಗಿರುವುದು ಐತಿಹಾಸಿಕವಾಗಿ ಮಹತ್ವದ ವಿಷಯವಾಗಿದೆ.
ಈ ನಾಟಕದ ದೃಶ್ಯ ವಿನ್ಯಾಸ ಮತ್ತು ಪರಿಣಾಮಗಳನ್ನು ಹೆಚ್ಚಿಸಲು ನಿರ್ದೇಶಕರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡಿದ್ದು, ಇದು ರಂಗಭೂಮಿಯ ಪ್ರಯೋಗಾತ್ಮಕ ಹಂತದಲ್ಲಿ ಹೊಸ ಹೆಜ್ಜೆ ಎನಿಸಿಕೊಂಡಿದೆ. ನಾಟಕದ ಅನುಭವವನ್ನು ಹೆಚ್ಚಿಸಲು ಇತ್ತೀಚಿನ ಡಿಜಿಟಲ್ ಸಂಗೀತವನ್ನು ಬಳಸಲಾಗಿದೆ. ಹಿನ್ನೆಲೆಯಲ್ಲಿ ಪ್ರಾಜೆಕ್ಟರ್ ಪರದೆಗಳನ್ನು ಬಳಸಿ ವಿಶೇಷ ಪರಿಣಾಮಗಳನ್ನು ಸೃಷ್ಟಿಸಲಾಗಿದೆ. ಮಾತ್ರವಲ್ಲ ವಿಶೇಷ ಬೆಳಕಿನ ವ್ಯವಸ್ಥೆಯು ಮತ್ತಷ್ಟು ಜೀವ ತುಂಬಿ, ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬ ತಂದಿದೆ.
ಈ ಸುದ್ದಿಯನ್ನೂ ಓದಿ: Hayavadana: ಅಮೆರಿಕೆಯಲ್ಲೊಂದು ಅದ್ಭುತ ನಾಟಕ ‘ಹಯವದನ’
ಕಲಾವಿದರು
ಈ ನಾಟಕದಲ್ಲಿ ದೆಹಲಿ ತುಳು ಸಿರಿಯ ಹವ್ಯಾಸಿ ಕಲಾವಿದರಾದ ಅಕಾಂಕ್ಷಾ ವರ್ಮಾ, ಚೈತ್ರಾ ತೋಳ್ಪಾಡಿ, ಹಂಸಶ್ರೀ, ಹರ್ಷಿತಾ ಕುಶಾಲಪ್ಪ, ಹಿಮಾಂಶು, ಪೂಜಾ ರಾವ್, ಪ್ರಕಾಶ್ ಶೆಟ್ಟಿ ಉಳೆಪಾಡಿ, ರವಿ ಮೂಡುಬಿದಿರೆ, ಸತ್ಯನಾರಾಯಣ ನಾಯಕ್, ಶುಭಾ ದೇವಿಪ್ರಸಾದ್, ಸುಜಾತಾ, ತಿಲಕ್ ರಾಜ್, ಹಾಗೂ ವೈಷ್ಣವಿ ಅಭಿನಯಿಸಿದ್ದಾರೆ. ನೇಪಥ್ಯದಲ್ಲಿ ಬೆಳಕು- ಕಾರ್ತಿಕ್ ರೈ, ತಾಂತ್ರಿಕ ಸಹಕಾರ - ಸುಮಂತ್ ಆಚಾರ್ಯ. ಸಂಗೀತದಲ್ಲಿ ಶುಭಾ ದೇವಿಪ್ರಸಾದ್ ಮತ್ತು ಪೂಜಾ ರಾವ್ ಹಾಗೂ ನೃತ್ಯ ನಿರ್ದೇಶನದಲ್ಲಿ ಹರ್ಶಿತಾ ಕುಶಾಲಪ್ಪ ಸಹಕರಿಸಿದರು.

ಕಥಾವಸ್ತು: ತುಳು ನಾಡು ಮತ್ತು ಗ್ರೀಕ್ ಮಿಲನ
ನಾಟಕದ ಕಥೆಯು ಗ್ರೀಕ್ ಯುವತಿ ಚಾರಿಟಿಯಾನ್ ಸುತ್ತ ಹೆಣೆಯಲ್ಪಟ್ಟಿದೆ. ಅವಳು ತನ್ನ ಸಹೋದರನೊಂದಿಗೆ ಭಾರತದ ಪಶ್ಚಿಮ ಕರಾವಳಿ (ತುಳು ನಾಡು) ಪ್ರದೇಶಕ್ಕೆ ಬಂದಾಗ ಆದ ಅನುಭವಗಳು, ಅವಳನ್ನು ಸೆರೆಹಿಡಿದ ಸ್ಥಳೀಯ ರಾಜನ ಆಕರ್ಷಣೆ ಮತ್ತು ಅವಳನ್ನು ರಕ್ಷಿಸಲು ಸಹೋದರ ಮತ್ತು ಆತನ ಗೆಳೆಯ ರಾಜನ ಆಸ್ಥಾನದಲ್ಲಿ ಮಾಡುವ ಹಾಸ್ಯದ ಪ್ರಯತ್ನಗಳು, ಭಾರತೀಯ ಮತ್ತು ಗ್ರೀಕ್ ನೃತ್ಯಗಳ ಜುಗಲ್ಬಂದಿ, ತುಳುನಾಡಿನ ಬುಡಕಟ್ಟು ಜನಾಂಗದಲ್ಲಿನ ಮಹಿಳಾ ಪ್ರಾಬಲ್ಯತೆ ಮುಂತಾದವು ನಾಟಕದ ಮುಖ್ಯ ಆಕರ್ಷಣೆ.
ಈ ನಾಟಕವು ಪ್ರಾಚೀನ ಗ್ರೀಸ್ ಮತ್ತು ಭಾರತದ ನಡುವಿನ ವ್ಯಾಪಾರ, ಸಾಂಸ್ಕೃತಿಕ ವಿನಿಮಯದ ಸಂಬಂಧಗಳೊಂದಿಗೆ ಹೆಣೆದುಕೊಂಡಿದ್ದ ಜಗತ್ತಿನ ಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದೆ.