ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯಕ್ಕೆ ಮತ್ತೆ CWMA ಶಾಕ್‌: ತಮಿಳುನಾಡಿಗೆ 15 ದಿನಗಳವರೆಗೆ 3,000 ಕ್ಯೂಸೆಕ್‌ ಕಾವೇರಿ ನೀರು ಹರಿಸಲು ಸೂಚನೆ

Cauvery Water Dispute: ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಆ ಮೂಲಕ ಬರದಿಂದ ತತ್ತರಿಸಿರುವ ಕರ್ನಾಟಕ್ಕೆ ಮತ್ತೊಂದು ಬರೆ ಎಳೆದಂತಾಗಿದೆ. ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಈ ಹಿಂದೆ ಸಿಡಬ್ಲ್ಯುಎಂಎ ಆದೇಶ ನೀಡಿದ್ದ ಹಿನ್ನೆಲೆ, ನೀರಿನ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್​​ಗೆ ಇಳಿಸುವಂತೆ ಕರ್ನಾಟಕ ಇತ್ತೀಚೆಗಷ್ಟೇ ಮನವಿ ಮಾಡಿತ್ತು.

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 8: ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು (CWMA) ಕರ್ನಾಟಕಕ್ಕೆ ಮತ್ತೊಂದು ಶಾಕ್‌ ನೀಡಿದೆ. ಮುಂದಿನ 15 ದಿನಗಳವರೆಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸೂಚಿಸಿದೆ (Cauvery Water Dispute). ಮುಂಗಾರು ಕೈಕೊಟ್ಟಿದ್ದರಿಂದ ಮೊದಲೇ ಬರದಿಂದ ತತ್ತರಿಸಿರುವ ರಾಜ್ಯ ಈ ಸೂಚನೆಯಿಂದ ಇನ್ನಷ್ಟು ಕಂಗಾಲಾಗಿದೆ. ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್​​ ನೀರು ಹರಿಸುವಂತೆ ಈ ಹಿಂದೆ ಸಿಡಬ್ಲ್ಯುಎಂಎ ಆದೇಶ ನೀಡಿದ್ದ ಹಿನ್ನೆಲೆ, ನೀರಿನ ಪ್ರಮಾಣವನ್ನು 2 ಸಾವಿರ ಕ್ಯೂಸೆಕ್​​ಗೆ ಇಳಿಸುವಂತೆ ಕರ್ನಾಟಕ ಇತ್ತೀಚೆಗಷ್ಟೇ ಮನವಿ ಮಾಡಿತ್ತು. ಆದರೆ ಇದೀಗ ಮತ್ತೆ ರಾಜ್ಯಕ್ಕೆ ಹಿನ್ನಡೆಯಾಗಿದೆ.

ಕಾವೇರಿ ಕಣಿವೆಯ ಸುಮಾರು 47 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ತೀವ್ರ ಬರಗಾಲಕ್ಕೆ ಸಿಲುಕಿದೆ. ಆದಾಗ್ಯೂ ಪ್ರಸಕ್ತ ಜಲ ವರ್ಷದಲ್ಲಿ ಪ್ರಾಧಿಕಾರದ ಎಲ್ಲ ನಿರ್ದೇಶನಗಳನ್ನು ಕರ್ನಾಟಕ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದೆ.

Vishwavani Editorial: ಮತ್ತೆ ಕಾವೇರಿ ಅನ್ಯಾಯ

ʼʼತಮಿಳುನಾಡಿಗೆ ಅನುಕೂಲಕವಾಗುವ ಈಶಾನ್ಯ ಮಾನ್ಸೂನ್ ಸಾಮಾನ್ಯ ಅಥವಾ ಉತ್ತಮವಾಗಿರಲಿದ್ದು, ಅಲ್ಲಿ ಒಳಹರಿವು ಹೆಚ್ಚುವ ಸಾಧ್ಯತೆಯಿದೆ. ಈ ಎಲ್ಲ ವಾಸ್ತವಾಂಶಗಳ ಆಧಾರದ ಮೇಲೆ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಗಣನೀಯ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಸಾಧ್ಯವೇ ಇಲ್ಲದ ಇಕ್ಕಟ್ಟಿನಲ್ಲಿ ರಾಜ್ಯವಿದೆ. ಆದ್ದರಿಂದ ಪ್ರಾಧಿಕಾರವು ತನ್ನ ಹಿಂದಿನ ನಿರ್ಧಾರವನ್ನು ಮರುಪರಿಶೀಲಿಸಿ, ಬಿಳಿಗುಂಡ್ಲುವಿನಲ್ಲಿ ಹರಿಸಬೇಕಾದ ನೀರಿನ ಪ್ರಮಾಣವನ್ನು ದಿನಕ್ಕೆ 2,000 ಕ್ಯುಸೆಕ್‌ಗೆ ಇಳಿಸುವ ಮೂಲಕ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಪ್ರಾಧಿಕಾರಕ್ಕೆ ವಿನಂತಿಸಲಾಗಿದೆʼʼ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದರು.

ತಮಿಳುನಾಡಿನ ಬೇಡಿಕೆ ಏನು?

ಮೆಟ್ಟೂರು ಜಲಾಶಯದಲ್ಲಿ ಸದ್ಯ 55.4 ಟಿಎಂಸಿ ಅಡಿ ನೀರಿದೆ. ಈಶಾನ್ಯ ಮಾನ್ಸೂನ್‌ನ ಸುಮಾರು 45 ದಿನಗಳವರೆಗೆ ಸಾಂಬಾ ಕೃಷಿ ಉಳಿಸಿಕೊಳ್ಳಲು ಗಣನೀಯ ಪ್ರಮಾಣದ ನೀರು ಬೇಕಾಗುತ್ತದೆ. ಸಂಕಷ್ಟದ ವರ್ಷಗಳಲ್ಲಿ ಕರ್ನಾಟಕವು ಬಿಳಿಗುಂಡ್ಲು ಮೂಲಕ ಇಲ್ಲಿಯವರೆಗೆ 50.33 ಟಿಎಂಸಿ ಅಡಿ ಹರಿಸಬೇಕಿತ್ತು. ಆದರೆ ಕೇವಲ 34.32 ಟಿಎಂಸಿ ಅಡಿ ಹರಿಸಿ ಅನ್ಯಾಯವೆಸಗಿದೆ. ಕರ್ನಾಟಕದಲ್ಲಿ ಜಲಸಂಕಷ್ಟ ತೀವ್ರವಾಗಿದೆ ಎಂಬುದು ಸುಳ್ಳು. ಹೀಗಾಗಿ ಹಳೆ ಬಾಕಿ ಹಾಗೂ ಈ ತಿಂಗಳಿನ ಪಾಲಿನ ನೀರನ್ನು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಸೆಪ್ಟೆಂಬರ್‌ನಲ್ಲಿ ಮನವಿ ಮಾಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿದೆ ಚೆಂಡು

ಕಾವೇರಿ ಜಲ ವಿವಾದ ಸಂಬಂಧ ಸುಪ್ರೀಂ ಕೋರ್ಟ್​​ನಲ್ಲಿಯೂ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಈ ಹಿಂದೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ಮುಂದಿನ ವಿಚಾರಣೆ ಅಕ್ಟೋಬರ್ 12ಕ್ಕೆ ನಿಗದಿಪಡಿಸಿದೆ.

ಕಾವೇರಿ ನೀರು ಹರಿವು 2,000 ಕ್ಯುಸೆಕ್‌ಗೆ ಇಳಿಸಲು ಸಿಡಬ್ಲ್ಯೂಎಂಎಗೆ ಕರ್ನಾಟಕ ಮನವಿ

ಮುಂಗಾರು ಕೊರತೆ

ಎಲ್‌ ನೀನೊ ಪ್ರಭಾವದಿಂದ ಸದ್ಯ ಕರ್ನಾಟಕ ಸೇರಿ ದೇಶದ ಬಹುತೇಕ ಕಡೆಗಳಲ್ಲಿ ಮುಂಗಾರು ಕೊರತೆ ಎದುರಾಗಿದೆ. ಹಲವು ಕಡೆಗಳಲ್ಲಿ ಕೃಷಿಯ ಮೇಲೂ ಪರಿಣಾಮ ಬೀರಿದೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author