ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯಕ್ಷಗಾನದಲ್ಲಿ ʼರಾಮಾಯಣʼಕ್ಕೆ ಅವಮಾನ? ವಿವಾದದ ಬೆನ್ನಲ್ಲೇ ʼವಿಶ್ವವಾಣಿʼಗೆ ಕಲಾವಿದ ದಿನೇಶ್‌ ಕೋಡಪದವು ಫಸ್ಟ್‌ ರಿಯಾಕ್ಷನ್‌

Yakshagana Controversy: ದಕ್ಷಿಣ ಕನ್ನಡದ ಜನಪ್ರಿಯ ಬಪ್ಪನಾಡು ಮೇಳದ ತುಳು ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದ ದಿನೇಶ್‌ ಕೋಡಪದವು ಹಿಂದೂಗಳ ಪವಿತ್ರ ಮಹಾಕಾವ್ಯ ʼರಾಮಾಯಣʼವನ್ನು ತಿರುಚಿದ್ದಲ್ಲದೆ ರಾಮನನ್ನು ಅವಮಾನಿಸಿದ್ದಾರೆ ಎನ್ನುವ ವಿಚಾರ ಸದ್ಯ ಸಂಚಲನ ಮೂಡಿಸಿದೆ. ಇದೀಗ ಅವರು ʼವಿಶ್ವವಾಣಿ ಟಿವಿʼ ಯೂಟ್ಯೂಬ್‌ ಚಾನೆಲ್‌ ಜತೆ ಮಾತನಾಡಿಸ್ಪಷ್ಟನೆ ನೀಡಿದ್ದಾರೆ.

ಯಕ್ಷಗಾನದ ದೃಶ್ಯ. ಒಳಚಿತ್ರದಲ್ಲಿ ದಿನೇಶ್‌ ಕೋಡಪದವು

ಮಂಗಳೂರು, ಏ. 21: ದಕ್ಷಿಣ ಕನ್ನಡದ ಜನಪ್ರಿಯ ಬಪ್ಪನಾಡು ಮೇಳದ (Bappanadu Mela) ತುಳು ಯಕ್ಷಗಾನ ಪ್ರದರ್ಶನದ ವೇಳೆ ಹಾಸ್ಯ ಕಲಾವಿದ ದಿನೇಶ್‌ ಕೋಡಪದವು ಹಿಂದೂಗಳ ಪವಿತ್ರ ಮಹಾಕಾವ್ಯ ʼರಾಮಾಯಣʼವನ್ನು ತಿರುಚಿದ್ದಲ್ಲದೆ ರಾಮನನ್ನು ಅವಮಾನಿಸಿದ್ದಾರೆ ಎನ್ನುವ ವಿಚಾರ ಸದ್ಯ ಸಂಚಲನ ಮೂಡಿಸಿದೆ. ಅವರು ವೇದಿಕೆಯಲ್ಲಿ ʼಬನತ್ತ ಬಂಗಾರʼ ಯಕ್ಷಗಾನ ಪ್ರದರ್ಶನದ ವೇಳೆ ಹೇಳಿದ ಈ ವಿವಾದಾತ್ಮಕ ಸಂಭಾಷಣೆಯನ್ನೊಳಗೊಂಡ ಹಳೆ ವಿಡಿಯೊದ ತುಣುಕೊಂದು ವೈರಲ್‌ ಆಗಿದೆ. ಇದರ ಬೆನ್ನಲ್ಲೇ ʼವಿಶ್ವವಾಣಿ ಟಿವಿʼ ಯೂಟ್ಯೂಬ್‌ ಚಾನೆಲ್‌ ಜತೆ ಮಾತನಾಡಿದ ದಿನೇಶ್‌ ಕೋಡಪದವು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ತಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎಂದು ತಿಳಿಸಿದ್ದಾರೆ.

ʼʼಈ ಒಂದು ತುಣುಕು ಇಟ್ಟುಕೊಂಡು ಯಾರು ವಿವಾದ ಸೃಷ್ಟಿಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಸುಮಾರು 10 ವರ್ಷಗಳ ಹಿಂದಿನ ಈ ವಿಡಿಯೊವನ್ನು ಮತ್ತೆ ಮುನ್ನಲೆಗೆ ತಂದಿರುವ ಹಿಂದಿನ ಉದ್ದೇಶದ ಅರಿವೂ ನನಗಿದೆʼʼ ಎಂದು ಅವರು ಹೇಳಿದ್ದಾರೆ.

ದಿನೇಶ್‌ ಕೋಡಪದವು ಅವರ ಸ್ಪಷ್ಟನೆ ಇಲ್ಲಿದೆ:



ದಿನೇಶ್‌ ಕೋಡಪದವು ಹೇಳಿದ್ದೇನು?

ʼʼರಂಗಸ್ಥಳದಲ್ಲಿ ನಾನು ವೇಷ ಹಾಕಿ ಆಡಿರುವ ಸಂಭಾಷಣೆ ಅದು. ಅದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ. ಪಾತ್ರಕ್ಕೆ ತಕ್ಕಂತೆ ನಾವು ಮಾತನಾಡಬೇಕಾಗುತ್ತದೆ. ಅದನ್ನೇ ನಾನು ಮಾಡಿದ್ದೇನೆ. ಯಕ್ಷಗಾನದಲ್ಲಿ ಒಂದೊಂದು ಕಥೆ ಇರುತ್ತದೆ. ಕಥೆಯಲ್ಲಿ ಆ ಪಾತ್ರ ಯಾವುದು ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ನನ್ನದು ಅದೊಂದು ಪೆದ್ದನ ಪಾತ್ರವಾಗಿತ್ತು. ಆ ಸಂಭಾಷಣೆಯ ಬಳಿಕ ಬೇರೆ ಪಾತ್ರ ಬಂದು ನನ್ನ ತಪ್ಪನ್ನು ಸರಿ ಪಡಿಸುತ್ತದೆ. ಆದರೆ ಇದನ್ನು ತೋರಿಸದೆ ನನ್ನ ಪಾತ್ರ ʼರಾಮಾಯಣʼದ ವಿರುದ್ಧ ಮಾತನಾಡಿರುವುದನ್ನಷ್ಟೇ ತೋರಿಸಿ ವಿವಾದ ಹುಟ್ಟು ಹಾಕಲು ಯತ್ನಿಸಿದ್ದಾರೆʼʼ ಎಂದು ತಿಳಿಸಿದ್ದಾರೆ.

ʼʼಬಣ್ಣ ತೆಗೆದರೆ ನನಗೆ ʼರಾಮಾಯಣʼ ಏನು ಅಂತ ಗೊತ್ತು. ರಾಮ ಯಾರು, ಸೀತೆ ಯಾರು, ರಾವಣ ಏನು ಮಾಡಿದ ಎನ್ನುವ ಎಲ್ಲ ವಿವರ ನನಗೆ ಗೊತ್ತುಂಟು. ಈ ಯಕ್ಷಗಾನ ಪ್ರದರ್ಶನ ಆಗಿ ಸುಮಾರು 11 ವರ್ಷವೇ ಕಳೆದಿದೆʼʼ ಎಂದಿದ್ದಾರೆ.

ಒಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಭಾರತೀಯರಿಂದ ಯಕ್ಷಗಾನ- ನೃತ್ಯದ ಸ್ವಾಗತ

ವೈರಲ್‌ ಹಿಂದಿನ ಕಾರಣ ಇದು

ಯಾಕಾಗಿ ಈಗ ಈ ವಿಡಿಯೊ ತುಣುಕು ಹರಿಯಬಿಟ್ಟಿದ್ದಾರೆ ಎನ್ನುವ ಬಗ್ಗೆ ದಿನೇಶ್‌ ವಿವರಿಸಿದ್ದಾರೆ. ʼʼಉಜಿರೆಯ ಮಹೇಶ್‌ ಎನ್ನುವ ವ್ಯಕ್ತಿ ಕೆಲವು ದಿನಗಳ ಹಿಂದೆ ನನ್ನ ಸಹಕಲಾವಿದ ಪ್ರಜ್ವಲ್‌ಗೆ ಕರೆ ಮಾಡಿ ಬಯ್ದಿದ್ದಾರೆ. ನಮ್ಮ ಮನೆಯವರ ಬಗ್ಗೆ ಇಲ್ಲದ ಸಲ್ಲದ ಮಾತು ಆಡಿದ್ದಾರೆ. ನಾವು ಯಕ್ಷಗಾನವೊಂದಕ್ಕೆ ʼಬುರುಡೆ ಗ್ಯಾಂಗ್‌ʼ ಎನ್ನುವ ಹೆಸರಿಟ್ಟಿದ್ದು ಅವರ ದ್ವೇಷಕ್ಕೆ ಕಾರಣ. ಅವರು ಬಯ್ದಿದಕ್ಕೆ ಎಫ್‌ಐಆರ್‌ ದಾಖಲಿಸಿದ್ದೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಅವರಿಗೆ ತಿರುಗೇಟು ನೀಡಿದ್ದೇವೆ. ಅಲ್ಲಿಗೆ ಆ ವಿಚಾರ ಮುಗಿಯಿತು ಎಂದುಕೊಂಡಿದ್ದೆವು. ಆದರೆ ಅವರು ಅದನ್ನು ಅಲ್ಲಿಗೆ ನಿಲ್ಲಿಸಿಲ್ಲ. ನಮ್ಮ ತೇಜೋವಧೆ ಮಾಡುವ ಉದ್ದೇಶದಿಂದ ಅವರಿಗೆ ಅಗತ್ಯವಿರುವ ಭಾಗವನ್ನಷ್ಟೇ ಎಡಿಟ್‌ ಮಾಡಿ ಹರಿಯಬಿಟ್ಟಿದ್ದಾರೆ. ಅವರು ಬೈಯ್ದಿರುವ ಆಡಿಯೊ ಕ್ಲಿಪ್‌ ಅನ್ನು ನಾವು ಮಾಧ್ಯಮದವರಿಗೆ ನೀಡಿದ್ದೇವೆ. ಆ ದ್ವೇಷಕ್ಕೂ ಇದನ್ನೆಲ್ಲ ಮಾಡುತ್ತಿದ್ದಾರೆʼʼ ಎಂದು ವಿವರಿಸಿದ್ದಾರೆ.

ಸುಚಿತ್ರಾ ತಾಳಕ್ಕೆ ತಕ್ಕಂತೆ ಕುಣಿದ ಜ್ಯೋತಿಷಿ ಕಮಲಾಕರ್‌ ಭಟ್‌; ಯಕ್ಷಗಾನ ನೃತ್ಯದ ವಿಡಿಯೊ ವೈರಲ್‌

ʼಬನತ್ತ ಬಂಗಾರʼ ಪ್ರಸಂಗ

ʼʼಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಪೂರ್ತಿ ಯಕ್ಷಗಾನ ನೋಡಿದರೆ ನನ್ನ ಪಾತ್ರ ʼರಾಮಾಯಣʼವನ್ನು ಯಾಕೆ ಆ ರೀತಿ ಹೇಳುತ್ತಿದೆ ಎನ್ನುವುದು ತಿಳಿಯುತ್ತದೆ. ಈ ಪಾತ್ರ ಕೊನೆಯಲ್ಲಿ ಕ್ಷಮೆ ಕೋರುವ ಸನ್ನಿವೇಶವೂ ಇದೆ. ನಾನು ವೈಯಕ್ತಿಕವಾಗಿ ದೇವರನ್ನು ನಂಬುವವನು. ನಮ್ಮ ಮನೆಯಲ್ಲಿ ಭಜನೆ ಮಾಡುತ್ತೇವೆ. ಮನೆಯ ತುಂಬ ರಾಮನ ಫೋಟೊಗಳಿವೆ. ಇದು ನನ್ನ ಯಾವುದೇ ವೈಯಕ್ತಿಕ ವಿಚಾರವಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಈ ವಿಡಿಯೊ ವೈರಲ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆʼʼ ಎಂದು ಎಚ್ಚರಿಸಿದ್ದಾರೆ.

ಎಡಿಟೆಡ್‌ ವಿಡಿಯೊದಲ್ಲಿ ಏನಿದೆ?

ವೈರಲ್‌ ಆದ ವಿಡಿಯೊದಲ್ಲಿ ಆತ ರಾಮಾಯಣದ ಬಗ್ಗೆ ಹೇಳಿರುವುದು ಕಂಡು ಬಂದಿದೆ. ಅದರಲ್ಲಿ ಅವರು, ʼʼರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಗ ಕಾಗೆ ಅಡ್ಡ ಬಂತು. ಆಗ ರಾವಣ ಅದರ ಬಾಲವನ್ನು ಕತ್ತರಿಸಿದʼʼ ಎಂದು ಹೇಳಿದ್ದಾರೆ. ಅಲ್ಲದೆ, ʼʼರಾವಣ ಸೀತೆಯನ್ನು ಅಪಹರಿಸಿದ. ಹಾಗಾದರೆ ರಾವಣನ ಪತ್ನಿ ರಾಮನಿಗೆ ಆಗುದಿಲ್ಲವೆ?ʼʼ ಎಂದು ಕೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author