ಸಂಡೂರು: ತಾಲೂಕಿನ ಎಸ್ಆರ್ಎಸ್ ವಸತಿ ಶಾಲೆಯ ಡೈಮಂಡ್ ಜುಬಿಲಿ ಹಾಲ್ನಲ್ಲಿ ಗಣಿ ಸುರಕ್ಷತಾ ಸಂಘ ಕರ್ನಾಟಕ ವಲಯ-1 ಮತ್ತು ದಿ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಒರ್ಸ್ ಲಿಮಿಟೆಡ್, ಬೆಂಗಳೂರಿನ ದಕ್ಷಿಣ ವಲಯದ ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯ ಹಾಗೂ ಬಳ್ಳಾರಿ ವಲಯ- 1 ಸಹಯೋಗದಲ್ಲಿ 58ನೇ ಗಣಿ ಸುರಕ್ಷತಾ ಸಪ್ತಾಹದ ಆಚರಣೆ ಹಾಗೂ ವಲಯ ಮಟ್ಟದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಸ್ಮಯೋರ್ ಸಂಸ್ಥೆಯ ಬಹಿರ್ಜಿ ಎ ಘೋರ್ಪಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಉದ್ಯಮದಲ್ಲಿ ಸುರಕ್ಷತಾ ಮಾನದಂಡಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಿರಂತರ ಮಾರ್ಗದರ್ಶನ ಮತ್ತು ನಾಯಕತ್ವವನ್ನು ಡಿಜಿಎಂಎಸ್ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಬೆಂಗಳೂರಿನ ದಕ್ಷಿಣ ವಲಯ ಗಣಿ ಸುರಕ್ಷತಾ ಉಪನಿರ್ದೇಶಕ ಸೈಫುಲ್ಲಾ ಅನ್ಸಾರಿ ಮಾತನಾಡಿ, ಭಾರತೀಯ ಗಣಿಗಾರಿಕೆ ವಲಯದಲ್ಲಿ ‘ಸುರಕ್ಸತಾ ಸಪ್ತಾಹʼ ದ ಇತಿಹಾಸ 1960 ರಿಂದ ಪ್ರಾರಂಭವಾಯಿತು. 1963 ರಲ್ಲಿ ಚೈಬಾಸಾ ಹಾಗೂ ಎಂ.ಎಸ್.ಎ.ಕೆ ಮುಂತಾದೆಡೆ ಆಯೋಜನೆಗೊಂಡಿತು ಎಂದು ಹೇಳಿದರು.
1960 ರ ಹೊತ್ತಿಗೆ ಕಾರ್ಯಸ್ಥಳದಲ್ಲಿನ ಅಪಘಾತಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಕೇವಲ ಶಾಸನಬದ್ಧ ಕಾನೂನುಗಳು ಮಾತ್ರ ಸಾಕಾಗುವುದಿಲ್ಲ ಎಂಬ ಅರಿವು ಮೂಡಿತು. ಹೀಗಾಗಿ ತಳಮಟ್ಟದಲ್ಲಿ ಸುರಕ್ಷತಾ ಸಂಸ್ಕೃತಿಯನ್ನು ಬೆಳೆಸಲು, ಸಹೋದ್ಯೋಗಿಗಳಿಂದ ಪರಿಶೀಲನೆಗಳನ್ನು ನಡೆಸಲು ಮತ್ತು ಕಾರ್ಮಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸಲು ‘ಗಣಿ ಸುರಕ್ಷತಾ ಸಪ್ತಾಹʼ ಅಂತಹ ವಾರ್ಷಿಕ ಕಾರ್ಯಕ್ರಮಗಳನ್ನು ಪರಿಚಯಿಸಲಾಯಿತು ಎಂದು ಹೇಳಿದರು.
ಭವಿಷ್ಯದಲ್ಲಿ ಅಪಘಾತವನ್ನು ತಡೆಗಟ್ಟುವ ಒಂದು ಹೆಜ್ಜೆಯಾಗಿ, ಕಾರ್ಮಿಕರು ಮತ್ತು ಮೇಲ್ಚಿಚಾರಕರಲ್ಲಿ ಕಲೆ/ತರಬೇತಿ ಅರಿವುಗಾಗಿ ಅಪಘಾತದ ಸನ್ನಿವೇಶ ಅನುಕರಿಸುವ ಅನಿಮೇಟೆಡ್ ವಿಡೀಯೊಗಳು/ಎಐ ವಿಡಿಯೊಗಳನ್ನು ಅಭಿವೃದ್ದಿಪಡಿಸಲು ಎಂ.ಎಸ್.ಎ.ಕೆ ಯು ತೆಗೆದುಕೊಂಡು ಉಪಕ್ರಮ ಶ್ಲಾಘನೀಯ. ಇದು ಭವಿಷ್ಯದ ಭಂಡಾರವೂ ಸಹ ಆಗಿದೆ ಎಂದು ತಿಳಿಸಿದರು.
ಇಆರ್ಎಂ ಸಮೂಹ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಪ್ರವೀಣ್ ಚಂದ್ರ, ಗಣಿ ಸುರಕ್ಷತಾ ನಿರ್ದೇಶಕರಾದ ಕೃಷ್ಣೇಂದು ಮಂಡಲ್, ಎಂ. ಆರ್ಮುಗಂ, ಜಿ. ನರಸಿಂಹರಾವ್, ದಿ. ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಒರ್ಸ್ ಲಿಮಿಟೆಡ್ ಅಸೋಸಿಯೇಟೆ ವೈಸ್ ಪ್ರಸಿಡೆಂಟ್ ಪಾರ್ಥಿಪನ್, ಎಂ.ಎಸ್.ಪಿ.ಎಲ್. ಲಿಮಿಟೆಡ್ ಸಿಇಒ ಮಧುಸೂದನ, ಸ್ಮಯೋರ್ ಸಂಸ್ಥೆ ಅಧಿಕಾರಿ ದೀಪಕ್ ಅನಿಲ್ ಕುಕ್ಕೆ ಇದ್ದರು. ಇದೇ ಸಂದರ್ಭದಲ್ಲಿ ಗಣಿಗಾರಿಕೆ ಸುರಕ್ಷತೆಯ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಮಯೋರ್ ಸಂಸ್ಥೆಯ ಬಚಲಪ್ಪ, ಅಕ್ಷತಾ ಗುರುರಾಜ್ ನಿರ್ವಹಿಸಿದರು.