ಸಂಡೂರು, ನ. 8: ದೀಪಾವಳಿ ಎಂದರೆ ಬೆಳಕಿನ ಹಬ್ಬ, ಸಂಭ್ರಮದ ಹಬ್ಬ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ , ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು ವಾಡಿಕೆ. ಆದರೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು, ಹಬ್ಬದ ಸಂಭ್ರಮದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಮೆರೆಯುವ ಮೂಲಕ ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ದೀಪಾವಳಿ ಹಬ್ಬ ಆಚರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪಟಾಕಿಗಳನ್ನು ಸಿಡಿಸುವುದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಅರಿವಿನೊಂದಿಗೆ, ಪಟಾಕಿಗಳಿಗಾಗಿ ವ್ಯಯಿಸುತ್ತಿದ್ದ ಹಣವನ್ನು ವಿದ್ಯಾರ್ಥಿಗಳೇ ಸ್ವಯಂಪ್ರೇರಣೆಯಿಂದ ಸಂಗ್ರಹಿಸಿದ್ದಾರೆ. ಈ ಹಣದಿಂದ ಹೊಸ ಬಟ್ಟೆ, ಹಣ್ಣು ಹಾಗೂ ಸಿಹಿತಿಂಡಿಗಳನ್ನು ಖರೀದಿಸಿ, ಸುಂದರವಾಗಿ ಪ್ಯಾಕ್ ಮಾಡಿ ಸಂಡೂರು ಪುರಸಭೆಯ ನೂರಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ವಿತರಿಸುವ ಮೂಲಕ ಅವರ ಬದುಕಿನಲ್ಲಿಯೂ ದೀಪಾವಳಿಯ ಬೆಳಕು ಮೂಡಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ ಮಾತನಾಡಿ, ʼʼಪ್ರತಿದಿನ ಬೆಳಗಿನಿಂದ ಸಂಜೆಯವರೆಗೆ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತ, ಸಂಡೂರನ್ನು ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿ ರೂಪಿಸುವಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆʼʼ ಎಂದರು.
ಬಳ್ಳಾರಿ-ಗುಂತಕಲ್ ರೈಲು ಮಾರ್ಗಕ್ಕೆ ಕೇಂದ್ರ ಅಸ್ತು; 1,264 ಕೋಟಿ ವೆಚ್ಚಕ್ಕೆ ಅನುಮೋದನೆ
ʼʼಸಮಾಜದ ಆರೋಗ್ಯ ಮತ್ತು ಸ್ವಚ್ಛ ಪರಿಸರದ ಹಿಂದಿರುವ ನಿಜವಾದ ಶ್ರಮಜೀವಿಗಳು ಪೌರಕಾರ್ಮಿಕರು. ಅವರ ಸೇವೆ ಅನನ್ಯವಾದುದು ಹಾಗೂ ಅಭಿನಂದನಾರ್ಹವಾದುದು. ಇಂತಹ ಶ್ರಮಜೀವಿಗಳ ಬದುಕಿನಲ್ಲಿ ದೀಪಾವಳಿಯ ಸಂತಸವನ್ನು ಹಂಚಿಕೊಳ್ಳುವ ಉದ್ದೇಶದಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಪಟಾಕಿಗಾಗಿ ಖರ್ಚು ಮಾಡುತ್ತಿದ್ದ ಹಣವನ್ನು ಉಳಿಸಿ, ಅದರಿಂದ ಪೌರಕಾರ್ಮಿಕರಿಗೆ ಹೊಸ ವಸ್ತ್ರ ಹಾಗೂ ಸಿಹಿತಿಂಡಿಗಳನ್ನು ವಿತರಿಸಿರುವುದು ನಿಜಕ್ಕೂ ಶ್ಲಾಘನೀಯʼʼ ಎಂದು ಹೇಳಿದರು.
ʼʼಮಾನವಕುಲದ ಸುಸ್ಥಿರ ಬದುಕಿಗೆ ಪರಿಸರದ ಸಮತೋಲನ ಮತ್ತು ಸಂರಕ್ಷಣೆ ಅತ್ಯಗತ್ಯ. ಪರಿಸರಕ್ಕೆ ಹಾನಿ ಉಂಟುಮಾಡುವ ಪಟಾಕಿಗಳ ಸಂಭ್ರಮಕ್ಕಿಂತ, ಮತ್ತೊಬ್ಬರ ಮುಖದಲ್ಲಿ ಸಂತೋಷದ ಬೆಳಕು ಮೂಡಿಸುವ ಕಾರ್ಯವೇ ನಿಜವಾದ ಹಬ್ಬದ ಆಚರಣೆ. ವಿದ್ಯಾರ್ಥಿಗಳ ಈ ನಡೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಇತರರಿಗೂ ಪ್ರೇರಣೆಯಾಗಲಿದೆʼʼ ಎಂದು ಅಭಿಪ್ರಾಯಪಟ್ಟರು.
ಪರಿಸರ ಎಂಜಿನಿಯರ್ ಅನ್ನಪೂರ್ಣ ಡಿ. ಮಾತನಾಡಿ, ʼʼಸಾಮಾನ್ಯವಾಗಿ ಶಾಲೆಗಳು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಮೂಲಕ ಜ್ಞಾನವನ್ನು ನೀಡುವುದನ್ನು ಕಾಣುತ್ತೇವೆ. ಆದರೆ ಶ್ರೀಶೈಲೇಶ್ವರ ವಿದ್ಯಾ ಕೇಂದ್ರವು ಪಠ್ಯಜ್ಞಾನದ ಜತೆಗೆ ಪರಿಸರ ಸಂರಕ್ಷಣೆ, ನೈತಿಕತೆ,ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕಾರ್ಯ ಮಾಡುತ್ತಿರುವುದು ವಿಶೇಷ. ಪಟಾಕಿಗಳಿಗಾಗಿ ವ್ಯಯಿಸಬಹುದಾಗಿದ್ದ ಹಣವನ್ನು ವಿದ್ಯಾರ್ಥಿಗಳೇ ಸ್ವಯಂಪ್ರೇರಣೆಯಿಂದ ಸಂಗ್ರಹಿಸಿ, ಅದನ್ನು ಸಮಾಜದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರ ಸಂತೋಷಕ್ಕಾಗಿ ವಿನಿಯೋಗಿಸಿರುವುದು ಅತ್ಯಂತ ಪ್ರಶಂಸನೀಯ. ಈ ಮೂಲಕ ವಿದ್ಯಾರ್ಥಿಗಳು ಪೌರಕಾರ್ಮಿಕರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಿದ್ದಾರೆʼʼ ಎಂದರು.
ʼʼಪರಿಸರದ ಬಗ್ಗೆ ಕಾಳಜಿ ಹೊಂದಿರುವ, ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಂಡಿರುವ ಇಂತಹ ಮಕ್ಕಳನ್ನು ರೂಪಿಸುವಲ್ಲಿ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಪ್ರಯತ್ನ ಮಹತ್ವದ್ದಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ನಾಳಿನ ಉತ್ತಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿಯಾಗಲಿದೆʼʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯಲು ಬಳ್ಳಾರಿ ನೆಲದಲ್ಲೇ ಬಿಜೆಪಿ ಸಂಕಲ್ಪ: ಪ್ರಲ್ಹಾದ್ ಜೋಶಿ
ಪೌರಕಾರ್ಮಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ʼʼಪೌರಕಾರ್ಮಿಕರ ಸೇವೆಯನ್ನು ಗುರುತಿಸಿ, ದೀಪಾವಳಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೋರಿದ ಪ್ರೀತಿ, ಗೌರವ ಹಾಗೂ ಮಾನವೀಯ ಕಾಳಜಿಗೆ ಹೃತ್ಪೂರ್ವಕ ಅಭಿನಂದನೆಗಳುʼʼ ಎಂದರು. ʼʼವಿದ್ಯಾರ್ಥಿಗಳು ತಮ್ಮ ಸಂತೋಷದ ಹಬ್ಬದಲ್ಲಿ ನಮ್ಮನ್ನೂ ಒಳಗೊಳ್ಳುವ ಮೂಲಕ ನಮ್ಮಲ್ಲಿ ಆತ್ಮೀಯತೆ ಮತ್ತು ಸಂತಸವನ್ನು ಹೆಚ್ಚಿಸಿದ್ದಾರೆ. ಇಂತಹ ಮೌಲ್ಯಯುತ ಕಾರ್ಯಗಳು ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರವನ್ನು ನೀಡಲಿವೆʼʼ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಸಂಡೂರು ಪುರಸಭೆಯ ನೂರಕ್ಕೂ ಹೆಚ್ಚಿ ಪೌರಕಾರ್ಮಿಕರಿಗೆ, ಹೊಸ ಬಟ್ಟೆ, ಹಣ್ಣು ಮತ್ತು ಸಿಹಿತಿಂಡಿಗಳ ಪ್ಯಾಕೆಟ್ಗಳನ್ನು ವಿತರಿಸಲಾಯಿತು. ಕಚೇರಿ ಮುಖ್ಯಸ್ಥ ಶರಣಬಸಪ್ಪ ಎಂ.ಜಿ. ಗುರುಬಸವರಾಜ, ಸತೀಶ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.