B Sriramulu: ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಕುತಂತ್ರ; ಆಪ್ತನ ವಿರುದ್ಧ ಶ್ರೀರಾಮುಲು ಗಂಭೀರ ಆರೋಪ
B Sriramulu:ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ತಾವು ಹೇಳಿದ್ದೇ ನಡೆಯಬೇಕು, ನಾನು ಹೇಳಿದವರೇ ಗೆಲ್ಲಬೇಕು ಎಂದು ಇಲ್ಲಿನಿಂದ ದೆಹಲಿವರೆಗೆ ಏನೇನೋ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪ ಮಾಡಿದ್ದಾರೆ.
ಬಳ್ಳಾರಿ: ಬಿಜೆಪಿಯಲ್ಲಿ ವಿಜಯೇಂದ್ರ ಹಾಗೂ ಯತ್ನಾಳ್ ಬಣದ ಮಧ್ಯೆ ಗದ್ದುಗೆ ಗುದ್ದಾಟದ ನಡುವೆ ಒಂದು ಕಾಲದ ತಮ್ಮ ಆಪ್ತ ಸ್ನೇಹಿತ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧವೇ ಮಾಜಿ ಸಚಿವ ಬಿ. ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ಹೇಳಿರುವ ಶ್ರೀರಾಮುಲು(B Sriramulu), ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಂದಿರುವ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ನೆನ್ನೆ ಸಂಜೆ ಕೋರ್ ಕಮಿಟಿ ಸಭೆ ನಡೆಸಿದರು. ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀರಾಮುಲುಗೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ಸದಾನಂದ ಗೌಡ ಸಮಿತಿ ಇನ್ನೂ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಶ್ರೀರಾಮುಲು ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಉಪಚುನಾವಣೆಯಲ್ಲಿ ನಾನು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ಕ್ಷೇತ್ರಕ್ಕೆ ಹೋಗಿ ಕೇಳಿದ್ರೆ ನನ್ನ ಕೆಲಸದ ಬಗ್ಗೆ ಎಲ್ಲರೂ ಹೇಳುತ್ತಾರೆ. ನಾನು ಕೆಲಸ ಮಾಡಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ರಾಧಾಮೋಹನ್ ದಾಸ್ ಆರೋಪದಿಂದ ನನಗೆ ನೋವಾಗಿದೆ ಎಂದಿದ್ದಾರೆ.
ನನ್ನ ಬಗ್ಗೆ ತಿಳಿದುಕೊಂಡು ರಾಧಾಮೋಹನ್ ದಾಸ್ ಮಾತನಾಡಬೇಕಿತ್ತು. ರಾಧಾಮೋಹನ್ ದಾಸ್ ಅವರು ಉತ್ತರಪ್ರದೇಶ ರಾಜ್ಯದವರು. ಅವರಿಗೆ ಇಲ್ಲಿನ ಕೆಲವು ವಿಚಾರಗಳು ಗೊತ್ತಿರುವುದಿಲ್ಲ. ನನ್ನ ಬಗ್ಗೆ ಲಘುವಾಗಿ ಮಾತನಾಡುವುದು ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ಸಭೆಯಲ್ಲಿ ಈ ವಿಚಾರವನ್ನು ರಾಜ್ಯಾಧ್ಯಕರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳಿರೋದು ಸ್ಪಷ್ಟವಾಗಿದೆ ಎಂದರು.
ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಒಂದು ಕಾಲದ ತಮ್ಮ ಆಪ್ತ ಸ್ನೇಹಿತನ ವಿರುದ್ಧವೇ ಕಿಡಿಕಾರಿದ್ದಾರೆ.
ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ತಾವು ಹೇಳಿದ್ದೇ ನಡೆಯಬೇಕು, ನಾನು ಹೇಳಿದವರೇ ಗೆಲ್ಲಬೇಕು ಎಂದು ಇಲ್ಲಿನಿಂದ ದೆಹಲಿವರೆಗೆ ಏನೇನೋ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ. ನಾನು ಜನಾರ್ದನ ರೆಡ್ಡಿ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಅವರು ಪಾರ್ಟಿಗೆ ಮತ್ತೆ ಬರುತ್ತೇನೆ ಎಂದಾಗ, ಅವರನ್ನು ಕರೆದುಕೊಳ್ಳಲು ನಾನೇ ಹೇಳಿದ್ದೆ. ಆದರೆ, ಈಗ ನನ್ನ ವಿರುದ್ಧವೇ ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಜನಾರ್ದನರೆಡ್ಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷ ತೊರೆಯುತ್ತಾರಾ ರಾಮುಲು?
ಸಂಡೂರು ಕ್ಷೇತ್ರದ ಸೋಲಿಗೆ ನಾನೇ ಕಾರಣ ಎಂದು ಹೇಳಿದ್ದಾರೆ. ನಾನು ಪಕ್ಷದಲ್ಲಿರುವುದು ನಿಮಗೆ ಇಷ್ಟವಿಲ್ಲ, ನನ್ನಿಂದ ನೋವಾಗಿದ್ದರೆ ನಾನು ಪಕ್ಷವನ್ನು ಬಿಟ್ಟು ಹೋಗುತ್ತೀನಿ ಎಂದು ನಾಯಕರಿಗೆ ಹೇಳಿದ್ದೇನೆ. ಒಂದು ವೇಳೆ ಪಕ್ಷ ತೊರೆಯುವುದಾದರೆ, ಎಲ್ಲರಿಗೂ ಹೇಳಿಯೇ ಬಿಡುತ್ತೇನೆ. ಮೋದಿ, ಶಾ, ಹೈಕಮಾಂಡ್ ನಾಯಕರಿಗೆ ಎಲ್ಲರಿಗೂ, ಇಲ್ಲಿ ಏನು ಆಗಿದೆ ಎಂಬ ಬಗ್ಗೆ ಹೇಳುತ್ತೇನೆ. ಇಲ್ಲಿ ಸುಮ್ಮನಿದ್ದರೆ ಬೆಲೆ ಇಲ್ಲ ಎಂದು ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ.