ಬಳ್ಳಾರಿ: ತಿಂಗಳಿಗೆ ಕೇವಲ 15 ಸಾವಿರ ರೂ. ಸಂಬಳ ಪಡೆಯುವ ಯುವಕನೊಬ್ಬನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಆತನ ಹೆಸರಿನಲ್ಲಿ ಐದು ತಿಂಗಳಲ್ಲಿ ಬರೋಬ್ಬರಿ 350 ಕೋಟಿಗೂ ಅಧಿಕ ರೂ. ಮೊತ್ತದ ಜಿಎಸ್ಟಿ ವಂಚನೆ ನಡೆಸಿರುವ ಪ್ರಕರಣ (Ballari GST Fraud) ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಟೊಯೊಟಾ ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೋಷನ್ ವಂಚನೆಗೆ ಒಳಗಾದ ಯುವಕ. ಈತನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್ಗಳನ್ನು ಬಳಸಿಕೊಂಡು 'ರೋಷನ್ ಎಂಟರ್ಪ್ರೈಸಸ್' ಹೆಸರಿನಲ್ಲಿ ಜಿಎಸ್ಟಿ ನೋಂದಣಿ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನೋಂದಣಿ ವೇಳೆ ರೋಷನ್ ಅವರ ಬದಲಿಗೆ ಬೇರೆಯವರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ನೀಡಲಾಗಿದೆ. ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ 350 ಕೋಟಿಗೂ ಅಧಿಕ ರೂ. ವಹಿವಾಟು ನಡೆಸಿ, ಬಳಿಕ ಜಿಎಸ್ಟಿ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಜಿಎಸ್ಟಿ ಖಾತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಜಿಎಸ್ಟಿ ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಸಿ ಗೋಡೌನ್ನಲ್ಲಿ ಹಮಾಲಿ ಕೆಲಸ ಮಾಡಿಕೊಂಡಿರುವ ತಂದೆ ಫಕ್ರುದ್ದೀನ್ ಹಾಗೂ ಕುಟುಂಬದವರು ಅಧಿಕಾರಿಗಳ ವಿಚಾರಣೆಯಿಂದ ಆತಂಕಕ್ಕೊಳಗಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದ ರೋಷನ್ಗೆ ವಿಷಯ ತಿಳಿದ ಬಳಿಕ ಜಿಎಸ್ಟಿ ಕಚೇರಿಗೆ ತೆರಳಿ ಮಾಹಿತಿ ಕೇಳಿದ್ದಾರೆ. ಆದರೆ, ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್ ಬೋಟ್ ಮಗುಚಿ ಗುಜರಾತ್ ಮೂಲದ ದಂಪತಿ ಸಾವು, ಇಬ್ಬರು ಮಕ್ಕಳ ರಕ್ಷಣೆ
''ಮಗನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿರುವವರನ್ನು ಪತ್ತೆಹಚ್ಚಿ ಕೂಡಲೇ ಬಂಧಿಸಬೇಕು'' ಎಂದು ತಂದೆ ಫಕ್ರುದ್ದೀನ್ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ರೋಷನ್ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.