ಬಳ್ಳಾರಿ: ಬಲ್ಡೋಟ ಸಮೂಹ ವತಿಯಿಂದ ಜಿಲ್ಲೆಯ ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮ ದಲ್ಲಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮ ನಡೆಯಿತು.
ಸ್ವಚ್ಛತಾ ಹಿ ಸೇವಾ ಅಭಿಯಾನದ ಭಾಗವಾಗಿ, ಆರ್.ಎಂ.ಎಂ.ಎಲ್‌ನ ಐಲಿ ಮೈನ್ಸ್ ವೆಂಕಟಗಿರಿ ಯಲ್ಲಿ ಗ್ರಾಮ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಗ್ರಾಮಸ್ಥರು, ಸ್ವಸಹಾಯ ಸಂಘದ ಸದಸ್ಯರು, ಮಕ್ಕಳು ಹಾಗೂ ಗಣಿ ನೌಕರರು ಒಟ್ಟಾಗಿ ಗ್ರಾಮದ ಮುಖ್ಯ ಬೀದಿಗಳು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದರು. ಎಲ್ಲರೂ ಸೇರಿ ಪ್ಲಾಸ್ಟಿಕ್ ಹಾಗೂ ಕಸ ವಸ್ತುಗಳನ್ನು ಸಂಗ್ರಹಿಸಿ, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿದರು.
ಈ ಸಂದರ್ಭದಲ್ಲಿ ಕಂಪನಿಯ ಸಮಾಜ ಸೇವಾ ವಿಭಾಗದ ಎಜಿಎಂ ರವಿ ಬಿಸಗುಪ್ಪಿ ಮಾತನಾಡಿ, “ಸ್ವಚ್ಛತಾ ಹಿ ಸೇವಾ ಅಭಿಯಾನವು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ದೇಶವ್ಯಾಪಿ ನಡೆಯು ತ್ತಿರುವ ಮಹತ್ವದ ಚಳವಳಿಯಾಗಿದೆ. ಇದರ ಮುಖ್ಯ ಗುರಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆ ಎಂದರು. ಸ್ವಚ್ಛತೆಯ ಕುರಿತು ಜಾಗೃತಿ ವೃದ್ಧಿ, ಹಾಗೂ ನೈರ್ಮಲ್ಯ ಕಾರ್ಮಿಕರ ಕಲ್ಯಾಣವನ್ನು ಉತ್ತೇಜಿಸುವುದಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜವಾಬ್ದಾರಿಯ ಭಾವನೆ ಮೂಡಿಸಿ, ಆರೋಗ್ಯಕರ ಹಾಗೂ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Bellary News: ಆಟವಾಡುತ್ತಿದ್ದ 4 ವರ್ಷದ ಬಾಲಕ ಚರಂಡಿ ಗುಂಡಿಗೆ ಬಿದ್ದು ಸಾವು
ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯವಾಗಿರಬಾರದು, ಅದು ನಮ್ಮ ಜೀವನ ಶೈಲಿಯ ಭಾಗವಾಗ ಬೇಕು. ಪ್ರತಿಯೊಬ್ಬರೂ ತಮ್ಮ ಮನೆ, ಬೀದಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಬದ್ಧರಾಗಿದ್ದರೆ ಮಾತ್ರ ನಿಜವಾದ ಸ್ವಚ್ಛ ಗ್ರಾಮ – ಸುಂದರ ಗ್ರಾಮ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಸ್ವಚ್ಛತೆ ಎಂದರೆ ಕೇವಲ ಕಸ ತೆಗೆಯುವುದು ಅಲ್ಲ, ಅದು ಆರೋಗ್ಯ, ಗೌರವ ಹಾಗೂ ಅಭಿವೃದ್ಧಿಯ ಸಂಕೇತ. ನಾವು ಜನರೊಂದಿಗೆ ಕೈ ಜೋಡಿಸಿ ವೆಂಕಟಗಿರಿ ಗ್ರಾಮವು ಸ್ವಚ್ಛತೆ, ಆರೋಗ್ಯ ಮತ್ತು ಅಭಿವೃದ್ಧಿಯ ಮಾದರಿಯಾಗಿ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ದೇಬೆಶ್ಗೋಬಿಂದಾ ದಾಸ್, ಉಪಗಣಿ ವ್ಯವಸ್ಥಾಪಕ ಎ. ಲತೀಫ್, ಹಿರಿಯ ವ್ಯವಸ್ಥಾಪಕ ಮಹೇಶ್ ಮಾನಕರೆ, ಸಹಾಯಕ ವ್ಯವಸ್ಥಾಪಕ ಅಶೋಕ್ ದೇಶಪಾಂಡೆ, ನಿರ್ವಹಣಾ ವ್ಯವಸ್ಥಾಪಕ ಅನಂತ್ ರಾಘವ್, ಸಿಎಸ್ಆರ್ ಇಲಾಖೆ ಬಸವಪ್ರಭು, ಗ್ರಾಮದ ಮುಖಂಡರಾದ ವೆಂಕ ನಾಯಕ್, ರಾಜ ನಾಯಕ್, ಉಮಾ ನಾಯಕ್ ಇತರರಿದ್ದರು.
ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಗ್ರಾಮ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮಕ್ಕಳಿಗೆ ಸ್ವಚ್ಛತೆ ಮತ್ತು ವೈಯಕ್ತಿಕ ಆರೋಗ್ಯದ ಮಹತ್ವವನ್ನು ತಿಳಿಸಿದರು. ಶಾಲಾ ಮಕ್ಕಳು ಸ್ವಚ್ಛತೆಯ ಕುರಿತು ಘೋಷಣೆಗಳನ್ನು ಕೂಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಿದರು.
ಒಟ್ಟು 60 ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಶ್ರಮದ ಮೂಲಕ ಗ್ರಾಮದಲ್ಲಿ ನೈರ್ಮಲ್ಯ ಮತ್ತು ಆರೋಗ್ಯ ಜಾಗೃತಿಗೆ ಕೊಡುಗೆ ನೀಡಿದರು.