ಸಂಡೂರು: ಜೆಎಸ್ಡಬ್ಲ್ಯು ಫೌಂಡೇಶನ್ ವತಿಯಿಂದ (JSW Foundation) ‘ಸ್ಕಿಲ್ ಸ್ಪಾರ್ಕ್’ ಕಾರ್ಯಕ್ರಮದಡಿ ಮೊಬೈಲ್ ಅಸೆಂಬ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಜೆಎಸ್ಡಬ್ಲ್ಯು ಸ್ಟೀಲ್ನ ಕಾರ್ಪೊರೇಟ್ ಅಫೇರ್ಸ್ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಮಲ್ಲಿಕಾರ್ಜುನ ಮಾತನಾಡಿ, ತರಬೇತಿ ಪಡೆದ ಅಭ್ಯರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ಅನ್ವೇಷಿಸಬೇಕು ಮತ್ತು ತಮ್ಮ ಅವಕಾಶಗಳನ್ನು ಭೌಗೋಳಿಕ ಮಿತಿಗಳಿಗೆ ಸೀಮಿತಗೊಳಿಸಿಕೊಳ್ಳಬಾರದು ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು, ನಿರಂತರವಾಗಿ ಕಲಿಯುತ್ತಾ, ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಮತ್ತಷ್ಟು ಉತ್ತಮಗೊಳಿಸಿಕೊಳ್ಳಬೇಕು ಎಂದರು.
ಜೆಎಸ್ಡಬ್ಲ್ಯು ಫೌಂಡೇಶನ್ನ ದಕ್ಷಿಣ ವಲಯದ ಮುಖ್ಯಸ್ಥ ಪೆದ್ದಣ್ಣ ಬೀಡಾಲ ಮಾತನಾಡಿ, ನಿಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಮತ್ತು ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಎಂದರು.
ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಕೆ. ವಲ್ಲಿ ಅವರ ನೇತೃತ್ವದಲ್ಲಿ 45 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ತರಬೇತಿ ನೀಡಲಾಯಿತು. ಒಟ್ಟು 65 ವಿದ್ಯಾರ್ಥಿನಿಯರು ತರಬೇತಿಯಲ್ಲಿ ಪೂರ್ಣಗೊಳಿಸಿ ಪ್ರಮಾಣಪತ್ರ ಪಡೆದರು. 42 ಅಭ್ಯರ್ಥಿಗಳು ಉದ್ಯೋಗಾವಕಾಶ ಪಡೆದುಕೊಂಡಿದ್ದು ನೇಮಕಾತಿ ಪತ್ರ ವಿತರಿಸಲಾಯಿತು.
ಜೆಎಸ್ಡಬ್ಲ್ಯೂ ಫೌಂಡೇಶನ್ ಸಿಎಸ್ಆರ್ ಮುಖ್ಯಸ್ಥೆ ಭಾರತಿ ಪಳನಿಸಾಮಿ, ಜೆಎಸ್ಡಬ್ಲ್ಯು ಫೌಂಡೇಶನ್ನ ಕೌಶಲ್ಯ ಮತ್ತು ಜೀವನೋಪಾಯ ವಿಭಾಗದ ಮುಖ್ಯಸ್ಥೆ ಶ್ರೇಷ್ಠಾ ಭಟ್ಟಾಚಾರ್ಜಿ, ಹೆಡ್ಸ್ ಹೆಲ್ಡ್ ಹೈ ಫೌಂಡೇಶನ್ನ ಕಾರ್ಯಕ್ರಮ ವ್ಯವಸ್ಥಾಪಕ ರವಿ ತಳವಾರ್ ಇತರರಿದ್ದರು.