ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಡಿನ ಸಾರಸ್ವತ ಲೋಕಕ್ಕೆ ಬಳ್ಳಾರಿ ಜಿಲ್ಲೆ ತನ್ನದೇ ಅದ ಕೊಡುಗೆ ನೀಡಿದೆ: ಸಂಸದ ಈ. ತುಕಾರಾಂ

ಸಂಡೂರು ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ಸಭಾಭವನದ ಶಂಕುಸ್ಥಾಪನೆಯನ್ನು ಸಂಸದ ಈ. ತುಕಾರಾಂ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿಯು ಅತ್ಯಂತ ಶ್ರೀಮಂತವಾಗಿದ್ದು ಇದನ್ನು ಮುಂದಿನ ಪೀಳಿಗೆ ಉಳಿಸಿ, ಬಳಸಿ ಹಾಗೂ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದ್ದಾರೆ.

ಸಂಡೂರು: ಬಳ್ಳಾರಿ ಜಿಲ್ಲೆ ನಾಡಿನ ಸಾರಸ್ವತ ಲೋಕಕ್ಕೆ ತನ್ನದೇ ಅದ ಕೊಡುಗೆ ಕೊಟ್ಟಿದ್ದು ಇದೀಗ ಸಂಡೂರಿನಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನ ತಲೆಯೆತ್ತಿ ನಿಂತಿದೆ. ಇದರ ನಿರ್ಮಾಣಕ್ಕೆ ಹೆಮ್ಮೆಯ ಕನ್ನಡಿಗರಾದ ನಾನು ಹಾಗೂ ನನ್ನ ಧರ್ಮ ಪತ್ನಿ ಶಾಸಕಿ ಅನ್ನಪೂರ್ಣ ತುಕಾರಾಮ್ 1.25 ಕೋಟಿ ಅನುದಾನ ನೀಡಿದ್ದೇವೆ ಎಂದು‌ ಸಂಸದ ಈ. ತುಕಾರಾಂ (E Tukaram) ತಿಳಿಸಿದರು.

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ಸಭಾಭವನದ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿಯು ಅತ್ಯಂತ ಶ್ರೀಮಂತವಾಗಿದ್ದು ಇದನ್ನು ಮುಂದಿನ ಪೀಳಿಗೆ ಉಳಿಸಿ,ಬಳಸಿ ಹಾಗೂ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದರು.

ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ಇಂದಿನ ಯುವ ಪೀಳಿಗೆ ಕೇವಲ ಮೊಬೈಲ್ ದಾಸರಾಗದೇ ಪುಸ್ತಕಗಳನ್ನು ಓದಬೇಕು. ನಾನು ನನ್ನ 15ನೇ ವಯಸ್ಸಿನಲ್ಲಿಯೇ ಎಸ್.ಎಲ್. ಭೈರಪ್ಪನವರ 'ಗೃಹಭಂಗ' ಓದಿಮುಗಿಸಿ ಆ ಕಾದಂಬರಿಯಲ್ಲಿ ಬರುವ ನಂಜಮ್ಮಳ ಪಾತ್ರ ನನ್ನನ್ನು ಬಹುವಾಗಿ ಪ್ರಭಾವಿಸಿದ್ದರಿಂದಲೇ ಇಂದು ನಾನು ಎಷ್ಟೇ ಕಷ್ಟಗಳ ಸುರಿಮಳೆ ಬಂದರೂ ನನ್ನ ಕುಟುಂಬ, ರಾಜಕೀಯದ ಕಾರ್ಯಗಳ ಒತ್ತಡ ನಿಭಾಯಿಸುತ್ತಾ ಜನಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಈ‌ ಭವನದ ಹಿಂದೆ ಹಾಲಿ ತಾಲೂಕು‌ ಕ.ಸಾ.ಪ ಅಧ್ಯಕ್ಷ ಡಾ.ನಾಗನಗೌಡರ ಶ್ರಮವನ್ನು ಕೊಂಡಾಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿರಕ್ತ ಮಠದ ಮ.ನಿ.ಪ್ರ ಪ್ರಭುಸ್ವಾಮೀಜಿ ಮಾತನಾಡಿ, ಕನ್ನಡ ಭಾಷೆ ಅತ್ಯಂತ ಹಳೆಯ ಭಾಷೆಯಾಗಿದ್ದು ಕರ್ನಾಟಕ ಸಾಹಿತ್ಯಕ್ಕೆ ಬಳ್ಳಾರಿ ಅದರಲ್ಲಿಯೂ ಸಂಡೂರಿನ ಸಾಹಿತಿಗಳಾದ ಚಂದ್ರಕಾಂತ‌ ವಡ್ಡು ಹಾಗೂ ವಸುಧೇಂದ್ರರ ಕೊಡುಗೆ ಶ್ಲಾಘನೀಯ ಎಂದರು.

ಬಳ್ಳಾರಿ ಅರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಎಷ್ಟೆಲ್ಲಾ ಶ್ರೀಮಂತವಾಗಿದ್ದರೂ ದುರ್ದೈವದ ಸಂಗತಿಯೆಂದರೆ ಕಳೆದ 70 ವರ್ಷಗಳಿಂದ ಈ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅಗುತ್ತಿಲ್ಲ. ಈ‌ ಕುರಿತು ನಾವೆಲ್ಲರೂ ಚಿಂತನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ತಾಲೂಕು‌ ಕ.ಸಾ.ಪ ಅಧ್ಯಕ್ಷ ಡಾ.ನಾಗನಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಭವನದ ನಿರ್ಮಾಣದಲ್ಲಿ ಎಲ್ಲ ಕನ್ನಡ ಪರ ಮನಸುಗಳು, ಸಾಹಿತ್ಯಾಸಕ್ತರು ವಿಶೇಷವಾಗಿ ಸಂಸದ, ಶಾಸಕರ ಕೊಡುಗೆ ಅಪಾರವಾದದ್ದು ಎಂದರು.

ಕರ್ನಾಟಕ ಸಂಘ ಕತಾರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ; ʼಕರುನಾಡ ವೈಭವ-2026ʼ ಸಾಂಸ್ಕೃತಿಕ ಮಹೋತ್ಸವ

ಈ ಸಂದರ್ಭದಲ್ಲಿ ಹಿರಿಯ ಚಿತ್ರ ಕಲಾವಿದ ನಾಡೋಜ ವಿ ಟಿ ಕಾಳೆ, ಕ.ಸಾ.ಪ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕಾರ್ಯದರ್ಶಿ ಡಾ.ಶಿವಲಿಂಗಪ್ಪ ಹಂದಿಹಾಳು, ಸಾಹಿತಿಗಳಾದ ಡಾ. ವೃಷಭೇಂದ್ರಾಚಾರ್, ಡಾ.ವಸುಂಧರಾ ಭೂಪತಿ, ಡಾ. ಚಂದ್ರಕಾಂತ ವಡ್ಡು, ಡಾ.ಶಂಕ್ರಪ್ಪ ತೋರಣಗಲ್ಲು, ಡಾ.ಮೃತ್ಯುಂಜಯ ರುಮಾಲೆ, ತಾಲೂಕು ಕ.ಸಾ.ಪ ದ ಪದಾಧಿಕಾರಿಗಳಾದ ಬಸವರಾಜ ಮಸೂತಿ, ಸಿ.ಎಂ ಶಿಗ್ಗಾಂವಿ, ಎಂ.ಟಿ ರಾಥೋಡ್, ಎಚ್ ಎನ್ ಭೋಸ್ಲೆ, ಎಸ್.ವಿ. ನಾನಾವಟೆ ಪದವಿ ಕಾಲೇಜು, ಲಕ್ಷ್ಮೀ ನಾನಾವಟೆ ಶಿಕ್ಷಣ ಮಹಾ ವಿದ್ಯಾಲಯ, ಸದ್ವಿದ್ಯಾ ಪದವಿ ಕಾಲೇಜು, ಬಿ.ಕೆ.ಜಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವೀರೇಶ್ ಜಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ‌ ಡಾ.ತಿಪ್ಪೇಸ್ವಾಮಿ ನಿರೂಪಿಸಿದರು.