ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರು ದಸರಾದಲ್ಲಿ ದಲಿತ ಸಚಿವರಿಗೆ ಅವಮಾನ ಆರೋಪ; ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೊಸಪೇಟೆಯಲ್ಲಿ ಪ್ರತಿಭಟನೆ

ಮೈಸೂರಿನಲ್ಲಿ ಜಂಬೂ ಸವಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಜತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಅಗತ್ಯ ಕ್ರಮವಹಿಸಬೇಕು ಎಂದು ಸಮಾನತೆ ವೇದಿಕೆ ಹೊಸಪೇಟೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಹೊಸಪೇಟೆ: ಮೈಸೂರು ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ದಲಿತ ಸಚಿವರನ್ನು ತಡೆದು ಅವಮಾನಿಸಿದ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಮಾನತೆ ವೇದಿಕೆ ಹೊಸಪೇಟೆ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ತಹಸೀಲ್ದಾರ್ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಕ್ರಮಕ್ಕೆ ಆಗ್ರಹಿಸಿದರು. ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಸಚಿವರನ್ನು ತಡೆದ ಘಟನೆಯು ದಲಿತ ಸಮುದಾಯದ ಜನರಲ್ಲಿ ತೀವ್ರ ನೋವು, ಅಸಮಾಧಾನ ಮತ್ತು ಆತಂಕವನ್ನು ಉಂಟುಮಾಡಿದೆ ಎಂದರು‌.

ಮಾಧ್ಯಮಗಳಲ್ಲಿ ವರದಿಯಾದ ಮಾಹಿತಿಯ ಪ್ರಕಾರ, ಜಂಬೂ ಸವಾರಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಜೊತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಸಚಿವರಾದ ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಹಾಗೂ ಕೆ.ಎಸ್. ಬಸವಂತಪ್ಪ ಅವರನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದಾರೆ. ಸಚಿವರು ತಮ್ಮ ಪರಿಚಯವನ್ನು ತಿಳಿಸಿದ ಬಳಿಕವೂ ಅವರನ್ನು ಒಳಗೆ ಪ್ರವೇಶಿಸಲು ಬಿಡದೆ. ಮುಖ್ಯಮಂತ್ರಿಗಳ ಮಧ್ಯಸ್ಥಿಕೆಯ ನಂತರ ಪ್ರವೇಶಕ್ಕೆ ಅವಕಾಶ ನೀಡಲಾಯಿತು ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಅಗತ್ಯ ಕ್ರಮವಹಿಸಬೇಕು.

ಈ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ. ಒಂದು ವೇಳೆ ಸಚಿವರನ್ನು ಅವರ ಜಾತಿಯ ಆಧಾರದ ಮೇಲೆ ತಡೆದು ಅವಮಾನಿಸಿರುವುದು ಸಾಬೀತಾದಲ್ಲಿ, ಅದು ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾದ ಗಂಭೀರ ಕೃತ್ಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ಜಂಬೂ ಸವಾರಿ ವೇಳೆ ದಲಿತ ಸಚಿವರನ್ನು ತಡೆದ ಐ.ಪಿ.ಎಸ್ ಅಧಿಕಾರಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಿ, ಕರ್ತವ್ಯದಿಂದ ವಜಾಗೊಳಿಸುವಂತೆ ಹಾಗೂ ಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರು ದಲಿತರ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಹೊಸಪೇಟೆ ತಹಸೀಲ್ದಾರ್ ಅಮರನಾಥ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾನತೆ ವೇದಿಕೆಯ ಸಂಚಾಲಕರಾದ ಎನ್. ವೆಂಕಟೇಶ್, ಭರತ್ ಕುಮಾರ್ ಸಿ.ಆರ್, ಮುಖಂಡರಾದ ಎಚ್.ಶೇಷು, ವೈ ರಾಮಚಂದ್ರ ಬಾಬು, ಗೋವಿಂದರಾಜ್, ಮಾಜಿ ನಗರಸಭಾ ಸದಸ್ಯರಾದ ರಾಜು, ಕರಿಯಪ್ಪ, ಜೆ.ಬಿ ರಾಘವೇಂದ್ರ, ಕೊಲ್ಲಾಪುರಿ, ಹನುಮಂತ, ಉಮೇಶ್, ಶೇಕ್ ಮೆಹಬೂಬ್ ಬಾಷಾ, ಓಬಳೇಶ್, ಇಂತಿಯಾಜ್, ತಾಜುದ್ದೀನ್, ಅಲೆನ್ ಸುಹೇಲ್ ಎರಿಸ್ವಾಮಿ, ಈ. ಅನಿಲ್, ತಾಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.