ಚಿಕ್ಕೋಡಿ, ಅ. 11: ಕಷ್ಟಪಟ್ಟು ಸಾಕಿ ಬೆಳೆಸಿದ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಪ್ರಿಯಕರನ ಜತೆ ಓಡಿ ಹೋದರೆ ಪೋಷಕರಿಗೆ ಆಘಾತವಾಗುವುದು ಸಹಜ. ಅವಮಾನ ಸಹಿಸಲು ಸಾಧ್ಯವಾಗದೆ ಕೆಲವರು ಆತ್ಮಹತ್ಯೆಗೆ ಶರಣಾದರೆ, ಹಲವರು ಮಗಳನ್ನೇ ಕೊಲೆ ಮಾಡುತ್ತಾರೆ. ಇಂತಹ ಅನೇಕ ಘಟನೆ ನಮ್ಮ ಕಣ್ಣ ಮುಂದೆಯೇ ನಡೆದಿರುವ ಅನೇಕ ಉದಾಹರಣೆಗಳಿವೆ. ಆದರೆ ಇಂತಹದ್ದೇ ಸನ್ನಿವೇಶ ಎದುರಿಸಿದ ತಂದೆಯೊಬ್ಬರು ಬೇರೆಯದೇ ಮಾರ್ಗದ ಮೂಲಕ ಮಗಳಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ (Chikkodi News). ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರಿಯಕರನ ಜತೆ ಓಡಿ ಹೋದ ಮಗಳ ತಿಥಿ ನಡೆಸಿದ ತಂದೆ ಊರವರಿಗೆಲ್ಲ ಊಟ ಹಾಕಿಸಿದ್ದಾರೆ. ಸದ್ಯ ಈ ಘಟನೆ ರಾಜ್ಯದ ಗಮನ ಸೆಳೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. 19 ವರ್ಷದ ಯುವತಿ ತಾನು ಪ್ರೀತಿಸಿದ ಯುವಕ ಜತೆ ಮನೆ ಬಿಟ್ಟು ಓಡಿ ಹೋದ ಹಿನ್ನಲೆಯಲ್ಲಿ ಆಕೆಯ ತಂದೆ ಈ ಕ್ರಮ ಕೈಗೊಂಡಿದ್ದಾರೆ.
ʼʼಭಾವಪೂರ್ಣ ಶ್ರದ್ಧಾಂಜಲಿ; ಮರಣ ದಿನಾಂಕ ಅ. 9, 2025ʼʼ ಎಂದು ಬರೆದು ಆಕೆಯ ಫೋಟೊವನ್ನು ಒಳಗೊಂಡ ಬ್ಯಾನರ್ ಊರಿನಲ್ಲಿ ಅಳವಡಿಸಿ ಅದಕ್ಕೆ ಹೂವಿನ ಹಾರ ಹಾಕಿದ್ದಾರೆ. ಜತೆಗೆ ಸಂಬಂಧಿಕರನ್ನು, ಊರವರನ್ನು ಕರೆದು ತಿಥಿಯೂಟ ಹಾಕಿಸಿದ್ದಾರೆ. ಮಗಳ ವಿರುದ್ದ ವಿಶಿಷ್ಟ ರೀತಿಯಲ್ಲಿ ಸೇಡು ತೀರಿಸಿಕೊಂಡ ವ್ಯಕ್ತಿಯನ್ನು ನಾಗರಾಳ ಗ್ರಾಮದ ಶಿವಗೌಡ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ತುಂಬು ಗರ್ಭಿಣಿ ಸಹೋದರಿಯನ್ನು ಜೀವಂತವಾಗಿ ಸುಟ್ಟ ಸಹೋದರರಿಗೆ ಮರಣ ದಂಡನೆ; ಹೈಕೋರ್ಟ್‌ನ ಕಲಬುರಗಿ ಪೀಠದಿಂದ ಮಹತ್ವದ ತೀರ್ಪು
ಘಟನೆ ವಿವರ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಅವರ ಪುತ್ರಿ ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಶಿವಗೌಡ ಸೇರಿದಂತೆ ಆಕೆಯ ಮನೆಯವರು ಇದನ್ನು ವಿರೋಧಿಸುತ್ತಿದ್ದರು. ಆದರೆ ಆಕೆ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲು ಒಪ್ಪಲಿಲ್ಲ. ಮನವಿ ಮಾಡಿದರೂ, ಪ್ರೀತಿಯಿಂದ ತಿಳಿ ಹೇಳಿದರೂ ಪ್ರಯೋಜನವಾಗಲಿಲ್ಲ. ಕೊನೆಗೊಮ್ಮೆ ಆಕೆ ವಿಠ್ಠಲ್ ಬಸ್ತವಾಡೆ ಜತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ.
ಆರಂಭದಲ್ಲಿ ಶಿವಗೌಡ ಅವರಿಗೆ ಈ ವಿಚಾರ ತಿಳಿದಿರಲಿಲ್ಲ. ಮಗಳು ಮನೆಗೆ ಬಾರದಿದ್ದಾಗ ಗಾಬರಿಗೊಂಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ಬಳಿಕ ಅವರಿಗೆ ತಮ್ಮ ಪುತ್ರಿ ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವ ಕಹಿ ಸತ್ಯ ಗೊತ್ತಾಯಿತು. ಇದರಿಂದ ಮನನೊಂದ ಅವರು ಆಕೆ ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಶಾಸ್ತ್ರೋಸ್ತ್ರವಾಗಿ ತಿಥಿ ಮಾಡಿ ಊರವರನ್ನು ಕರೆದುಊಟ ಹಾಕಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಪುತ್ರಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪರ-ವಿರೋಧ ಚರ್ಚೆ
ಶಿವಗೌಡ ಅವರಿಗೆ ನಾಲ್ಕು ಹೆಣ್ಣುಮಕ್ಕಳು. ಈ ಪೈಕಿ ಈಗ ಓಡಿ ಹೋದವಳು ಕೊನೆಯವಳು. ಸದ್ಯ ಶಿವಗೌಡ ಅವರ ವರ್ತನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅವರನ್ನು ಹಲವರು ಬೆಂಬಲಿಸಿದರೆ, ಕೆಲವರು ವಿರೋಧಿಸಿದ್ದಾರೆ.