ಚಿಕ್ಕೋಡಿ: ತಾಯಿಯೇ ಮೊದಲು ದೇವರು ಎನ್ನುತ್ತಾರೆ. ಮನುಷ್ಯ ಎಲ್ಲರ ಋಣ ತೀರಿಸಬಹುದು, ಆದರೆ ಹೆತ್ತಮ್ಮಳ ಋಣ ತೀರಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಹೆತ್ತವರನ್ನು ವೃದ್ದಾಶ್ರಮಕ್ಕೆ ಸೇರಿಸುವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಶತಾಯುಷಿ ತಾಯಿಯನ್ನು 55 ವರ್ಷದ ಮಗ, 220 ಕಿ.ಮೀ ದೂರ ಹೆಗಲ ಮೇಲೆ ಹೊತ್ತುಕೊಂಡು ಪಂಡರಾಪುರಕ್ಕೆ ಹೋಗಿ ವಿಠ್ಠಲನ ದರ್ಶನ ಮಾಡಿಸಿ ಗಮನ ಸೆಳೆದಿದ್ದಾರೆ.
ಪಂಡರಾಪುರಕ್ಕೆ ಹೋಗುವ ತಾಯಿ ಆಸೆಯನ್ನು ಪೂರೈಸುವ ಮೂಲಕ ಸದಾಶಿವ ಬಾನೆ ಎಂಬುವವರು ʼಆಧುನಿಕ ಶ್ರವಣ ಕುಮಾರʼ ಆಗಿದ್ದಾರೆ. ಈ ಘಟನೆ ನಡೆದಿರುವುದು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ. ತನ್ನ ಹೆತ್ತಮ್ಮಳನ್ನು ಪಂಡರಾಪುರಕ್ಕೆ ಹೆಗಲ ಮೇಲೆ ಹೊತ್ತು ಕೊಂಡು ಹೋಗಿ ವಿಠ್ಠಲನ ದರ್ಶನ ಮಾಡಿಸಿದ್ದಾರೆ.

ತಮ್ಮ ಹುಟ್ಟೂರಿನಿಂದ ನೆರೆ ರಾಜ್ಯ ಮಹಾರಾಷ್ಟ್ರದ ಪಂಡರಾಪುರವರೆಗೆ 220 ಕಿ.ಮೀ ದೂರ, ತಾಯಿಯಾದ ಶತಾಯುಷಿ ಸತ್ತೇವ್ವಾ ಲಕ್ಷ್ಮಣ ಬಾನೆ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಶ್ರೀ ವಿಠ್ಠಲ ಪಾಂಡುರಂಗನ ದರ್ಶನವನ್ನು ಪುತ್ರ ಮಾಡಿಸಿದ್ದಾರೆ. ತಾಯಿಯನ್ನು 9 ದಿನಗಳ ಕಾಲ ಪಾದಯಾತ್ರೆಯಲ್ಲಿ ತಾನೊಬ್ಬನೇ ಹೆಗಲ ಮೇಲೆ ತಾಯಿಯನ್ನು ಹೊತ್ತುಕೊಂಡು ಹೋಗಿ ವಿಠ್ಠಲನ ದರ್ಶನ ಮಾಡಿಸಿದ್ದಾರೆ.

ಸದಾಶಿವ ಅವರು ಪಂಡರಾಪುರ ವಿಠ್ಠಲನ ಭಕ್ತರಾಗಿದ್ದಾರೆ. ಅಲ್ಲದೆ ಅವರು 15 ವರ್ಷಗಳಿಂದ ಪಂಡರಾಪುರಕ್ಕೆ ತೆರಳುತ್ತಾರೆ. ಶತಾಯಷಿ ತಮ್ಮ ತಾಯಿಯನ್ನು ಜೀವನದಲ್ಲಿ ಒಮ್ಮೆಯಾದರು ಪಂಡರಾಪುರ ದಿಂಡಿ ಪಾದಯಾತ್ರೆ ಮೂಲಕ ಹೆಗಲ ಮೇಲೆ ಹೊತ್ತುಕೊಂಡು ವಿಠ್ಠಲನ ದರ್ಶನ ಮಾಡಬೇಕೆಂಬ ಮಹದಾಸೆ ಹೊಂದಿದ್ದರು. ಇದೀಗ ತಾಯಿಯ ಆಸೆಯನ್ನು ಪುತ್ರ ಪೂರೈಸಿದ್ದಾರೆ.
ಈ ಸುದ್ದಿಯನ್ನೂ ಓದಿ | Festival Fashion 2025: ಗೌರಿ ಹಬ್ಬದ ಸೀಸನ್‌ನಲ್ಲಿ ಬಂತು ವೈವಿಧ್ಯಮಯ ಅತ್ಯಾಕರ್ಷಕ ಬಳೆಗಳು
![]()
ನನ್ನ ಪುತ್ರ ಸದಾಶಿವ ಲಕ್ಷ್ಮಣ ಬಾನೆ, ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ವಿಠ್ಠಲ ದರ್ಶನ ಮಾಡಿಸಿದ್ದಾನೆ. ವಿಠ್ಠಲನ ದರ್ಶನ ಮಾಡಿಸಿರುವುದು ನನ್ನ ಜೀವನ ಪಾವನವಾಗಿದೆ. ಆಷಾಢ ಏಕಾದಶಿಯಂದು ಇಲ್ಲಿನ ಗ್ರಾಮಸ್ಥರ ಜತೆ ತೆರಳಿ ನನಗೆ ವಿಠ್ಠಲನ ದರ್ಶನ ಮಾಡಿಸಿದ್ದಾನೆ. ಆತನಿಗೆ ದೇವರು ಚನ್ನಾಗಿ ಇಟ್ಟಿರಲಿ.
-ಸತ್ತೇವ್ವಾ ಲಕ್ಷ್ಮಣ ಬಾನೆ, ಶತಾಯುಷಿ.