Festival Fashion 2025: ಗೌರಿ ಹಬ್ಬದ ಸೀಸನ್ನಲ್ಲಿ ಬಂತು ವೈವಿಧ್ಯಮಯ ಅತ್ಯಾಕರ್ಷಕ ಬಳೆಗಳು
Festival Fashion 2025: ಈ ಬಾರಿಯ ಗೌರಿ ಹಬ್ಬಕ್ಕೆಂದೇ ವಿಶೇಷವಾಗಿ ಮಾರುಕಟ್ಟೆಯಲ್ಲಿ ವಿವಿಧ ವರ್ಣಗಳ ವೈವಿಧ್ಯಮಯ ಅತ್ಯಾಕರ್ಷಕ ಬಳೆಗಳು ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಆಯ್ಕೆ ಹೇಗೆ? ಈ ಕುರಿತು ಇಲ್ಲಿದೆ ವರದಿ.

ಚಿತ್ರಗಳು: ಮಿಂಚು


ಈ ಬಾರಿಯ ಗೌರಿ ಹಬ್ಬಕ್ಕೆ ವಿಶೇಷವಾಗಿ ನಾನಾ ವರ್ಣದ ಡಿಸೈನ್ ಇರುವಂತಹ ಬಳೆಗಳು ಎಂಟ್ರಿ ನೀಡಿವೆ. ಹಬ್ಬದ ಸಂಭ್ರಮ ಹೆಚ್ಚಿಸಲು ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಈ ಬಳೆಗಳು ಬಂದಿದ್ದು, ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ಮನ ಸೆಳೆದಿವೆ. ನೋಡಲು ಒಂದಕ್ಕಿಂತ ಒಂದು ಡಿಸೈನ್ ಮನಮೋಹಕವಾಗಿದ್ದು, ಹಬ್ಬ ಸಮೀಪಿಸುತ್ತಿದ್ದಂತೆಯೇ ಕೊಳ್ಳುಗರ ಸಂಖ್ಯೆ ಹೆಚ್ಚಾಗತೊಡಗಿದೆ.

ಹಬ್ಬಕ್ಕೆ ಗಾಜಿನ ಬಳೆಗಳಿಗೆ ಹೆಚ್ಚಾಯ್ತು ಡಿಮ್ಯಾಂಡ್
ಹಸಿರು, ಕೆಂಪು, ಹಳದಿ, ಗುಲಾಬಿ, ಮೆಜೆಂತಾ ಹೀಗೆ ನಾನಾ ವರ್ಣಗಳಲ್ಲಿ ಲಭ್ಯವಿರುವ ಗಾಜಿನ ಬಳೆಗಳು ಈ ಹಬ್ಬಕ್ಕೆ ಬಂದಿವೆ. ಬಾಕ್ಸ್ ಗಾಜಿನ ಬಳೆಗಳೆಂದೇ ಕರೆಯಲ್ಪಡುವ ಈ ಗಾಜಿನ ಬಳೆಗಳಿಗೆ ಇದೀಗ ಹೊಸ ರೂಪ ದೊರೆತಿದೆ. ಗೋಲ್ಡನ್ ವರ್ಣ ಮಿಕ್ಸ್ ಆದಂತವು ಚಾಲ್ತಿಯಲ್ಲಿವೆ. ಇನ್ನು ಕಂಪ್ಲೀಟ್ ಗೋಲ್ಡ್ ಹಾಗೂ ಸಿಲ್ವರ್ನವು ಲಭ್ಯ. ಅಷ್ಟೇಕೆ! ನೋಡಲು ಥೇಟ್ ಗೋಲ್ಡ್ ಮೆಟಲ್ನಂತೆ ಕಾಣುವಂತಹ ಗಾಜಿನ ಬಳೆಗಳು ಲಭ್ಯ ಎನ್ನುತ್ತಾರೆ ಬಳೆ ಮಾರಾಟಗಾರರಾದ ಮಂಜುಳಾ.

ಬಣ್ಣಬಣ್ಣದ ಥ್ರೆಡ್ & ಮೆಟಲ್ ಬಳೆಗಳು
ಬಣ್ಣಬಣ್ಣದ ದಾರ ಸುತ್ತಿರುವ ಸಾದಾ ವರ್ಣದ ಥ್ರೆಡ್ ಗಾಜಿನ ಬಳೆಗಳು ಹಾಗೂ ಮೆಟಲ್ ಬಳೆಗಳು ಈ ಬಾರಿಯ ಹಬ್ಬಕ್ಕೆ ಆಗಮಿಸಿವೆ. ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವೆ. ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರು.

ಗೌರಿ ಪೂಜೆಗೆ ಧರಿಸುವ ಗಾಜಿನ ಬಳೆಗಳು
ಹಬ್ಬದಂದು ಹೆಣ್ಣು ಮಕ್ಕಳು ಗಾಜಿನ ಬಳೆಗಳನ್ನು ಧರಿಸುವುದು ಸಮೃದ್ಧಿಯ ಸಂಕೇತ. ಮನೆಗೆ ಬಂದ ಹೆಣ್ಣುಮಕ್ಕಳಿಗೂ ಬಳೆಗಳನ್ನು ನೀಡುವುದು ಶ್ರೇಷ್ಠ ಎಂಬುದಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪ್ರತಿ ಗೌರಿ ಹಬ್ಬಕ್ಕೂ ಬಾಗಿನದ ಜತೆಗೆ ಹೆಣ್ಣುಮಕ್ಕಳಿಗೆ ಡಜನ್ಗಟ್ಟಲೆ ಗಾಜಿನ ಬಳೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಅಷ್ಟು ಮಾತ್ರವಲ್ಲ, ಗಾಜಿನ ಬಳೆಗಳನ್ನು ಧರಿಸುವುದರಿಂದ ಸುತ್ತಮುತ್ತಲಿರುವ ನೆಗೆಟಿವ್ ಎನರ್ಜಿ ದೂರಾಗುತ್ತದೆ. ಪಾಸಿಟಿವ್ ಎನರ್ಜಿ ಎಲ್ಲೆಡೆ ಹರಡಿಸುವ ಶಕ್ತಿ ಇವುಗಳಿಗಿದೆಯಂತೆ ಹಾಗೆನ್ನುತ್ತಾರೆ ಸ್ಪಿರಿಚ್ಯುವಲ್ ಎಕ್ಸ್ಪರ್ಟ್ ದಿವ್ಯಾ.

ಹಬ್ಬದಂದು ಧರಿಸುವ ಗಾಜಿನ ಬಳೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್
- ಮ್ಯಾಚಿಂಗ್ ಬಳೆಗಳನ್ನು ಆಯ್ಕೆ ಮಾಡಿ.
- ಧರಿಸಲು ಕಷ್ಟವಾದಲ್ಲಿ, ಕೈಗಳಿಗೆ ಕ್ರೀಮ್ ಹಚ್ಚಿ, ಗಾಜಿನ ಬಳೆ ಧರಿಸಿ.
- ಆದಷ್ಟು ಸಡಿಲವಾಗಿರುವ ಬಳೆಗಳನ್ನೇ ಆಯ್ಕೆ ಮಾಡಿ.
- ಟ್ರೆಂಡ್ಗೆ ತಕ್ಕಂತೆ ಇತರೆ ಬಳೆಗಳನ್ನು ಮಿಕ್ಸ್ ಮಾಡಿಯೂ ಧರಿಸಬಹುದು.