ಬೆಂಗಳೂರು, ಏ. 1: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ (Bengaluru Karaga 2026) ಶುರುವಾಗಿದ್ದು, ಇಂದು (ಏ.1) ಕರ್ಪೂರ ಪೂಜೆ ನೆರವೇರಲಿದೆ. ಬಳಿಕ ಬುಧವಾರ ಮಧ್ಯರಾತ್ರಿ 12.30ರಿಂದ ಹೂವಿನ ಕರಗದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 1ರ ರಾತ್ರಿ 9 ರಿಂದ ಮರುದಿನ ಅಂದರೆ ಏಪ್ರಿಲ್ ಬೆಳಗ್ಗೆ 7 ರವರೆಗೆ ಕರಗ ಉತ್ಸವ ಹೊರಡುವ ಕೆಲವು ರಸ್ತೆಯಲ್ಲಿ ವಾಹನ ಸಂಚಾರ ಬದಲಾವಣೆ (traffic alert) ಮಾಡಲಾಗಿದೆ. ಹೀಗಾಗಿ ವಾಹನ ಸವಾರರು ಈ ಕೆಳಗೆ ನೀಡಿರುವ ರಸ್ತೆಗಳಲ್ಲಿ ಸಂಚರಿಸುವ ಬದಲು ಬೇರೆ ಮಾರ್ಗವಾಗಿ ತೆರಳಬೇಕು.
ಯಾವೆಲ್ಲಾ ರಸ್ತೆಯ ಮಾರ್ಗ ಬದಲು?
ಮಾರ್ಕೆಟ್ ಸರ್ಕಲ್ನಿಂದ ಅವೆನ್ಯೂ ಸರ್ಕಲ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ವರೆಗೂ ರಸ್ತೆ ಏಪ್ರಿಲ್ 1ರ ರಾತ್ರಿ 9ರಿಂದ ಏಪ್ರಿಲ್ 2ರ ಬೆಳಗ್ಗೆ 7ರವರೆಗೆ ಬಂದ್ ಇರಲಿದೆ. ಹೀಗಾಗಿ SPG ರಸ್ತೆ, ಟೌನ್ ಹಾಲ್ ಹಾಗೂ ಕೆಂಪೇಗೌಡ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕೆಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಕರಗ ದೇಗುಲದಿಂದ ಹೊರಟು ಮರಳಿ ಬರುವವರಿಗೆ ಅಕ್ಕಿಪೇಟೆ, ಓಟಿಸಿ ಮುಖ್ಯ ರಸ್ತೆಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಇದರಿಂದ ಈ ರಸ್ತೆ ಬದಲಿಗೆ ಪರ್ಯಾಯ ಮಾರ್ಗ ಬಳಸಬೇಕು ಎಂದು ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
ದೇಗುಲಕ್ಕೆ ಕಮಿಷನರ್ ಭೇಟಿ
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರು ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು ಪೊಲೀಸ್ ಕಮಿಷನರ್ ಗೆ ಜಂಟಿ ಪೊಲೀಸ್ ಆಯುಕ್ತ ವಂಶೀಕೃಷ್ಣ, ಡಿಸಿಪಿ ಅಕ್ಷಯ್, ಯತೀಶ್ ಎನ್ ಸಾಥ್ ನೀಡಿದ್ದು, ಈ ವೇಳೆ ಕಗರ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.
Bengaluru Karaga Festival: ಇಂದಿನಿಂದ ಐತಿಹಾಸಿಕ ಬೆಂಗಳೂರು ಕರಗಕ್ಕೆ ಚಾಲನೆ
ಕರಗ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕಣ್ಗಾವಲು
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಕರಗ ಬೆಂಗಳೂರಿನ ಕೇಂದ್ರ ಹಾಗೂ ಪಶ್ಚಿಮ ಭಾಗದಲ್ಲಿ ಸುಮಾರು 22 ಕಿ.ಲೋ. ದೂರ ಸಾಗಲಿದೆ. ಹೀಗಾಗಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಗದುದ್ದಕ್ಕೂ ಸಿಸಿಟಿವಿ ಅಳವಡಿಸಲಾಗಿದೆ. ಹಾಗೇ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. ಇನ್ನು ಕರಗ ಭದ್ರತೆಗೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.