ಬೆಂಗಳೂರು: ಪರಿಸರ- ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೆ, ಪೋಲಿಸ್ ಇಲಾಖೆಯ ಅನುಮತಿ ಪಡೆಯದೆ ಕನ್ನಡ ಬಿಗ್ ಬಾಸ್ ಸೀಸನ್ 12 ರಿಯಾಲಿಟಿ ಶೋ (Bigg Boss Kannada 12 reality show) ಆರಂಭಿಸಿದ್ದಕ್ಕಾಗಿ ನಿನ್ನೆ ರಾಮನಗರದ ಜಾಲಿವುಡ್ ಸ್ಟುಡಿಯೋದಲ್ಲಿದ್ದ (jollywood studios) ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಗಿತ್ತು. ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದನ್ನು ಪ್ರಶ್ನಿಸಿ ಇಂದು ಕರ್ನಾಟಕ ಹೈಕೋರ್ಟಿಗೆ (karnataka high court) ಕಾರ್ಯಕ್ರಮದ ಆಯೋಜಕರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಇಂದೇ ತುರ್ತು ವಿಚಾರಣೆ ಮಾಡುವಂತೆ ಅರ್ಜಿದಾರರ ಪರವಾಗಿ ವಕೀಲರು ಮನವಿ ಮಾಡಿದ್ದಾರೆ. ಹಾಗಾಗಿ ಮಧ್ಯಾಹ್ನ 2:30ರ ನಂತರ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಜಾಲಿವುಡ್ ಸ್ಟುಡಿಯೋದಿಂದ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನಿನ್ನೆ ಸಂಜೆ ಕಂದಾಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಬಿಗ್ ಬಾಸ್ ಮನೆಗೆ ಬೀಗ ಹಾಕಿದ್ದರು. ಬಳಿಕ ಒಂದು ಗಂಟೆಗಳ ಒಳಗೆ ಸ್ಪರ್ಧಿಗಳಿಗೆ ಮನೆಯಿಂದ ಹೊರಗಡೆ ಹೋಗಲು ಅವಕಾಶ ನೀಡಲಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಇಂದು ಜಾಲಿವುಡ್ ಸ್ಟುಡಿಯೋಸ್ ರಿಟ್ ಅರ್ಜಿ ಸಲ್ಲಿಸಿದೆ.
ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಮಯದಲ್ಲಿ ಆದೇಶ ಹೊರಡಿಸಲಾಗಿದೆ. ತಮ್ಮ ಅಹವಾಲು ಆಲಿಸದೆ ತರಾತುರಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಅರ್ಜಿದಾರರ ವ್ಯವಹಾರಕ್ಕೆ ಹಾನಿ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಅರ್ಜಿಯಲ್ಲಿ ವೆಲ್ಸ್ ಸ್ಟುಡಿಯೋ ಆರೋಪಿಸಿದೆ.
ಬೆಸ್ಕಾಂನಿಂದಲೂ ನೋಟಿಸ್
ತ್ಯಾಜ್ಯ ನೀರು ಸಂಸ್ಕರಣ ಘಟಕ ಬಳಸದೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕನ್ನಡ ಬಿಗ್ ಬಾಸ್ ಸೀಸನ್ 12 ಶೋ ಬಂದ್ ಮಾಡುವಂತೆ ನೋಟಿಸ್ ನೀಡಿ ಆ ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಇದರ ಬೆನ್ನಲ್ಲೆ ವಿದ್ಯುತ್ ಕಡಿತ ಮಾಡುವ ಕುರಿತು ವೆಲ್ಸ್ ಸ್ಟುಡಿಯೋಗೆ ನೋಟಿಸ್ ನೀಡಲು ಬೆಸ್ಕಾಂ ಮುಂದಾಗಿದೆ. ಜಾಲಿವುಡ್ ಸ್ಟುಡಿಯೋ ಬಳಿ ಬಿಡದಿ AEE ಮೋಹಿತಾ ಆಗಮಿಸಿದ್ದು, ನೋಟಿಸ್ ಸ್ವೀಕರಿಸಲು ಯಾವುದೇ ಸಿಬ್ಬಂದಿ ಇರಲಿಲ್ಲ.