ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೊಡ್ಡಬಳ್ಳಾಪುರ ಜನತೆಯ ಬಹುದಿನಗಳ ಕನಸು ನನಸು; ಮೇ 3ರಂದು ಇಎಸ್ಐಸಿ ಆಸ್ಪತ್ರೆಗೆ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ ಚಾಲನೆ

Dr. Mansukh Mandaviya: ದೊಡ್ಡಬಳ್ಳಾಪುರದಲ್ಲಿ ಸುಸಜ್ಜಿತ 100 ಹಾಸಿಗೆಗಳ ಆಸ್ಪತ್ರೆ ಸಿದ್ದವಾಗಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಮೇ 3ರಂದು ಉದ್ಘಾಟಿಸಲಿದ್ದಾರೆ. ಜತೆಗೆ ಅದೇ ದಿನ ಬಳ್ಳಾರಿಯಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಗೆ ವರ್ಚುವಲ್‌ ಆಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡಾ. ಮನ್ಸುಖ್ ಮಾಂಡವೀಯ (ಸಂಗ್ರಹ ಚಿತ್ರ)

ದೊಡ್ಡಬಳ್ಳಾಪುರ, ಮೇ 1: ದೊಡ್ಡಬಳ್ಳಾಪುರ ಜನತೆಯ ಬಹುದಿನಗಳ ಕನಸು ನನಸಾಗುತ್ತಿದೆ. ಇಎಸ್‌ಐ ಆಸ್ಪತ್ರೆ (ESIC Hospital) ಬೇಕೆಂಬ ಬಹುವರ್ಷಗಳ ಬೇಡಿಕೆ ಈಗ ಈಡೇರಿದೆ. ಸುಸಜ್ಜಿತ 100 ಹಾಸಿಗೆಗಳ ಆಸ್ಪತ್ರೆ ಸಿದ್ದವಾಗಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ (Dr. Mansukh Mandaviya) ಮೇ 3ರಂದು ಉದ್ಘಾಟಿಸಲಿದ್ದಾರೆ. ಜತೆಗೆ ಅದೇ ದಿನ ಬಳ್ಳಾರಿಯಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆಗೆ ವರ್ಚುವಲ್‌ ಆಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಇಎಸ್‌ಐ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಡಾ. ಮಾಂಡವೀಯಾ ಕೊಡುಗೆ ನೀಡಿದ ಕಟ್ಟಡ ಕಾರ್ಮಿಕರನ್ನು ಗೌರವಿಸಲಿದ್ದಾರೆ ಮತ್ತು ಕಾರ್ಯಕ್ರಮದಲ್ಲಿ ಇಎಸ್ಐ ಫಲಾನುಭವಿಗಳಿಗೆ ನಗದು ಪ್ರಯೋಜನ ವಿತರಿಸಲಿದ್ದಾರೆ. ದೊಡ್ಡಬಳ್ಳಾಪುರದ ಈ ಆಸ್ಪತ್ರೆಯು 1,42,037 ವಿಮೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಸೇವೆ ಸಲ್ಲಿಸಲಿದ್ದು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಸುಮಾರು 5.50 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ ನೀಡುತ್ತದೆ. ಬಳ್ಳಾರಿ ಘಟಕವು ಪೂರ್ಣಗೊಂಡ ನಂತರ, ಸುಮಾರು 64,000 ಕಾರ್ಮಿಕರು ಮತ್ತು ಅವರ ಕುಟುಂಬಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತದೆ, ಬಳ್ಳಾರಿ ವಿಭಾಗದ 2 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಕರೋನಾ ನಿಮಯ ಪಾಲಿಸಿ, ಇಲ್ಲವೇ ಭಾರತ ಜೋಡೋ ಯಾತ್ರೆ ನಿಲ್ಲಿಸಿ: ಮಾಂಡವೀಯಾ

ಕರ್ನಾಟಕದ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿರುವ ಇಎಸ್ಐಸಿ ಆಸ್ಪತ್ರೆಯು 100 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಸೆಕೆಂಡರಿ ಕೇರ್ ಸೌಲಭ್ಯವಾಗಿದ್ದು, 5 ಎಕ್ರೆಯಲ್ಲಿ 101.14 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 32 ಸಿಬ್ಬಂದಿ ವಸತಿಗೃಹಗಳನ್ನು ಒಳಗೊಂಡಿದೆ ಮತ್ತು ಸಾಮಾನ್ಯ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀ ರೋಗಶಾಸ್ತ್ರ, ಮಕ್ಕಳ ವೈದ್ಯಶಾಸ್ತ್ರ, ಮೂಳೆಶಾಸ್ತ್ರ, ತುರ್ತು ಆರೈಕೆ ಮತ್ತು ವಿಕಿರಣ ಚಿಕಿತ್ಸೆ, ಪ್ರಯೋಗಾಲಯ ಹಾಗು ರಕ್ತ ಬ್ಯಾಂಕ್ ಸೇರಿದಂತೆ ಸಮಗ್ರ ರೋಗನಿರ್ಣಯ ಸೌಲಭ್ಯಗಳಂತಹ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ.

ಬಳ್ಳಾರಿಯಲ್ಲಿ ಉದ್ದೇಶಿತ ಇಎಸ್ಐಸಿ ಆಸ್ಪತ್ರೆಯನ್ನು 5.21 ಎಕ್ರೆಯಲ್ಲಿ 150 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಅದು ಇಎಸ್ಐ ಯೋಜನೆಯಡಿ ವಿಮೆದಾರರು ಮತ್ತು ಅವರ ಕುಟುಂಬಗಳಿಗೆ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

1958ರಲ್ಲಿ ಪರಿಚಯಿಸಲಾಯಿತು

ನೌಕರರ ರಾಜ್ಯ ವಿಮೆ (ಇಎಸ್ಐ) ಯೋಜನೆಯನ್ನು ಕರ್ನಾಟಕದಲ್ಲಿ 1958ರಲ್ಲಿ ಪರಿಚಯಿಸಲಾಯಿತು. ಇದು ಬೆಂಗಳೂರಿನಿಂದ ಪ್ರಾರಂಭವಾಯಿತು ಮತ್ತು ಈಗ ಎಲ್ಲ 31 ಜಿಲ್ಲೆಗಳನ್ನು ಒಳಗೊಂಡಿದೆ. ಈ ಯೋಜನೆಯು 2,01,749 ಉದ್ಯೋಗದಾತರು ಮತ್ತು 35,33,300 ವಿಮೆದಾರರನ್ನು ಒಳಗೊಂಡಿದೆ. ಒಟ್ಟು 1,37,09,204 ಫಲಾನುಭವಿಗಳನ್ನು ಹೊಂದಿದೆ.

ದೊಡ್ಡಬಳ್ಳಾಪುರ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸಲು ವಿಶೇಷ ಆದ್ಯತೆ: ಡಿ.ಕೆ.ಶಿವಕುಮಾರ್

ರಾಜ್ಯದಲ್ಲಿ ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಒಂದು ಪ್ರಾದೇಶಿಕ ಕಚೇರಿ ಮತ್ತು ಆರು ಉಪ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ನಗದು ಪ್ರಯೋಜನಗಳನ್ನು 48 ಶಾಖಾ ಕಚೇರಿಗಳು ಮತ್ತು 6 ಡಿಸಿಬಿಒಗಳ ಮೂಲಕ ನೀಡಲಾಗುತ್ತದೆ. ಪ್ರಾಥಮಿಕ ಆರೈಕೆಯನ್ನು ಡಿಸಿಬಿಒಗಳು ಮತ್ತು ಉದ್ಯೋಗದಾತರು ನಡೆಸುವ ಔಷಧಾಲಯಗಳೊಂದಿಗೆ 125 ಇಎಸ್ಐಎಸ್ ಔಷಧಾಲಯಗಳ ಮೂಲಕ ನೀಡಲಾಗುತ್ತದೆ. ದ್ವಿತೀಯ ಹಂತದ ಆರೈಕೆ ಸೇವೆಗಳನ್ನು ರಾಜಾಜಿನಗರ, ಇಂದಿರಾನಗರ ಮತ್ತು ಕಲಬುರಗಿಯಲ್ಲಿರುವ ಒಟ್ಟು 3 ಇಎಸ್ಐಸಿ ಆಸ್ಪತ್ರೆಗಳು ಮತ್ತು 7 ಸರ್ಕಾರಿ ಸ್ವಾಮ್ಯದ ಇಎಸ್ಐಎಸ್ ಆಸ್ಪತ್ರೆಗಳ ಮೂಲಕ ತಲುಪಿಸಲಾಗುತ್ತದೆ. ದ್ವಿತೀಯ ಹಂತದ ಆರೈಕೆಗಾಗಿ 143 ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ 123 ಆಸ್ಪತ್ರೆಗಳೊಂದಿಗೆ ನೋಂದಾಯಿಸುವ ಮೂಲಕ ಇವುಗಳನ್ನು ಮತ್ತಷ್ಟು ಬೆಂಬಲಿಸಲಾಗಿದೆ. ಈ 3 ಇಎಸ್ಐಸಿ ಆಸ್ಪತ್ರೆಗಳ ಪೈಕಿ, ಬೆಂಗಳೂರಿನ ರಾಜಾಜಿನಗರದಲ್ಲಿರುವ ಆಸ್ಪತ್ರೆಯು ವೈದ್ಯಕೀಯ ಕಾಲೇಜು ಮತ್ತು ಸ್ನಾತಕೋತ್ತರ (ಪಿಜಿ) ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಕಲಬುರಗಿಯ ಇಎಸ್ಐಸಿ ಆಸ್ಪತ್ರೆಯು ವೈದ್ಯಕೀಯ ಕಾಲೇಜು ಮತ್ತು ದಂತ ವೈದ್ಯಕೀಯ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಇಂದಿರಾನಗರದ ಇಎಸ್ಐಸಿ ಆಸ್ಪತ್ರೆಯು ನರ್ಸಿಂಗ್ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗಳು ವಾರ್ಷಿಕವಾಗಿ 136 ಎಂಬಿಬಿಎಸ್ ಸೀಟುಗಳು, 28 ಡೆಂಟಲ್ ಸೀಟುಗಳು, 60 ನರ್ಸಿಂಗ್ ಸೀಟುಗಳು ಮತ್ತು 96 ಪ್ಯಾರಾಮೆಡಿಕಲ್ ಸೀಟುಗಳು ಸೇರಿ ವಿಮೆದಾರರ ಮಕ್ಕಳಿಗೆ ಮೀಸಲು ಸೀಟುಗಳನ್ನು ನೀಡುತ್ತವೆ.

Ramesh Ballamoole

View all posts by this author