ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶುಕ್ರವಾರ ಬೆಳಗ್ಗೆ ಲಘು ಭೂಕಂಪನ (Doddaballapur Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ. ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಸುತ್ತಮುತ್ತ ಶುಕ್ರವಾರ ಬೆಳಗ್ಗೆ 9 ಗಂಟೆ 1 ನಿಮಿಷ 59 ಸೆಕೆಂಡಿಗೆ ಭೂಕಂಪನ ದಾಖಲಾಗಿದೆ. ತಿಮ್ಮೊಜನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ಅಧಿಕೃತ ಮಾಹಿತಿ ನೀಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ತಿಮ್ಮೋಜನಹಳ್ಳಿ ಗ್ರಾಮದ ಸಮೀಪ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಗ್ರಾಮದ ಉತ್ತರ ಭಾಗದಲ್ಲಿ ಸುಮಾರು 500 ಮೀಟರ್ ದೂರದಲ್ಲಿ ಕೇಂದ್ರ ಬಿಂದು ಗುರುತಿಸಲಾಗಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನರಗಾನಹಳ್ಳಿ, ತೂಬಗೆರೆ ಹಾಗೂ ಕರ್ನಾಲ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ. ಭೂಕಂಪನದ ಕೇಂದ್ರ ಬಿಂದುವಿನಿಂದ ಸುಮಾರು 20ರಿಂದ 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನದ ಅನುಭವವಾಗಿರುವುದಾಗಿ ವರದಿಯಾಗಿದೆ.
ಭೂಕಂಪನದ ತೀವ್ರತೆ ಕಡಿಮೆಯಿದ್ದು, ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಕೆಎಸ್ಎನ್ಡಿಎಂಸಿ ಸ್ಪಷ್ಟಪಡಿಸಿದೆ. ಭೂಕಂಪನ ಸಂಭವಿಸಿದ ಪ್ರದೇಶವು ಭೂಕಂಪ ವಲಯ-2ರ ವ್ಯಾಪ್ತಿಗೆ ಸೇರಿದೆ. ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಸೂಚನೆ ನೀಡಿದೆ.