ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಸಿಎಂ ನಿವಾಸದಲ್ಲಿ ಜಾತಿ ಗಣತಿ: ಮಾಹಿತಿ ನೀಡಿದ ಸಿದ್ದರಾಮಯ್ಯ

CM Siddaramaiah: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಅಕ್ಟೋಬರ್ 16ರಂದು ಸಮೀಕ್ಷೆ ನಡೆಸಲಾಯಿತು. ಸುಮಾರು 45 ನಿಮಿಷಗಳ ಕಾಲ ಗಣತಿದಾರರಿಗೆ ಸಿಎಂ ಮಾಹಿತಿ ನೀಡಿದ್ದು, ಸಿಬ್ಬಂದಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.

ಬೆಂಗಳೂರು, ಅ. 16: ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ (Caste Census) ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಅಕ್ಟೋಬರ್ 16ರಂದು ಸಮೀಕ್ಷೆ ನಡೆಸಲಾಯಿತು. ಸುಮಾರು 45 ನಿಮಿಷಗಳ ಕಾಲ ಗಣತಿದಾರರಿಗೆ ಸಿಎಂ ಮಾಹಿತಿ ನೀಡಿದ್ದು, ಸಿಬ್ಬಂದಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಒಟ್ಟು 5 ಜನರನ್ನು ಒಳಗೊಂಡಿದ್ದ ಸಮೀಕ್ಷಾ ತಂಡ ಸಿಎಂ ಮನೆಯಲ್ಲಿ ಗಣತಿ ಕಾರ್ಯ ನಡೆಸಿದೆ. ಎಕ್ಸ್‌ನಲ್ಲಿ ಸಮೀಕ್ಷೆ ನಡೆಸುತ್ತಿರುವ ಫೋಟೊ ಹಂಚಿಕೊಂಡ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ʼʼನಮ್ಮ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಾಗಿ ನನ್ನ ಮನೆಗೆ ಭೇಟಿನೀಡಿದ ಸಿಬ್ಬಂದಿಗೆ ಮಾಹಿತಿ ನೀಡಿ, ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿದೆʼʼ ಎಂದು ಹೇಳಿದ್ದಾರೆ.‌

ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಹಂಚಿಕೊಂಡ ಜಾತಿ ಗಣತಿಯ ಫೋಟೊ:



ʼʼಅಸಮಾನತೆ, ಬಡತನವನ್ನು ನಿವಾರಣೆ ಮಾಡಿ ಸಮಸಮಾಜ ನಿರ್ಮಾಣ ಮಾಡುವ ಉದ್ದೇಶದೊಂದಿಗೆ ನಮ್ಮ ಸರ್ಕಾರವು ಈ ಸಮೀಕ್ಷೆಯನ್ನು ಕೈಗೊಂಡಿದೆ. ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ತಪ್ಪದೇ ಪಾಲ್ಗೊಂಡು, ತಮ್ಮ ಮಾಹಿತಿಯನ್ನು ಪ್ರಾಮಾಣಿಕವಾಗಿ ನೀಡಬೇಕು. ಆಗ ಮಾತ್ರ ಸಮಾಜದ ವಾಸ್ತವ ಸ್ಥಿತಿಗತಿಯ ಬಗೆಗೆ ನಿಖರ ಮಾಹಿತಿ ದೊರೆತು, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ, ಅವರ ಪ್ರಗತಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯʼʼ ಎಂದಿದ್ದಾರೆ.

ʼʼಇದು ಯಾವುದೇ ಒಂದು ಜಾತಿಗೆ ಸೀಮಿತವಾದ ಸಮೀಕ್ಷೆಯಲ್ಲ, ರಾಜ್ಯದ ಪ್ರತಿಯೊಬ್ಬರ ಜೀವನದ ಮೇಲೆ ಬೆಳಕು ಚೆಲ್ಲುವ ಒಂದು ವೈಜ್ಞಾನಿಕ ಪ್ರಯತ್ನ. ಸಮೀಕ್ಷೆಯಲ್ಲಿ ಮಾಹಿತಿ ನೀಡುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ ದುರ್ಬಳಕೆ ಖಂಡಿತಾ ಆಗದು. ಚಿಂತೆ ಬಿಟ್ಟು, ಧೈರ್ಯವಾಗಿ ಸಿಬ್ಬಂದಿ ಜತೆ ಮಾಹಿತಿ ಹಂಚಿಕೊಳ್ಳಿʼʼ ಎಂದು ತಿಳಿಸಿದ್ದಾರೆ.‌

ಈ ಸುದ್ದಿಯನ್ನೂ ಓದಿ: Caste Census: ಮುಗಿಯದ ಜಾತಿ ಗಣತಿ, ಶಿಕ್ಷಕರಿಗೆ ಬಿತ್ತು ಡಬಲ್‌ ಡ್ಯೂಟಿ

ಜಾತಿ ಸಮೀಕ್ಷೆ ಹಿನ್ನೆಲೆ ಶಾಲೆಗಳ ದಸರಾ ರಜೆ ವಿಸ್ತರಣೆ

ಜಾತಿ ಸಮೀಕ್ಷೆ ಅವಧಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಾಲೆಗಳ ದಸರಾ ರಜೆಯನ್ನೂ ಇತ್ತೀಚೆಗೆ ವಿಸ್ತರಿಸಿತ್ತು. ಈ ಮೂಲಕ ಅಕ್ಟೋಬರ್‌ 7ಕ್ಕೆ ಮುಕ್ತಾಯವಾಗಬೇಕಿದ್ದ ರಜೆ, ಅಕ್ಟೋಬರ್ 18ರವರೆಗೂ ವಿಸ್ತರಣೆಯಾಗಿದೆ. ಶಿಕ್ಷಕರನ್ನು ಜಾತಿ ಸಮೀಕ್ಷೆಗೆ ನಿಯೋಜಿಸಿರುವ ಹಿನ್ನೆಲೆಯಲ್ಲಿ ದಸರಾ ರಜೆ ವಿಸ್ತರಣೆ ಮಾಡಲಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.

ಸೆಪ್ಟೆಂಬರ್ 22ರಂದು ರಾಜ್ಯದ ಜನರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಆರಂಭವಾಗಿತ್ತು. ಅದಾಗ್ಯೂ ಕೆಲವು ಜಿಲ್ಲೆಗಳಲ್ಲಿ ಪೂರ್ತಿ ಆಗಿರಲಿಲ್ಲ. ಕೊಪ್ಪಳ ಶೇ. 97 ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 67ರಷ್ಟು ಆಗಿತ್ತು. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗ ಚರ್ಚೆ ನಡೆಸಿ ರಸ್ತೆ ವಿಸ್ತರಿಸಿತ್ತು. 1 ಲಕ್ಷ 20 ಸಾವಿರ ಶಿಕ್ಷಕರು ಸೇರಿ 1 ಲಕ್ಷ 60 ಸಾವಿರ ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ.