Caste Census: ಮುಗಿಯದ ಜಾತಿ ಗಣತಿ, ಶಿಕ್ಷಕರಿಗೆ ಬಿತ್ತು ಡಬಲ್ ಡ್ಯೂಟಿ
Karnataka: ಸೆಪ್ಟೆಂಬರ್ 22 ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡಿತ್ತು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ 15 ದಿನಗಳ ಕಾಲ ಸಮೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ಸಮೀಕ್ಷೆ ಪೂರ್ಣಗೊಂಡಿಲ್ಲ. ಜೊತೆಗೆ ಶಾಲೆಗಳು ಕೂಡ ಆರಂಭವಾಗಿದ್ದು, ದಿಕ್ಕು ತೋಚದ ಸರಕಾರ ಈ ನಿರ್ದೇಶನ ನೀಡಿದೆ.

-

ಬೆಂಗಳೂರು: ನಿರೀಕ್ಷಿಸಿದಂತೆ ಅವಧಿಯ ಒಳಗೆ ಜಾತಿ ಗಣತಿ (Caste Census) ಮುಗಿಯದ ಹಿನ್ನೆಲೆಯಲ್ಲಿ, ಶಿಕ್ಷಕರಿಗೆ (Teachers) ಡಬಲ್ ಡ್ಯೂಟಿ ವಿಧಿಸಿ ರಾಜ್ಯ ಸರಕಾರ (Karnataka government) ಆದೇಶಿಸಿದೆ. ರಾಜ್ಯದಲ್ಲಿ ಶಾಲೆಗಳು ಆರಂಭವಾದ ಹಿನ್ನೆಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8ರಿಂದ 1 ಗಂಟೆವರೆಗೆ ತರಗತಿಗಳನ್ನು ಶಿಕ್ಷಕರು ಮಗಿಸಿದ ನಂತರ ಸಮೀಕ್ಷೆಗೆ ಹೋಗಬೇಕಾಗಿದೆ. ಈ ಮೂಲಕ ಶಿಕ್ಷಕರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ.
ಸೆಪ್ಟೆಂಬರ್ 22 ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡಿತ್ತು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ 15 ದಿನಗಳ ಕಾಲ ಸಮೀಕ್ಷೆಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಆದರೆ ಸಮೀಕ್ಷೆ ಪೂರ್ಣಗೊಂಡಿಲ್ಲ. ಜೊತೆಗೆ ಶಾಲೆಗಳು ಕೂಡ ಆರಂಭವಾಗಿದ್ದು, ದಿಕ್ಕು ತೋಚದ ಸರಕಾರ ಈ ನಿರ್ದೇಶನ ನೀಡಿದೆ. ಹೀಗಾಗಿ ಶಿಕ್ಷಕರು ಬೆಳಗ್ಗೆ ಶಾಲೆಗೆ ಬಂದು ಪಾಠ ಮುಗಿಸಿ ಮಧ್ಯಾಹ್ನದ ಬಳಿಕ ಗಣತಿಗೆ ಓಡಬೇಕಾಗಿದೆ.
ಇದನ್ನೂ ಓದಿ: Caste census: ಜಾತಿ ಗಣತಿಗೆ ಆಧಾರ್ ಸಂಖ್ಯೆ ಜತೆ ಒಟಿಪಿ ಕೇಳುತ್ತಿರುವ ಸಮೀಕ್ಷಕರು; ಸೈಬರ್ ವಂಚನೆ ಭೀತಿಯಲ್ಲಿ ನಾಗರಿಕರು!
ಹೀಗಾಗಿ ಮಕ್ಕಳ ತರಗತಿಗಳ ವೇಳಾಪಟ್ಟಿಯೂ ಬದಲಾಗಿದೆ. ರಾಜ್ಯದಲ್ಲಿ ಅಕ್ಟೋಬರ್ 12ರ ವರೆಗೆ ಮಧ್ಯಾಹ್ನದ ಬಳಿಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ ಅಕ್ಟೋಬರ್ 24 ರವರೆಗೆ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ ನೀಡಲಾಗಿದೆ. ರಜಾ ದಿನಗಳಲ್ಲಿಯೂ ಸಮೀಕ್ಷೆ ನಡೆಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.
ಗಣತಿಗೆ ವಿದ್ಯಾರ್ಥಿಗಳ ಬಳಕೆಗೆ ತರಾಟೆ
ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಗೆ ಕಾಲೇಜು ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿತ್ತು. ಮೈಸೂರಿನ ದೇವರಾಜ ಅರಸು ರಸ್ತೆಯ ಪಕ್ಕದಲ್ಲಿರುವ ದೇವರಾಜ ಶಾಲೆಯ ಆಸುಪಾಸಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಮೀಕ್ಷೆ ನಡೆಸುತ್ತಿರುವ ವಿಚಾರ ಸಾರ್ವಜನಿಕರಿಂದ ಬಹಿರಂಗವಾಗಿತ್ತು. ಮನೆಗೆ ಸಮೀಕ್ಷೆ ನಡೆಸಲು ಬಂದ ಯುವಕರನ್ನೇ ಜನರು ತರಾಟೆಗೆ ತೆಗೆದುಕೊಂಡಿದ್ದರು. ಸರ್ಕಾರಿ ಅಧಿಕಾರಿಗಳು ಇಲ್ಲ ಸಿಬ್ಬಂದಿಗಳು ಬರಬೇಕು, ನೀವ್ ಯಾಕೆ ಬಂದ್ರಿ ಎಂದು ಜನರು ಪ್ರಶ್ನೆ ಮಾಡಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಯುವಕರು ಪರದಾಡಿದ್ದರು.
ಈ ವೇಳೆ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಕಳಿಸಿದ್ದ ಜಾತಿಗಣತಿಗೆ ನಿಯೋಜಿರುವ ಸಿಬ್ಬಂದಿಗೆ ಕರೆ ಮಾಡಿದ ಜನರು ತರಾಟೆ ತೆಗೆದುಕೊಂಡಿದ್ದರು. ಜನಗಣತಿಗೆ ಸಂಬಂಧಿಸಿದ ಆ್ಯಪ್ ಅನ್ನು ವಿದ್ಯಾರ್ಥಿಗಳ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿರುವ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಆ ವೇಳೆ ತ್ವರಿತವಾಗಿ ಸಮೀಕ್ಷೆ ಮಾಡುವ ಸಲುವಾಗಿ ವಿದ್ಯಾರ್ಥಿಗಳನ್ನು ಕಳಿಸಿದ್ದೇವೆಂದು ಸಿಬ್ಬಂದಿ ಸಮಜಾಯಿಷಿ ನೀಡಿದ್ದರು. ಈ ವೇಳೆ ಸಾರ್ವಜನಿಕರು ಯುವಕರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.