DK Shivakumar: ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ: ಡಿಸಿಎಂ
ರಾಜ್ಯದಲ್ಲಿ ಧರ್ಮಸ್ಥಳ ಪ್ರಕರಣದ ಕುರಿತು ಸಾಕಷ್ಟು ಸಂಚಲನ ಮೂಡಿಸಿದೆ. ಸರ್ಕಾರ ಈ ಕುರಿತು ಎಸ್‌ಐಟಿ ರಚನೆ ಮಾಡಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ಧರ್ಮಸ್ಥಳ ಪ್ರಕರಣದ ಕುರಿತು ಸಾಕಷ್ಟು ಸಂಚಲನ ಮೂಡಿಸಿದೆ. ಸರ್ಕಾರ ಈ ಕುರಿತು ಎಸ್‌ಐಟಿ ರಚನೆ ಮಾಡಿದ್ದು, ಸದ್ಯ ತನಿಖೆ ನಡೆಯುತ್ತಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು ಸುಳ್ಳು ಸುದ್ದಿಯನ್ನು ಹರಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದಾಗ ಇದು ಧರ್ಮಸ್ಥಳದ ಪರ ಅಥವಾ ವಿರುದ್ಧದ ವಿಚಾರವಲ್ಲ. ಎಲ್ಲಾ ಪ್ರಕ್ರಿಯೆ ನ್ಯಾಯಬದ್ಧವಾಗಿ ನಡೆಯಬೇಕು. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಬರಲಿದೆ ಎಂಬ ವಿಶ್ವಾಸ ನನ್ನದು. ಈ ಪ್ರಕರಣದ ವಿಚಾರವಾಗಿ ನಮ್ಮ ಗೃಹ ಸಚಿವರು ಅಧಿವೇಶನದಲ್ಲಿ ಉತ್ತರ ನೀಡುವ ಮೂಲಕ ರಾಜ್ಯದ ಮುಂದೆ ಸತ್ಯಾಂಶ ಇಡಲಿದ್ದಾರೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಷಡ್ಯಂತ್ರ ನಡೆಯುತ್ತಿದೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಡಿಸಿಎಂ, ಈ ವಿಚಾರವನ್ನು ಗೃಹ ಸಚಿವರೇ ವಿವರಿಸಲಿದ್ದಾರೆ. ಮುಖ್ಯಮಂತ್ರಿಗಳಿಗೂ ಈ ವಿಚಾರದಲ್ಲಿ ಬದ್ಧತೆ ಇದೆ. ಯಾರೂ ಕೂಡ ಸುಳ್ಳು, ಷಡ್ಯಂತ್ರ ಮೂಲಕ ಅಪಮಾನ, ಅಪಪ್ರಚಾರ ನಡೆಸುವಂತಿಲ್ಲ ಎಂದು ಸಿಎಂ ನಮಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ನಡೆಯುತ್ತೇವೆ. ಕಾನೂನು ಎಲ್ಲರಿಗೂ ಒಂದೇ. ನಾವು ಅದನ್ನು ಕಾಪಾಡಬೇಕು. ಇಲ್ಲಿ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅನಗತ್ಯವಾಗಿ ಯಾರ ತೇಜೋವಧೆ ಮಾಡುವಂತಿಲ್ಲ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: BY Vijayendra: ಧರ್ಮಸ್ಥಳದ ಮುಸುಕುಧಾರಿ ವ್ಯಕ್ತಿಯ ಬಗ್ಗೆ ತನಿಖೆ ನಡೆಸಿ; ಬಿ.ವೈ. ವಿಜಯೇಂದ್ರ ಆಗ್ರಹ
ಇನ್ನು ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ದೂರುದಾರ ಆರೋಪಿಸಿರುವುದರಿಂದ ಎಸ್ಐಟಿ ತಂಡ ಸಹ ಉತ್ಖನನ ನಡೆಸುತ್ತಿದೆ. ಸ್ಥಳ ಸಂಖ್ಯೆ 13ರಲ್ಲಿ ನೂರಾರು ಶವ ಹೂತಿದ್ದಾಗಿ ದೂರದಾರ ಹೇಳಿದ್ದ ಆದರೆ ಅಲ್ಲಿ ಅವುದೇ ಮೂಳೆ ಪತ್ತೆಯಾಗಿಲ್ಲ. ಸಾಕ್ಷಿದಾರ ಕನ್ಯಾಡಿ ಬಳಿ ಹೊಸ ಜಾಗವನ್ನು ತೋರಿಸಿದ್ದು, ಅಲ್ಲಿಯೂ ಎಸ್ ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನ ಕಾರ್ಯ ನಡೆಸುತ್ತಿದ್ದಾರೆ.