Divya Suresh: ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ರಿಂದ ಹಿಟ್ & ರನ್, ಮಹಿಳೆಯ ಕಾಲು ಮುರಿತ
Hit and Run: ದಿವ್ಯಾ ಸುರೇಶ್ ಕಾರು ನಿಲ್ಲಿಸದೇ, ಗಾಯಾಳಿಗೆ ಚಿಕಿತ್ಸೆ ಕೊಡಿಸಲೂ ಯತ್ನಿಸದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಘಟನೆಯ ಸ್ಥಳದ ಸಿಟಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಟಿ ದಿವ್ಯಾ ಸುರೇಶ್ ಕಾರ್ ಡಿಕ್ಕಿ ಹೊಡೆದು ಹೋಗಿರುವುದು ಗೊತ್ತಾಗಿದೆ.
-
ಹರೀಶ್ ಕೇರ
Oct 24, 2025 1:04 PM
ಬೆಂಗಳೂರು: ಕಿರುತೆರೆ ನಟಿ, ಬಿಗ್ ಬಾಸ್ (Bigg boss) ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ (actress Divya Suresh) ಅವರಿಂದ ಹಿಟ್ ಆ್ಯಂಡ್ ರನ್ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ನಟಿ ಅತಿ ವೇಗ ಮತ್ತು ನಿರ್ಲಕ್ಷದಿಂದ ಕಾರು ಚಾಲನೆ ಮಾಡಿದ ಆರೋಪ ಕೇಳಿ ಬಂದಿದ್ದು, ಅಪಘಾತದಲ್ಲಿ ಮಹಿಳೆಯೊಬ್ಬರ ಕಾಲು ಮುರಿದಿದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 4ರಂದು ರಾತ್ರಿ 1:30ರ ವೇಳೆಗೆ ಬೆಂಗಳೂರಿನ ಬ್ಯಾಟರಾಯನಪುರ ಎಂಎಂ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಕಿರಣ್, ಅನುಷಾ, ಅನಿತಾ ಎಂಬವರು ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳಿದ್ದು, ಭಯದಿಂದ ಕಿರಣ್ ಬೈಕ್ ಅನ್ನು ಸ್ವಲ್ಪ ಬಲಕ್ಕೆ ತಂದಿದ್ದಾರೆ. ಈ ವೇಳೆ ವೇಗವಾಗಿ ಬಂದ ದಿವ್ಯಾ ಸುರೇಶ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮೂವರೂ ಬೈಕ್‌ನಿಂದ ಬಿದ್ದಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಅನಿತಾ ಎಂಬವರ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿದೆ.
ದಿವ್ಯಾ ಸುರೇಶ್ ಕಾರು ನಿಲ್ಲಿಸದೇ, ಗಾಯಾಳಿಗೆ ಚಿಕಿತ್ಸೆ ಕೊಡಿಸಲೂ ಯತ್ನಿಸದೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಗಾಯಾಳು ಸಂಬಂಧಿ ಕಿರಣ್ ಬಳಿಕ 7ನೇ ತಾರೀಕು ಬ್ಯಾಟರಾಯನಪುರ ಸಂಚಾರಿ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಘಟನೆಯ ಸ್ಥಳದ ಸಿಟಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಟಿ ದಿವ್ಯಾ ಸುರೇಶ್ ಕಾರ್ ಡಿಕ್ಕಿ ಹೊಡೆದು ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ; ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
ದಿವ್ಯಾ ಸುರೇಶ್ ಅವರನ್ನು ಪೊಲೀಸರು ಕರೆಸಿ ವಿಚಾರಿಸಿದ್ದು, ಬಳಿಕ ಅವರ ಕಾರು ಪತ್ತೆ ಮಾಡಿ ಸೀಜ್ ಮಾಡಲಾಗಿದೆ. ರಾತ್ರೋ ರಾತ್ರಿ ಬಂದು ದಿವ್ಯಾ ಸುರೇಶ್ ಕಾರು ಬಿಡಿಸಿಕೊಂಡು ಹೋಗಿದ್ದಾರೆ. ಸದ್ಯ ಬ್ಯಾಟರಾಯನಪುರ ಸಂಚಾರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ದೂರುದಾರರ ಹೇಳಿಕೆ
ನಮ್ಮ ಸಂಬಂಧಿ ಅನುಷಾಗೆ ಹುಷಾರಿರಲಿಲ್ಲ. ಹೀಗಾಗಿ ರಾತ್ರಿ ಗಿರಿನಗರ ಆಸ್ಪತ್ರೆಗೆ ಹೋಗ್ತಾ ಇದ್ದೆವು. ಬೈಕ್‌ನಲ್ಲಿ ಮಧ್ಯೆ ಅನುಷಾ ಕುಳಿತಿದ್ದರು. ನಾನು ಬೈಕ್ ಓಡಿಸುತ್ತಾ ಇದ್ದೆ. ಅನಿತಾ ಹಿಂದೆ ಕುಳಿತಿದ್ದರು. ಏಕಾಏಕಿ ಕ್ರಾಸ್‌ನಲ್ಲಿ ಬಂದು ದಿವ್ಯಾ ಸುರೇಶ್ ಕಾರು ಅನಿತಾ ಅವರ ಕಾಲಿಗೆ ಗುದ್ದಿದೆ. ನಾವೆಲ್ಲರೂ ಕೆಳಗೆ ಬಿದ್ದೆವು. ಕೂಗಿದರೂ ನಿಲ್ಲಿಸದೇ ದಿವ್ಯಾ ಸುರೇಶ್ ಕಾರು ತೆಗೆದುಕೊಂಡು ಎಸ್ಕೇಪ್ ಆದರು. ಬಳಿಕ ನಾವು ಬಂದು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದೆವು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ದಿವ್ಯಾ ಸುರೇಶ್, ಅನಿತಾ ಹೇಗಿದ್ದಾರೆ ಎಂದು ಸಹ ವಿಚಾರಿಸಿಲ್ಲ. ನಾವು ಮೈಸೂರು ಕಡೆಯಿಂದ ಬಂದು ಇಲ್ಲಿ ಕ್ಯಾಬ್ ಓಡಿಸಿ ಜೀವನ ಮಾಡುತ್ತಿದ್ದೇವೆ. ಅನಿತಾ ಟೈಲರಿಂಗ್ ಕೆಲಸ ಮಾಡ್ತಾರೆ. ಕಾಲಿನ ಮಂಡಿ ಚಿಪ್ಪು ಒಡೆದು ಹೋಗಿದೆ. ಹೀಗಾಗಿ ಒಂದು ವರ್ಷ ಅನಿತಾ ಓಡಾಡೋ ಹಾಗಿಲ್ಲ. ಬಿಜೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು ಆಪರೇಷನ್ ಮಾಡಿದ್ದಾರೆ. ಎರಡು ಲಕ್ಷ ರೂಪಾಯಿ ಖರ್ಚು ಆಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಕಿರಣ್ ಅವರು ದೂರು ನೀಡಿದ್ದಾರೆ.