Cheating Case: ₹5 ಕೋಟಿ ವಂಚನೆ ಆರೋಪ; ಬಾಲಿವುಡ್ ನಟರು ಸೇರಿ 22 ಜನರ ವಿರುದ್ಧ ಪ್ರಕರಣ ದಾಖಲು
Celebrity Scam: ಇತ್ತೀಚಿಗೆ ವಂಚನೆ ಪ್ರಕರಣಗಳು ಜಾಸ್ತಿ ಆಗುತ್ತಿದ್ದು, ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ 139 ಕಿರುತೆರೆ ನಟ-ನಟಿಯರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಪ್ರಕರಣದ ಆರೋಪದ ಮೇಲೆ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅಲ್ಲದೇ ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂ. ವಂಚನೆಯ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಿವುಡ್ ನಟರಾದ ಆಲೋಕ್ ನಾಥ್ ಮತ್ತು ಶ್ರೇಯಸ್ ತಲ್ಪಡೆ ಮೇಲೆಯೂ ಇಂತದೇ ಆರೋಪ ಕೇಳಿ ಬಂದಿದ್ದು, ಇವರಿಬ್ಬರು ಸೇರಿದಂತೆ ಒಟ್ಟು 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಲೋಕ್ ನಾಥ್- ಶ್ರೇಯಸ್ ತಲ್ಪಡೆ -
ಲಖನೌ: ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ 500ಕ್ಕೂ ಹೆಚ್ಚು ಜನರಿಗೆ ₹5 ಕೋಟಿ ರೂಪಾಯಿ ವಂಚಿಸಿರುವ ಘಟನೆ ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್(Bollywood) ನಟರಾದ ಆಲೋಕ್ ನಾಥ್(Alok Nath) ಮತ್ತು ಶ್ರೇಯಸ್ ತಲ್ಪಡೆ(Shreyas Talpade) ಸೇರಿದಂತೆ ಒಟ್ಟು 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಈ ವಂಚನೆ ‘ದಿ ಲೋನಿ ಅರ್ಬನ್ ಮಲ್ಟಿ ಸ್ಟೇಟ್ ಕ್ರೆಡಿಟ್ ಆ್ಯಂಡ್ ಥ್ರಿಫ್ಟ್ ಕೋ ಆಪರೇಟಿವ್ ಸೊಸೈಟಿ’ ಎಂಬ ಸಹಕಾರಿ ಸಂಸ್ಥೆಯ ಮೂಲಕ ನಡೆದಿದೆ. ಈ ಸಂಸ್ಥೆಯು ಹೂಡಿಕೆ ಮಾಡಿದ ಹಣವನ್ನು ಐದು ವರ್ಷಗಳಲ್ಲಿ ಎರಡು ಪಟ್ಟು ಮಾಡುತ್ತೇವೆ ಎಂದು ಜನರನ್ನು ನಂಬಿಸಿತ್ತು. ಆದರೆ, ಕಳೆದೊಂದು ವರ್ಷದಿಂದ ಹೂಡಿಕೆದಾರರಿಗೆ ಯಾವುದೇ ಲಾಭಾಂಶ ಅಥವಾ ಹಣ ಮರುಪಾವತಿಯಾಗಿಲ್ಲ.
ಈ ಸುದ್ದಿಯನ್ನೂ ಓದಿ: Viral Video: ರಸ್ತೆಬದಿಯಲ್ಲಿ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ; ಹೃದಯಸ್ಪರ್ಶಿ ವಿಡಿಯೊ ವೈರಲ್
ಇದರಿಂದ ಬೇಸತ್ತ ಹೂಡಿಕೆದಾರರು ಬಾಘಪತ್ ಕೊತ್ವಾಲಿ(Baghpat Kotwali) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟರಾದ ಶ್ರೇಯಸ್ ತಲ್ಪಡೆ ಮತ್ತು ಆಲೋಕ್ ನಾಥ್ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಚಾರ ಮಾಡಿದ್ದರು ಎಂದು ಆರೋಪಿಸಲಾಗಿದೆ. ಆದ್ದರಿಂದ ಅವರೂ ಈಗ ಈ ವಂಚನೆ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಸೇರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂತ್ರಸ್ತ ಮೀತ್ಲಿ ಗ್ರಾಮದ ನಿವಾಸಿ ಬಬ್ಲಿ, “ಬಿಜ್ರೌಲ್ ಗ್ರಾಮದ ಒಬ್ಬ ಯುವಕ ನಮ್ಮ ಗ್ರಾಮಕ್ಕೆ ಬಂದು ಈ ಸೊಸೈಟಿಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಲಾಭ ಸಿಗುತ್ತದೆ. ಈ ಸಂಸ್ಥೆಯು ಕೇಂದ್ರ ಸರ್ಕಾರದ ಕೃಷಿ ಮತ್ತು ಸಹಕಾರ ಸಚಿವಾಲಯದ ಅಡಿಯಲ್ಲಿ ನೋಂದಾಯಿತವಾಗಿದೆ ಎಂದು ಹೇಳಿದ್ದ. ಅವರ ಮಾತು ನಂಬಿ ಎಫ್‌ಡಿ ಮೂಲಕ ₹1.90 ಲಕ್ಷ ಹೂಡಿಕೆ ಮಾಡಿದ್ದೆ. ಬಳಿಕ ಏಕಾಏಕಿ ಸಾಫ್ಟವೇರ್ ಅನ್ನು ಸ್ಥಗಿತಗೊಳಿಸಿದ್ದಾರೆ," ಎಂದು ಆರೋಪಿಸಿದ್ದಾರೆ.
2024ರ ನವೆಂಬರ್ 27ರಂದು ಸಂಸ್ಥೆಯು ತನ್ನ ಸಾಫ್ಟ್‌ವೇರ್ ಅನ್ನು ಏಕಾಏಕಿ ಸ್ಥಗಿತಗೊಳಿಸಿದೆ. ಸಂಸ್ಥೆಯು ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಏಜೆಂಟ್‌ಗಳನ್ನು ನೇಮಿಸಿತ್ತು ಮತ್ತ ಸುಮಾರು 500 ಜನರಿಂದ ₹5 ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 22 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೋತ್ವಾಲಿ ಇನ್‌ಚಾರ್ಜ್ ದೀಕ್ಷಿತ ತ್ಯಾಗಿ ತಿಳಿಸಿದ್ದಾರೆ.