ಬೆಂಗಳೂರು, ನ.15: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಸೆಟ್)-2025ರ ಅಂತಿಮ ಕೀ ಉತ್ತರ ಮತ್ತು ತಾತ್ಕಾಲಿಕ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದೆ. ನವೆಂಬರ್ 2ರಂದು ನಡೆದಿದ್ದ ಕೆಸೆಟ್ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ವಯ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಲಿಂಕ್ ಮೂಲಕ ನ.17ರ ಮಧ್ಯಾಹ್ನ 12 ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಈ ಬಗ್ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆ ಹೊರಡಿಸಿದ್ದು, ನವೆಂಬರ್ 2ರಂದು ನಡೆದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ-2025 ಅಂತಿಮ ಕೀ ಉತ್ತರಗಳ ಜತೆಗೆ ತಾತ್ಕಾಲಿಕ ಫಲಿತಾಂಶವನ್ನೂ ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೇವಲ 13 ದಿನಗಳಲ್ಲಿ ಕೀ ಉತ್ತರಗಳ ಜತೆಗೆ ಫಲಿತಾಂಶ ಪ್ರಕಟಿಸಿರುವುದು ಇದೇ ಮೊದಲು. ಕೆಇಎ ವೆಬ್‌ಸೈಟ್‌ನ ನಿಗದಿತ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಲಿತಾಂಶ ಪಡೆಯಬಹುದು, ಆಕ್ಷೇಪಣೆಗಳು ಇದ್ದಲ್ಲಿ ನ.17ರಂದು ಮಧ್ಯಾಹ್ನ 12ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಕೆಸೆಟ್ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ನ.4ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ನ.6ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರಕಟಿತ ಕೀ ಉತ್ತರಗಳಿಗೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ, ವಿಷಯ ತಜ್ಞರ ಶಿಫಾರಸ್ಸಿನಂತೆ ಪರಿಷ್ಕೃತ ಕೀ ಉತ್ತರಗಳನ್ನು ನ.12ರಂದು ಮತ್ತು ಅಂತಿಮ ಕೀ ಉತ್ತರಗಳನ್ನು ನ.15ರಂದು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಅಂತಿಮ ಕೀ ಉತ್ತರಗಳನ್ವಯ ಇದೀಗ ತಾತ್ಕಾಲಿಕ ಅಂಕಪಟ್ಟಿಯನ್ನು ಪ್ರಕಟಿಸಲಾಗಿದೆ.
- ಕೆಸೆಟ್ ತಾತ್ಕಾಲಿಕ ಅಂಕಪಟ್ಟಿಗಾಗಿ ಈ ಲಿಂಕ್ ಕೆಇಎ ವೆಬ್‌ಸೈಟ್ ಮಾಡಿ
- ಕೆಸೆಟ್ ತಾತ್ಕಾಲಿಕ ಅಂಕಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಲು ಲಿಂಕ್ ಇಲ್ಲಿದೆ
ಕೆಸೆಟ್ ತಾತ್ಕಾಲಿಕ ಅಂಕಪಟ್ಟಿ ಪಡೆಯುವುದು ಹೇಗೆ?
- ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ https://cetonline.karnataka.gov.in/kea/indexnew
- ಮುಖಪುಟದಲ್ಲಿ ಪ್ರವೇಶ ಕೆಟಗರಿ ಕ್ಲಿಕ್ ಮಾಡಿ
- ನಂತರ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ-2025 ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅರ್ಜಿ ಸಂಖ್ಯೆ, ಜನ್ಮ ದಿನಾಂಕ ನಮೂದಿಸಿ, ಅಂಕಪಟ್ಟಿ ಪಡೆಯಿರಿ
ಈ ಸುದ್ದಿಯನ್ನೂ ಓದಿ | KSET 2025 Key Answer: ಕೆಸೆಟ್-2025ರ ಕೀ ಉತ್ತರ ಪ್ರಕಟ; ವೆಬ್‌ಸೈಟ್ ಲಿಂಕ್ ಇಲ್ಲಿದೆ
ಕೆಸೆಟ್ ಅರ್ಹತೆ ಪಡೆಯಲು ಎಷ್ಟು ಅಂಕ ಬೇಕು?
ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಪದವಿ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.
ಕೆಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಹಾಗೂ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ವಿಶೇಷ ಚೇತನ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ 50 ಅಂಕ ಪಡೆದಿರಬೇಕು. ಇನ್ನು ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಲು ಕೆಸೆಟ್ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಕನಿಷ್ಠ ಶೇ. 40 ಅಂಕಗಳು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ವಿಶೇಷ ಚೇತನ, ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ.35 ಒಟ್ಟು ಅಂಕಗಳು ಅಗತ್ಯವಿದೆ.