ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ ಕಾನೂನು ಸಮರ; ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು

Darshan Fans: ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದಿದ್ದ ತಮಗೆ ಅಶ್ಲೀಲ ಸಂದೇಶ ಕಳುಹಿಸುವವರ ವಿರುದ್ಧ ರಮ್ಯಾ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ದರ್ಶನ್ ಫ್ಯಾನ್ಸ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ದೂರು ನೀಡಿದರು.

ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ ಕಾನೂನು ಸಮರ; ಕಮಿಷನರ್‌ಗೆ ದೂರು

Ramesh B Ramesh B Jul 28, 2025 9:34 PM

ಬೆಂಗಳೂರು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಅರೋಪಿ ನಟ ದರ್ಶನ್‌ (Darshan) ಸದ್ಯ ಜೈಲಿನಿಂದ ಹೊರ ಬಂದಿದ್ದು, ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ತಮಗೆ ಅಶ್ಲೀಲ ಕಮೆಂಟ್‌ ಮಾಡಿದ ದರ್ಶನ್ ಅಭಿಮಾನಿಗಳ (Darshan Fans) ವಿರುದ್ಧ ಇದೀಗ ರಮ್ಯಾ (Actress Ramya) ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ದರ್ಶನ್‌ ಫ್ಯಾನ್ಸ್‌ ರಮ್ಯಾ ವಿರುದ್ಧ ಕೆಟ್ಟದಾಗಿ ಕಮೆಂಟ್‌ ಮಾಡಲು ಆರಂಭಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರಿಗೆ ಅಸಭ್ಯ ಸಂದೇಶಗಳನ್ನು ಕಳಿಸಲಾಗಿತ್ತು. ಇದೀಗ ರಮ್ಯಾ ಅಂತಹವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ದರ್ಶನ್ ಫ್ಯಾನ್ಸ್ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ (Bengaluru Police Commissioner) ಕಚೇರಿಗೆ ಆಗಮಿಸಿ ದೂರು ನೀಡಿದರು.

ದರ್ಶನ್‌ ಫ್ಯಾನ್ಸ್‌ ವಿರುದ್ಧ ದೂರು ನೀಡುವುದಾಗಿ ಮೊದಲೇ ರಮ್ಯಾ ಸೂಚನೆ ನೀಡಿದ್ದರು. ಇದೀಗ ಅಶ್ಲೀಲ ನಿಂದನೆ ಬಗ್ಗೆ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ದೂರು ದಾಖಲಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರಮ್ಯಾ ʼʼಎಲ್ಲ ಹೆಣ್ಣುಮಕ್ಕಳ ಪರವಾಗಿ ದೂರು ಕೊಟ್ಟಿದ್ದೇನೆ. ಇನ್ಮುಂದೆ ಈ ರೀತಿ ಆಗಬಾರದು ಎಂದು ದೂರು ನೀಡಿದ್ದೀನಿʼʼ ಎಂದು ಹೇಳಿದರು. ಇತ್ತ ಮಹಿಳಾ ಆಯೋಗ ಅಶ್ಲೀಲವಾಗಿ ಸಂದೇಶ ಕಳಿಸಿದವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಕೊಳ್ಳಬೇಕು ಎಂದು ಕೋರಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.



ಈ ಸುದ್ದಿಯನ್ನೂ ಓದಿ: Actress Ramya: D ಬಾಸ್‌ ಫ್ಯಾನ್ಸ್‌ Vs ರಮ್ಯಾ ಪೋಸ್ಟ್‌ ವಾರ್‌; ʼಪದ್ಮಾವತಿʼಗೆ ರಕ್ಷಿತಾ, ವಿಜಯಲಕ್ಷ್ಮಿ ಟಾಂಗ್‌

ʼʼಸೆಲೆಬ್ರಿಟಿಯಾದ ನನಗೆ ಈ ರೀತಿ ಅಶ್ಲೀಲ ಕಮೆಂಟ್‌ ಮಾಡಿದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ? ಹೀಗಾಗಿ ದೂರು ನೀಡಿದ್ದೇನೆ. ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದಿನಾ ಅತ್ಯಾಚಾರವಾಗುತ್ತಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ. ಪುರುಷರಿಗೆ ಇರುವಷ್ಟೇ ಸ್ವಾಂತ್ರ್ಯ ಮಹಿಳೆಯರಿಗೂ ಇರಬೇಕು. ಹೀಗಾಗಿ ಎಲ್ಲರ ಪರವಾಗಿ ದೂರು ಕೊಟ್ಟಿದ್ದೇನೆ. ಕೆಲವು ವರ್ಷಗಳ ಹಿಂದೆ ಸುದೀಪ್‌ ಮತ್ತು ಯಶ್‌ ಫ್ಯಾನ್ಸ್‌ ಮಧ್ಯೆ ಜಗಳ ನಡೆದಾಗ ಮಕ್ಕಳ ವಿರುದ್ಧವೂ ಅಶ್ಲೀಲ ಕಮೆಂಟ್‌ ಮಾಡಿದ್ದರು. ಇದು ನಿಲ್ಲಬೇಕುʼʼ ಎಂದು ರಮ್ಯಾ ತಿಳಿಸಿದರು.

ದರ್ಶನ್‌ ಕೇಸ್‌ ಬಗ್ಗೆ ಜು. 24ರಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಸ್ಟೇಟ್‌ಮೆಂಟ್ ಉಲ್ಲೇಖಿಸಿ ರಮ್ಯಾ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಸಾಮಾನ್ಯ ಜನರಿಗೆ ಎಲ್ಲೋ ಒಂದು ಕಡೆ ಹೋಪ್ ಇದೆ. ನ್ಯಾಯ ಸಿಗುತ್ತೆ ಎಂದಿದ್ದರು. ಅದಾದ ಮೇಲೆ ಅವರಿಗೆ ದರ್ಶನ್‌ ಅಭಿಮಾನಿಗಳಿಂದ ಅಶ್ಲೀಲ ಮೆಸೇಜ್ ಬರಲು ಆರಂಭವಾಗಿತ್ತು.

ಈ ಬಗ್ಗೆ ಮಾತನಾಡಿದ್ದ ರಮ್ಯಾ, ʼ‘ರೇಣುಕಾಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇಂತಹ ಸ್ತ್ರೀದ್ವೇಷಿ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆʼʼ ಎಂದು ಹೇಳಿದ್ದರು.