ಬೆಂಗಳೂರು: ‘ಯಥಾ ಗುರು ತಥಾ ಶಿಷ್ಯ’ ಎಂಬ ನಾಣ್ಣುಡಿಗೆ ಅನ್ವಯರಾಗಿರುವ ನೃತ್ಯಗುರು ವಿ. ಮೇದಿನಿ ಭರತ್ ಮತ್ತು ಕಲಾವಿದೆ ಕು. ಶ್ರೇಯಾ ರಾಜಶೇಖರ್ ಹಿರೇಮಠ್ ಇಬ್ಬರೂ ಬಹುಮುಖ ಪ್ರತಿಭಾನ್ವಿತರು. ನೃತ್ಯಕಲಾವಿದೆ ಹಾಗೂ ಗುರುವಾಗಿ ಬದ್ಧತೆಯಿಂದ ‘ಚಿತ್ಸಭಾ ಕಲಾಶಾಲೆ’ ನೃತ್ಯಸಂಸ್ಥೆಯ ಮೂಲಕ ನೂರಾರು ಉದಯೋನ್ಮುಖ ಕಲಾವಿದರನ್ನು ರೂಪಿಸುತ್ತಿರುವ ಮೇದಿನಿಯವರ ನುರಿತ ಗರಡಿಯಲ್ಲಿ ತರಬೇತಿ ಪಡೆಯುತ್ತಿರುವ ಕಲಾಶಿಲ್ಪ ಈ ಶ್ರೇಯಾ. ಶ್ರೀ ರಾಜಶೇಖರ್ ಹಿರೇಮಠ ಮತ್ತು ಬಿ.ಹೆಚ್. ರೇಣುಕಾರ ಪುತ್ರಿ ಶ್ರೇಯಾ, ಕಳೆದ ಹಲವಾರು ವರ್ಷಗಳಿಂದ ಭರತನಾಟ್ಯಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಇವಳು ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ನೃತ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾಳೆ.
ಅಷ್ಟೇ ಅಲ್ಲದೇ ಅನೇಕ ವೇದಿಕೆಗಳಲ್ಲಿ ತನ್ನ ಪ್ರತಿಭಾ ಪ್ರದರ್ಶನ ಮಾಡಿದ್ದಾಳೆ. ರಂಗಭೂಮಿ- ಚಲನಚಿತ್ರಗಳ ಅಭಿನಯ ತರಬೇತಿ ಹೊಂದಿರುವ ಶ್ರೇಯಾಗೆ ಬರವಣಿಗೆ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕೂಡ ಹವ್ಯಾಸ. ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪದವಿ ತರಗತಿಯಲ್ಲಿ ಓದುತ್ತಿರುವ ಶ್ರೇಯಾ, ಇದೇ ತಿಂಗಳ 30 ಶನಿವಾರ ಸಂಜೆ 5.30 ಕ್ಕೆ ಬೆಂಗಳೂರಿನ ಜೆ.ಎಸ್.ಎಸ್. ಆಡಿಟೋರಿಯಂ ನಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಳ್ಳುತ್ತಿದ್ದಾಳೆ. ಇವಳ ನೃತ್ಯ ಕಲಾನೈಪುಣ್ಯವನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಆದರದ ಸ್ವಾಗತ.