Organ Transport: ಬೆಂಗಳೂರು ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಣೆ; ಇತಿಹಾಸದಲ್ಲೇ ಮೊದಲು!
Namma Metro: ಬೆಂಗಳೂರಿನ ವೈಟ್‌ಫೀಲ್ಡ್‌ನ ವೈದೇಹಿ ಆಸ್ಪತ್ರೆಯಿಂದ ಆರ್.ಆರ್.ನಗರದ ಸ್ಪರ್ಶ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲಿ ಮಾನವ ಯಕೃತ್ತನ್ನು ಸಾಗಿಸಲಾಗಿದೆ. ಒಬ್ಬ ವೈದ್ಯ ಮತ್ತು ಏಳು ಸಿಬ್ಬಂದಿ, ಶುಕ್ರವಾರ ರಾತ್ರಿ 8:38ಕ್ಕೆ ಯಕೃತ್ತನ್ನು ನಮ್ಮ ಮೆಟ್ರೋದಲ್ಲಿ ಸಾಗಿಸಿದ್ದಾರೆ. ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿ ಅಂಗಾಂಗ ಸಾಗಿಸಲಾಗಿದೆ.


ಬೆಂಗಳೂರು: ಬೆಂಗಳೂರು ಮೆಟ್ರೋ ಇತಿಹಾಸದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಮಾನವ ಅಂಗಾಂಗ ಸಾಗಣೆ ಮಾಡಲಾಗಿದೆ. ನಗರದ ವೈದೇಹಿ ಆಸ್ಪತ್ರೆಯಿಂದ ಆರ್.ಆರ್.ನಗರದ ಸ್ಪರ್ಶ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲಿ ಮಾನವ ಯಕೃತ್ತನ್ನು ಸಾಗಿಸಲಾಗಿದೆ. ಶುಕ್ರವಾರ ರಾತ್ರಿ 8:38ಕ್ಕೆ, ಯಕೃತ್ತನ್ನು ಒಬ್ಬ ವೈದ್ಯ ಮತ್ತು ಏಳು ಸಿಬ್ಬಂದಿ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ಬಂದು, ಅಲ್ಲಿಂದ ಆರ್.ಆರ್.ನಗರದ ಸ್ಪರ್ಶ ಆಸ್ಪತ್ರೆಗೆ ತಲುಪಿಸಿದ್ದಾರೆ.
ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ಹೊರಟು, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಎಎಸ್‌ಒ ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಆಂಬ್ಯುಲೆನ್ಸ್‌ಗೆ ಅಂಗಾಂಗ ವರ್ಗಾವಣೆ ಮಾಡುವಲ್ಲಿ ನೆರವಾದರು. ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು ಎನ್ನಲಾಗಿದೆ.
ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಮಯೋಚಿತ ಸಹಕಾರ ತೋರಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡ್‌ಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಚರಣೆ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಸಂಯುಕ್ತ ಕಾರ್ಯವಿಧಾನ ಆದೇಶ (JPO)ದ ಮಾರ್ಗಸೂಚಿಗಳಡಿ ನೆರವೇರಿಸಲಾಯಿತು.
ಈ ಸಾಧನೆ ಮಾಡಿದ ದೇಶದ 2ನೇ ಮೆಟ್ರೋ
ಇನ್ನು ಅಂಗಾಂಗ ಸಾಗಣೆ ಮೂಲಕ ಬೆಂಗಳೂರು ಮೆಟ್ರೋ ಈ ಸಾಧನೆ ಮಾಡಿದ ದೇಶದ 2ನೇ ಮೆಟ್ರೋ ಸಂಸ್ಥೆಯಾಗಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಹೈದರಾಬಾದ್ ಮೆಟ್ರೋ ರೈಲಿನಲ್ಲಿ ಅಂಗಾಂಗ ಸಾಗಣೆ ಮಾಡಲಾಗಿತ್ತು. ಅಂದು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಜೀವಂತ ಹೃದಯವನ್ನು ಸಾಗಾಟ ಮಾಡಲಾಗಿತ್ತು.