ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧೆಡೆ ಸೋಮವಾರ ಸಂಜೆ ಭಾರಿ ಮಳೆಯಾಗಿದೆ (Bengaluru Rains). ಇದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿ, ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಟೌನ್ ಹಾಲ್, ಕಾರ್ಪೋರೇಷನ್, ಕೆ.ಆರ್ ಮಾರ್ಕೆಟ್, ಜಯನಗರ, ಜೆಪಿ ನಗರ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್, ಮಲ್ಲೇಶ್ವರಂನಲ್ಲಿ ಬಿರುಸಿನ ಮಳೆಯಾಗಿದೆ.
ಧಾರಾಕಾರ ಮಳೆಯಿಂದ ಬಿನ್ನಿ ಮಿಲ್ ಮುಖ್ಯ ರಸ್ತೆ, ಕೆ.ಆರ್. ವೃತ್ತದ ಕೆಳಸೇತುವೆ, ಬನ್ನೇರುಘಟ್ಟ ಮುಖ್ಯರಸ್ತೆ, ದರ್ಗಾ ರಸ್ತೆ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ, ಬಿಳೇಕಲ್ಲಿ ಕಡೆಯಿಂದ ಜಿಡಿ ಮರ ಕಡೆಗೆ, ವೀರಸಂದ್ರ ಜಂಕ್ಷನ್ ಕಡೆಯಿಂದ ಹೊಸೂರು ರಸ್ತೆ ಕಡೆಗೆ, ಜಯದೇವ ಯು ಟರ್ನ್, ವರ್ತೂರು ಕೋಡಿ ಬಸ್ ನಿಲ್ದಾಣ ಕಡೆಯಿಂದ ವೈಟ್‌ಫೀಲ್ಡ್ ಕಡೆಗೆ, ವರ್ತೂರು ಕೋಡಿಯಿಂದ ತೂಬರಹಳ್ಳಿ ಮಾರ್ಗದಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿತ್ತು.
ಇನ್ನು ದೊಡ್ಡನೆಕುಂದಿ ಔಟರ್ ರಿಂಗ್ ರಸ್ತೆ, ವರ್ತೂರು ಪಿಎಸ್ ಕಡೆಯಿಂದ ವರ್ತೂರು ಕಾಲೇಜು, ಉತ್ತರಳ್ಳಿ ವೃತ್ತ, ಮೆಜೆಸ್ಟಿಕ್ ಬಸ್ ನಿಲ್ದಾಣ, ಎಸ್‌ಜೆಪಿ ರಸ್ತೆ, ರೂಪೇನ ಅಗ್ರಹಾರ ಕಡೆಯಿಂದ ಬೊಮ್ಮನಹಳ್ಳಿ, ರೂಬಿ2 ಜಂಕ್ಷನ್, ಬೆಳ್ಳಂದೂರು ಡೌನ್ ರ‍್ಯಾಂಪ್, ಇಕೋಸ್ಪೇಸ್, ಬೆಳ್ಳಂದೂರು, ಬೊಮ್ಮನಹಳ್ಳಿ ಕಡೆಯಿಂದ ರೂಪೇನಗ್ರಹಾರ ರಸ್ತೆಯಲ್ಲಿ ಭಾರಿ ಮಳೆಯಿಂದ ವಾಹನ ಸವಾರರು ಪರದಾಡಿದರು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 21°C ಇರುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ | Viral Video: ಭೀಕರ ಮಳೆಗೆ ಮನೆಯೇ ಧ್ವಂಸ! ಆದ್ರೆ ಸೀಲಿಂಗ್ ಫ್ಯಾನ್ ಮಾತ್ರ ಹಾಗೆಯೇ ಉಳಿದಿದೆ- ವಿಡಿಯೊ ನೋಡಿ
ಯೆಲ್ಲೋ ಅಲರ್ಟ್; ಮೀನುಗಾರರಿಗೆ ಎಚ್ಚರಿಕೆ
ನಾಳೆ (ಸೆ.2)ರಂದು ದಕ್ಷಿಣ ಕನ್ನಡ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದರಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಸೆ.2 ರಿಂದ 4ರವರೆಗೆ ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಹವಾಮಾನ ಇಲಾಖೆ ಸೂಚಿಸಿದೆ.