ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yaduveer wadiyar: ಜಾತ್ಯತೀತ ಪದದ ದುರ್ಬಳಕೆ ಆಗುತ್ತಿದೆ, ಹಿಂದೂ ಸಮಾಜ ಒಡೆಯಲಾಗುತ್ತಿದೆ: ಯದುವೀರ್ ಒಡೆಯರ್‌

Mysuru Dasara: ಸ್ವಾತಂತ್ರ್ಯದ ಬಳಿಕ ಭಾರತೀಯತೆ, ಸ್ವದೇಶಿ ದೃಷ್ಟಿಯಲ್ಲಿ ದೇಶವನ್ನು ಪುನರ್‌ ನಿರ್ಮಾಣ ಮಾಡಲು ಅವಕಾಶವಿತ್ತು. ಆದರೆ, ಬ್ರಿಟಿಷರ ಆಲೋಚನೆಗಳು ಇನ್ನೂ ದೇಶದಲ್ಲಿ ಉಳಿದಿವೆ. ಅದನ್ನು ನಾವು ಎದುರಿಸಬೇಕಾಗಿದೆ ಎಂದು ಸಂಸದ ಹಾಗೂ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ಜಾತ್ಯತೀತ ಪದದ ದುರ್ಬಳಕೆ ಆಗುತ್ತಿದೆ, ಹಿಂದೂ ಸಮಾಜ ಒಡೆಯಲಾಗುತ್ತಿದೆ

-

Prabhakara R Prabhakara R Sep 16, 2025 8:27 PM

ಬೆಂಗಳೂರು: ಮೂಲ ಸಂವಿಧಾನದಲ್ಲಿ ಜಾತ್ಯತೀತತೆ ಪದ ಇರಲಿಲ್ಲ. ಜಾತ್ಯತೀತತೆ ಎಂಬುವುದು ಭಾರತೀಯ, ಹಿಂದೂ ಸಮಾಜದಲ್ಲಿ ಸ್ವಾಭಾವಿಕವಾಗಿ ಇರುವ ತತ್ವವಾಗಿತ್ತು. ಆದರೆ, ಇಂದು ಜಾತ್ಯತೀತ, ಸಾಮಾಜಿಕ ನ್ಯಾಯ ಎಂಬ ಪದಗಳು ದುರ್ಬಳಕೆಯಾಗುತ್ತಿದೆ. ಈ ಮೂಲಕ ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ಹಾಗೂ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ಹೊರಹಾಕಿದರು.

ಪರಿವರ್ತನಾ ಟ್ರಸ್ಟ್‌ನಿಂದ ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು ದಸರಾ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಚಾಮುಂಡಿ ದೇವಿ ದೇಗುಲ ಹಿಂದೂಗಳ ಆಸ್ತಿ ಎಂದು ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ಒದಗುತ್ತದೆ ಎಂದು ನಾನು ಎಂದೂ ಭಾವಿಸಿರಲಿಲ್ಲ. ದಸರಾ ಕುರಿತು ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಹಯವದನರಾವ್‌ ಅವರು ಮೈಸೂರು ಇತಿಹಾಸದ ಜತೆಗೆ ʼಮೈಸೂರಿನ ದಸರಾʼ ಎಂಬ ಪುಸ್ತಕ ಬರೆದಿದ್ದಾರೆ. ಇದರಲ್ಲಿ ದಸರಾ ಬಗ್ಗೆ ಸಮಗ್ರ ಮಾಹಿತಿ ಇದೆ. ತಾಯಿ ಚಾಮುಂಡೇಶ್ವರಿ, ಮಹಿಷಾಸುರನನ್ನು ಸಂಹಾರ ಮಾಡಿದ್ದು ದಸರಾ ಸಮಯದಲ್ಲಿ. ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ.



ವಿಜಯನಗರ ಸಾಮ್ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ದಸರಾ ಆಯೋಜಿಸಲಾಗುತ್ತಿತ್ತು. ಎಲ್ಲಾ ಮಹಾಮಂಡಲೇಶ್ವರರು ದಸರಾವನ್ನು ಆಚರಣೆ ಮಾಡುತ್ತಿದ್ದರು. 1610ರಲ್ಲಿ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಆರಂಭವಾಯಿತು. ಟಿಪ್ಪು ಸುಲ್ತಾನ್‌ ಕಾಲದಲ್ಲಿ ಮನೆಯಲ್ಲೇ ದಸರಾ ನಡೆಯಿತು. ಅದು ಬಿಟ್ಟರೆ ಉಳಿದ ಸಮಯದಲ್ಲಿ ದಸರಾ ಅದ್ಧೂರಿಯಾಗಿ ನಡೆದಿದೆ. ಸ್ವಾತಂತ್ರ್ಯ ನಂತರ ಅಂದಿನ ರಾಜ್ಯ ಸರ್ಕಾರದ ನಿಲುವು ದಸರಾ ಪರ ಇರಲಿಲ್ಲ. ಅಂದಿನ ಸಿಎಂ ಕೆಂಗಲ್‌ ಹನುಮಂತಯ್ಯ ಅವರು, ಇದು ಅರಮನೆಗೆ ಸೇರಿದ ಆಚರಣೆ, ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು ಎಂದು ತಿಳಿಸಿದರು.

1972ರಲ್ಲಿ ರಾಜ ವಂಶಸ್ಥರಿಗೆ ಇದ್ದ ವಿಶೇಷ ಹಕ್ಕುಗಳನ್ನು ರದ್ದು ಮಾಡಲಾಯಿತು. ಇದರಿಂದ ನಮ್ಮ ತಾತನವರಾದ ಜಯಚಾಮರಾಜೇಂದ್ರ ಒಡೆಯರ್ ಅವರು, ಅರಮನೆಯೊಳಗೇ ದಸರಾ ಮಾಡಲು ನಿರ್ಧರಿಸಿದ್ದರು. ಇದರಿಂದ ಹೊರಗೆ ಮೆರವಣಿಗೆ ರದ್ದಾಯಿತು. 1972 ರಿಂದ 1990ರವರೆಗೆ ಯಾವುದೇ ಮೆರವಣಿಗೆ ಇರಲಿಲ್ಲ. ಒಂದಷ್ಟು ಜನ ನಾವು ಸರ್ಕಾರದ ಜತೆ ದಸರಾ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಮುಂದಾದರು.

ಅದಾದ ನಂತರ 1979ರಲ್ಲಿ ದೇವರಾಜ ಅರಸ್‌ ಅವರು ದಸರಾ ಸಾರ್ವಜನಿಕ ಆಚರಣೆಯನ್ನು ಸರ್ಕಾರದ ವತಿಯಿಂದ ಮಾಡುತ್ತೇವೆ ಎಂದು ಹೇಳಿದರು. ಆಗ ದಸರಾ ಕೊನೆಯ ಮಹಾರಾಜರು ಶಮೀ ವೃಕ್ಷದ ಬಳಿ ತೆರಳಿ ಪೂಜೆ ಸಲ್ಲಿಸುತ್ತಿದ್ದ ವಿಜಯ ಯಾತ್ರೆಯೂ ಜಂಬೂ ಸವಾರಿಯಾಗಿ ಬದಲಾಯಿತು. ಹೀಗಾಗಿ ಅರಮನೆಯೊಳಗೆ ವಿಜಯಯಾತ್ರೆ ನಡೆಯುತ್ತಿತ್ತು. ಇದು ಇವತ್ತಿನ ದಸರಾ ಪರಿಸ್ಥಿತಿಯಾಗಿದೆ.

ಅರಮನೆಯಲ್ಲಿ ಧಾರ್ಮಿಕ ಆಚರಣೆ ನಡೆಯುತ್ತದೆ. ಆದರೆ ಸರ್ಕಾರದ್ದು ಸಾಂಸ್ಕೃತಿಕ ಆಚರಣೆ. ಭಾರತೀಯ ಸಂಸ್ಕೃತಿಗೆ ಧಕ್ಕೆ ತರದಂತೆ ನಡೆದುಕೊಳ್ಳಿ ಎನ್ನುವುದು ನಮ್ಮ ಆಗ್ರಹವಾಗಿದೆ. ಯಾವುದೇ ಸರ್ಕಾರ ಬಂದರೂ ಸರಿಯಾದ ರೀತಿಯಲ್ಲಿ ದಸರಾ ಮಾಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ.

ಈ ಸುದ್ದಿಯನ್ನೂ ಓದಿ | Ajit Hanamakkanavar: ಸರ್ಕಾರಿ ಕಚೇರಿಯಲ್ಲಿ ದೇವರಿಗೆ ಜಾಗ ಇಲ್ಲಾಂದ್ರೆ, ದೇವಸ್ಥಾನಗಳಲ್ಲಿ ಸರ್ಕಾರಕ್ಕೇನು ಕೆಲಸ?: ಅಜಿತ್ ಹನುಮಕ್ಕನವರ್

ಇನ್ನು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಹಿಂದೂ ಸಮಾಜದಲ್ಲಿ ಬೇರೆ ರೀತಿ ಅಲೋಚನೆಗಳನ್ನು ತರಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಭಾರತೀಯರದ್ದು ಕೀಳುಮಟ್ಟದ ಸಂಸ್ಕೃತಿ ಎಂದು ಮೆಕಾಲೆ ಹೇಳಿದ್ದರು. ಅಂತಹ ಆಲೋಚನಾ ಚೌಕಟ್ಟನ್ನು ಬ್ರಿಟಿಷರು ಸೃಷ್ಟಿಸಿದ್ದರು. ಅದರ ಮುಂದುವರಿದ ಭಾಗವೇ ಈಗ ನಾವು ಕಾಣುತ್ತಿದ್ದೇವೆ.

ಸ್ವಾತಂತ್ರ್ಯದ ಬಳಿಕ ಭಾರತೀಯತೆ, ಸ್ವದೇಶಿ ದೃಷ್ಟಿಯಲ್ಲಿ ದೇಶವನ್ನು ಪುನರ್‌ ನಿರ್ಮಾಣ ಮಾಡಲು ಅವಕಾಶವಿತ್ತು. ಆದರೆ, ಬ್ರಿಟಿಷರ ಆಲೋಚನೆಗಳು ಇನ್ನೂ ದೇಶದಲ್ಲಿ ಉಳಿದಿವೆ. ಅದನ್ನು ನಾವು ಎದುರಿಸಬೇಕಾಗಿದೆ ಎಂದು ಕರೆ ನೀಡಿದರು.