ಬೆಂಗಳೂರು: ಹಿಂದುಳಿದ ಸಮುದಾಯಗಳಿಂದ ಬಂದ ಯುವಜನರ ದೃಷ್ಟಿ ಯಲ್ಲಿ 'ಯಶಸ್ಸು' ಎಂದರೇನು? ಈ ಪ್ರಶ್ನೆಗೆ ಕಲೆಯ ಮೂಲಕ ಉತ್ತರ ಕಂಡುಕೊಳ್ಳಲು, ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ 'ಡ್ರೀಮ್ ಎ ಡ್ರೀಮ್' ಎಂಬ ಸರ್ಕಾರೇತರ ಸಂಸ್ಥೆಯು, 'ಅರವಾಣಿ ಆರ್ಟ್ ಪ್ರಾಜೆಕ್ಟ್'ನೊಂದಿಗೆ ಕೈಜೋಡಿಸಿದೆ. ತೃತೀಯಲಿಂಗಿ ಮತ್ತು ಮಹಿಳಾ ಕಲಾವಿದರ ನೇತೃತ್ವದ ಈ ಕಲಾ ಸಮೂಹದ ಸಹಯೋಗದೊಂದಿಗೆ, ಯುವಜನರ ಬದುಕಿನ ಕಥೆಗಳನ್ನೇ ವಸ್ತುವಾಗಿಸಿ ಕೊಂಡು ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಬೃಹತ್ ಸಾರ್ವಜನಿಕ ಭಿತ್ತಿಚಿತ್ರವನ್ನು ರಚಿಸಲಾಗು ತ್ತಿದೆ.
ಪ್ರಸ್ತುತ ವ್ಯವಸ್ಥೆಗಳು ವ್ಯಕ್ತಿಗಳನ್ನು 'ಯಶಸ್ವಿ' ಮತ್ತು 'ವಿಫಲ' ಎಂಬ ಸಾಂಪ್ರದಾಯಿಕ ಚೌಕಟ್ಟಿ ನಲ್ಲಿ ಹೇಗೆ ವರ್ಗೀಕರಿಸುತ್ತವೆ ಎಂಬುದನ್ನು ಆಳವಾಗಿ ಪ್ರಶ್ನಿಸುವ, 'ಡ್ರೀಮ್ ಎ ಡ್ರೀಮ್' ಸಂಸ್ಥೆಯ 'ಯಶಸ್ಸನ್ನು ಮರು ವ್ಯಾಖ್ಯಾನಿಸೋಣ' (Redefining Success) ಅಭಿಯಾನದ ಭಾಗವಾಗಿಯೇ ಈ ಭಿತ್ತಿಚಿತ್ರವು ರೂಪುಗೊಳ್ಳುತ್ತಿದೆ.
ಇದನ್ನೂ ಓದಿ: Bengaluru News: ನ್ಯಾಯಾಲಯದ ಆದೇಶದಂತೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು: ವಕೀಲ ಕಾರ್ತಿಕ್ ವಿ.
ಈ ಯೋಜನೆಗೆ ಚಾಲನೆ ನೀಡಲು, 'ಡ್ರೀಮ್ ಎ ಡ್ರೀಮ್' ಸಂಸ್ಥೆಯ 'ಥ್ರೈವಿಂಗ್ ಸೆಂಟರ್'ನ 30 ಯುವಜನರೊಂದಿಗೆ ವಿಶೇಷ ಕಲಾ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಈ ಕಾರ್ಯಾಗಾರ ಗಳಲ್ಲಿ ಯುವಜನರೊಂದಿಗೆ ವಿವರವಾದ ಸಂವಾದಗಳನ್ನು ನಡೆಸಿ, ಕಲೆಯ ಮೂಲಕ ಅವರ ಸ್ವಯಂ ಅಭಿವ್ಯಕ್ತಿ, ಗುರುತು, ಕನಸುಗಳು ಮತ್ತು ಯಶಸ್ಸಿನಂತಹ ಆಳವಾದ ಚಿಂತನೆಗಳನ್ನು ಅನ್ವೇಷಿಸಲಾಗುತ್ತದೆ.
"ನನ್ನ ಭಾವನೆಗಳೇ ಕಲೆ ಮತ್ತು ಅದನ್ನು ನಾನು ಹೇಗೆ ವ್ಯಕ್ತಪಡಿಸುತ್ತೇನೆ ಎಂಬುದೇ ಮುಖ್ಯ ಎಂದು ಈ ಕಾರ್ಯಾಗಾರಗಳಿಂದ ನಾನು ತಿಳಿದುಕೊಂಡೆ," ಎಂದು ಇದರಲ್ಲಿ ಭಾಗವಹಿಸುತ್ತಿರುವ ಲಹರಿ ಎಂ. ಎಂಬ ಯುವತಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯಾಗಾರಗಳ ಸಮಾರೋಪ ಹಂತದಲ್ಲಿ ಯುವಜನರ ಸಹಭಾಗಿತ್ವದಲ್ಲಿಯೇ ಒಂದು ಬೃಹತ್ ಸಾರ್ವಜನಿಕ ಭಿತ್ತಿಚಿತ್ರವು ರೂಪುಗೊಳ್ಳಲಿದೆ. ಇಂದಿನ ಯುವಜನರು ಯಶಸ್ಸನ್ನು ಹೇಗೆ ಗ್ರಹಿಸುತ್ತಾರೆ ಎಂಬು ದನ್ನು ಪ್ರತಿಬಿಂಬಿಸಲಿರುವ ಈ ಅಂತಿಮ ಕಲಾಕೃತಿಯು ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣ ಗೊಳ್ಳಲಿದೆ.
2023 ರಿಂದ 2025ರ ಅವಧಿಯಲ್ಲಿ, 14 ರಿಂದ 65 ವರ್ಷ ವಯಸ್ಸಿನ 325ಕ್ಕೂ ಹೆಚ್ಚು ಜನರೊಂದಿಗೆ ನಡೆಸಿದ ಸಂವಾದದ ಫಲವಾಗಿ ಈ ಅಭಿಯಾನ ರೂಪಿಸಲಾಗಿದೆ. ಈ ಸಂವಾದದ ಮೂಲಕ, ಯಶಸ್ಸು ಎನ್ನುವುದು ಎಲ್ಲರಿಗೂ ಅನ್ವಯವಾಗುವ ಒಂದೇ ಸೂತ್ರವಲ್ಲ, ಬದಲಾಗಿ ಅದು ಪ್ರತಿ ಯೊಬ್ಬರ ವೈಯಕ್ತಿಕ ಮತ್ತು ಸಾಂದರ್ಭಿಕ ಅನುಭವ ಎಂಬುದನ್ನು 'ಡ್ರೀಮ್ ಎ ಡ್ರೀಮ್' ಸಂಸ್ಥೆ ಮನಗಂಡಿದೆ.
ಆದರೂ, ನಮ್ಮ ಶಿಕ್ಷಣ ವ್ಯವಸ್ಥೆಯು ಕೇವಲ ಶೈಕ್ಷಣಿಕ ಸಾಧನೆ ಮತ್ತು ಭೌತಿಕ ಸಂಪತ್ತನ್ನೇ ಯಶಸ್ಸಿನ ಮಾನದಂಡವನ್ನಾಗಿಸಿಕೊಂಡು, ಅದರ ಕಠಿಣ ಮತ್ತು ಏಕಮುಖ ವ್ಯಾಖ್ಯಾನವನ್ನು ಹೇರುವುದನ್ನು ಮುಂದುವರಿಸಿದೆ. ಈ ಸಂಕುಚಿತ ದೃಷ್ಟಿಕೋನವು, ವಿಶೇಷವಾಗಿ ಬದುಕಿನ ಸಂಕಷ್ಟ ಗಳನ್ನು ಎದುರಿಸುತ್ತಿರುವ ಅಸಂಖ್ಯಾತ ಯುವಜನರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿದೆ.
ಈ ಅಭಿಯಾನದ ಕುರಿತು ಮಾತನಾಡಿದ 'ಡ್ರೀಮ್ ಎ ಡ್ರೀಮ್' ಸಂಸ್ಥೆಯ ನೇರ ಪರಿಣಾಮ ಕಾರ್ಯ ಕ್ರಮಗಳ ಸಹಾಯಕ ನಿರ್ದೇಶಕಿ ಪವಿತ್ರಾ ಕೆ.ಎಲ್. ಅವರು, "ಯುವಜನರು ಉತ್ತಮವಾಗಿ ಬೆಳೆಯಲು, ನಾವು ಯಶಸ್ಸಿನ ವ್ಯಾಖ್ಯಾನವನ್ನು ಬದಲಾಯಿಸಲು ಸಾಧ್ಯವೇ? 'ಯಶಸ್ಸನ್ನು ಮರು ವ್ಯಾಖ್ಯಾನಿಸೋಣ' ಅಭಿಯಾನದ ಮೂಲಕ, ಇಂದಿನ ಯುವಜನರ ವೈವಿಧ್ಯಮಯ ಹಾದಿಗಳು, ಅವರ ಗುರುತು, ಹೋರಾಟಗಳು ಮತ್ತು ಸಾಧನೆಗಳನ್ನು ಗುರುತಿಸುವಂತಹ, ಯಶಸ್ಸಿನ ಕುರಿತ ಹೆಚ್ಚು ಸೂಕ್ಷ್ಮ ಹಾಗೂ ಸಹಾನುಭೂತಿಯುಳ್ಳ ತಿಳಿವಳಿಕೆಯನ್ನು ಸಮಾಜದಲ್ಲಿ ಮೂಡಿಸುವ ಗುರಿ ಹೊಂದಿದ್ದೇವೆ" ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
'ಅರವಾಣಿ ಆರ್ಟ್ ಪ್ರಾಜೆಕ್ಟ್'ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಪೂರ್ಣಿಮಾ ಸುಕುಮಾರ್ ಅವರು, "ಸಾರ್ವಜನಿಕ ಕಲೆಗೆ ಜನರ ದೃಷ್ಟಿಕೋನಗಳನ್ನು ಬದಲಾಯಿಸಿ, ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಇದೆ ಎಂದು ನಾವು ನಂಬುತ್ತೇವೆ. ಈ ಭಿತ್ತಿಚಿತ್ರವು ತೃತೀಯ ಲಿಂಗಿ ಕಲಾವಿದರು ಮತ್ತು 30 ಯುವಜನರನ್ನು ಒಗ್ಗೂಡಿಸಿ, ಯಶಸ್ಸಿನ ಕಲ್ಪನೆಯನ್ನು ಮರು ವ್ಯಾಖ್ಯಾನಿಸುವ ಅವರ ಧ್ವನಿ ಗಳನ್ನು ಮತ್ತಷ್ಟು ಬಲಪಡಿಸಲಿದೆ," ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
'ಡ್ರೀಮ್ ಎ ಡ್ರೀಮ್' ಸಂಸ್ಥೆಯ ಕುರಿತು
'ಡ್ರೀಮ್ ಎ ಡ್ರೀಮ್' ಭಾರತದಲ್ಲಿ ಬಡತನದ ಬೇಗೆಯಲ್ಲಿ ಸಿಲುಕಿರುವ 13 ಕೋಟಿಗೂ ಅಧಿಕ ಮಕ್ಕಳ ಶೈಕ್ಷಣಿಕ ಅನುಭವವನ್ನೇ ಪರಿವರ್ತಿಸುವ ಉದಾತ್ತ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸು ತ್ತಿರುವ ಒಂದು ಲಾಭೋದ್ದೇಶರಹಿತ ಸಂಸ್ಥೆಯಾಗಿದೆ. ಪ್ರತಿ ಮಗುವೂ ಕೇವಲ ಅಕ್ಷರ ಕಲಿಯುವು ದಷ್ಟೇ ಅಲ್ಲ, ಬದುಕಿನಲ್ಲಿ ಸರ್ವತೋಮುಖವಾಗಿ 'ಉತ್ಕರ್ಷ' ಹೊಂದುವಂತೆ ಮಾಡುವುದೇ ಶಿಕ್ಷಣದ ಮೂಲ ಉದ್ದೇಶವಾಗಬೇಕು ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸು ವುದು ಈ ಸಂಸ್ಥೆಯ ಗುರಿಯಾಗಿದೆ.
1999ರಲ್ಲಿ ಸ್ಥಾಪನೆಯಾದಾಗಿನಿಂದ, ಮಕ್ಕಳು ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ, ಸಮೃದ್ಧವಾಗಿ ಬೆಳೆಯಲು ಪೂರಕವಾದ ಜೀವನ ಕೌಶಲ್ಯಗಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಪ್ರಸ್ತುತ, ಈ ಸಂಸ್ಥೆಯು ತನ್ನ ವಿಶಿಷ್ಟ ಕಾರ್ಯ ಕ್ರಮಗಳು, ನವೀನ ಪಠ್ಯಕ್ರಮಗಳು, ಸುಧಾರಿತ ಬೋಧನಾ ಕ್ರಮಗಳು ಮತ್ತು ಸಮಗ್ರ ಮೌಲ್ಯ ಮಾಪನ ಚೌಕಟ್ಟುಗಳ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿಯೇ ಒಂದು ಆಮೂಲಾಗ್ರ ಪರಿವರ್ತನೆಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲದೆ, ಶಿಕ್ಷಣದ ನಿಜವಾದ ಉದ್ದೇಶದ ಕುರಿತ ಸಮಾಜದ ಗ್ರಹಿಕೆಯನ್ನೇ ಬದಲಾಯಿಸುವ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತವಾಗಿದೆ. ರಾಜ್ಯ ಸರ್ಕಾರಗಳೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಹಾಗೂ ಇತರ ಸರ್ಕಾರೇತರ ಸಂಸ್ಥೆಗಳು ಮತ್ತು ದಾನಿಗಳ ಸಹಯೋಗದೊಂದಿಗೆ, 'ಡ್ರೀಮ್ ಎ ಡ್ರೀಮ್' ತನ್ನ ಕಾರ್ಯವ್ಯಾಪ್ತಿಯನ್ನು 7 ರಾಜ್ಯಗಳಿಗೆ ವಿಸ್ತರಿಸಿದ್ದು, ಈ ಮೂಲಕ 36 ಲಕ್ಷಕ್ಕೂ ಅಧಿಕ ಮಕ್ಕಳ ಬದುಕನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಅರವಾಣಿ ಆರ್ಟ್ ಪ್ರಾಜೆಕ್ಟ್' ಕುರಿತು
ಕಲೆ, ಜಾಗೃತಿ ಮತ್ತು ಸಾಮಾಜಿಕ ಭಾಗವಹಿಸುವಿಕೆಯ ಮೂಲಕ ತೃತೀಯಲಿಂಗಿ ಸಮುದಾಯ, ಎಲ್ಜಿಬಿಟಿಕ್ಯೂಐಎ+ ಸಮುದಾಯದ ಸ್ನೇಹಿತರು ಮತ್ತು ಇತರ ಮಿತ್ರರನ್ನು (cis-allies) ಒಗ್ಗೂಡಿಸಿ, ಅವರಲ್ಲಿ ಆತ್ಮವಿಶ್ವಾಸ ಮತ್ತು ಯೋಗಕ್ಷೇಮವನ್ನು ಮೂಡಿಸುವುದೇ 'ಅರವಾಣಿ ಆರ್ಟ್ ಪ್ರಾಜೆಕ್ಟ್' ನ ಪ್ರಮುಖ ಗುರಿಯಾಗಿದೆ. ಇದು ತೃತೀಯಲಿಂಗಿ ಮತ್ತು ಮಹಿಳೆಯರ (cis-women) ನೇತೃತ್ವದ ಒಂದು ವಿಶಿಷ್ಟ ಕಲಾ ಸಮೂಹವಾಗಿದ್ದು, ತೃತೀಯಲಿಂಗಿ ಸಮುದಾಯದ ಜನರು ಒಟ್ಟಾಗಿ ಸೇರಿ, ಹಲವಾರು ಕಲಾತ್ಮಕ ಯೋಜನೆಗಳನ್ನು ರಚಿಸಲು, ಸಹಯೋಗಿಸಲು ಮತ್ತು ಅವುಗಳ ಮೇಲೆ ಕೆಲಸ ಮಾಡಲು ಒಂದು ಸುರಕ್ಷಿತ ಮತ್ತು ಸೃಜನಾತ್ಮಕ ವೇದಿಕೆಯನ್ನು ಸೃಷ್ಟಿಸುವ ಧ್ಯೇಯವನ್ನು ಹೊಂದಿದೆ. ಈ ಸಮೂಹದ ಕಲಾಕೃತಿಗಳು, ಚಿತ್ರಕಲೆ ಮತ್ತು ನಿಯೋಜಿತ ಕಲಾ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಶೇಷ ತರಬೇತಿ ಪಡೆದ ತೃತೀಯಲಿಂಗಿ ಕಲಾವಿದರ ಸಹಯೋಗದೊಂದಿಗೆ ರೂಪುಗೊಳ್ಳುತ್ತವೆ. ಈ ಮೂಲಕ, ಸಾರ್ವಜನಿಕ ಸ್ಥಳಗಳಲ್ಲಿ ಕಲಾಕೃತಿಗಳನ್ನು ರಚಿಸಿ, ಸಮಾಜ ದಲ್ಲಿರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಸಮುದಾಯದ ಧ್ವನಿಯನ್ನು ಕಲೆಯ ಮೂಲಕ ಬಲಪಡಿಸುವುದು ಇವರ ಉದ್ದೇಶವಾಗಿದೆ.