ಬೀದರ್, ಫೆ. 8: ಗಂಡನ ಮನೆಯವರ ಮಾನಸಿಕ ಕಿರುಕುಳಕ್ಕೆ ಬಾಳಿ ಬದುಕಬೇಕಿದ್ದ ಜೀವವೊಂದು ಸಾವಿಗೆ ಶರಣಾಗಿದೆ. ಇದರಿಂದ ಅಮ್ಮನ ಪ್ರೀತಿಯಲ್ಲಿ ಮಿಂದೇಳಬೇಕಿದ್ದ 10 ತಿಂಗಳ ಮಗು ತಬ್ಬಲಿಯಾಗಿದೆ. ಹೌದು, ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ (Bidar News) ನಡೆದ 22 ವರ್ಷದ ಗೃಹಿಣಿಯ ಆತ್ಮಹತ್ಯೆ ಪ್ರಕರಣ ಸ್ಥಳೀಯರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಅಂಜನಾಬಾಯಿ ಶೇಖರ್ ಪಾಟೀಲ್ ಎಂದು ಗುರುತಿಸಲಾಗಿದೆ.
3 ವರ್ಷಗಳ ಹಿಂದೆ ಬಸವಕಲ್ಯಾಣದ ಶೇಖರ್ ಪಾಟೀಲ್‌ನನ್ನು ವರಿಸಿದ್ದ ಅಂಜನಾಬಾಯಿ ಈಗ 10 ತಿಂಗಳ ಮಗುವಿನ ತಾಯಿ. ʼʼಗಂಡನ ಮನೆಯವರು ಕಿರುಕುಳ ಮಿತಿ ಮೀರಿದ್ದರಿಂದ ಅಂಜನಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ತಿಂಗಳ ಮಗುವಿಗೆ ಇನ್ಯಾರು ದಿಕ್ಕು?ʼʼ ಎಂದು ಸಂಬಂಧಿಕರು ಗೋಳಾಡಿದ್ದಾರೆ.
ಘಟನೆ ವಿವರ
ಅಂಜನಾ ಅವರ ಪತಿ ಶೇಖರ್ ಪಾಟೀಲ್ ಶೇಖರ್ ಪಾನಿಪುರಿ ವ್ಯಾಪಾರಿ. ಅವರು ವ್ಯಾಪಾರ ಮುಗಿಸಿ ಬರುವಾಗ ನಿತ್ಯವೂ ರಾತ್ರಿ 11-12 ಗಂಟೆ ಆಗುತ್ತಿತ್ತು. ಈ ಬಗ್ಗೆ ತಕರಾರು ಎತ್ತಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದರು. ಇದೇ ವಿಚಾರವಾಗಿ ಅತ್ತೆ ಮಾವ ಅಂಜನಾ ಜತೆ ಜಗಳವಾಡಿದ್ದರು.
ಯುವ ವೈದ್ಯೆ ಆತ್ಮಹತ್ಯೆ, ಅಂಗೈಯ ಡೆತ್‌ನೋಟ್‌ನಲ್ಲಿತ್ತು ಆತ್ಮಹತ್ಯೆಯ ರಹಸ್ಯ
ಜಗಳ ಕ್ರಮೇಣ ವೈಯಕ್ತಿಕ ನಿಂದನೆಗೂ ಇಳಿದಿತ್ತು. ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ ಎಂದೆಲ್ಲ ಹೀಯಾಳಿಸಿದ್ದರು. ಜತೆಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಅಂಜನಾಬಾಯಿ ಹೆತ್ತವರ ಬಳಿಯೂ ಹೇಳಿಕೊಂಡಿದ್ದರು. ಅವರು ಆಕೆಗೆ ಸಮಾಧಾನ ಮಾಡಿ ಇಂದಲ್ಲ ನಾಳೆ ಸರಿ ಹೋಗಬಹುದು ಎನ್ನುವ ಭರವಸೆ ಮೂಡಿಸಿದ್ದರು. ಅದಾಗ್ಯೂ ಗಂಡನ ಮನೆಯವರ ಕಿರುಕುಳ ಕಡಿಮೆಯಾಗಿಲ್ಲ. ಇದರಿಂದ ಅಂಜನಾಬಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಸದ್ಯ ಅಂಜನಾ ಹೆತ್ತವರು ಮಗಳ ಆತ್ಮಹತ್ಯೆಗೆ ಆಕೆಯ ಗಂಡನ ಮನೆಯವರೇ ಕಾರಣ ಎಂದು ಆರೋಪಿಸಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಕೆಯ ತಂದೆ ವಿಜಯ ಕುಮಾರ್ ದೂರಿನ ಮೇರೆಗೆ ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ್ ಸೇರಿದಂತೆ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.