ಬೀದರ್: ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಒಟ್ಟು 9.35 ಲಕ್ಷ ರೂ. ಮೌಲ್ಯದ 1,539 ರಸಗೊಬ್ಬರ ಚೀಲಗಳನ್ನು ಜಪ್ತಿ ಮಾಡಿರುವುದು ತಾಲೂಕಿನ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಮನ್ನಳ್ಳಿ ಗ್ರಾಮದ ವೆಂಕಟೇಶ್ವರ ಫರ್ಟಿಲೈಸರ್ಸ್ ಮಳಿಗೆಯಲ್ಲಿ ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನಲ್ಲೆಯಲ್ಲಿ ದಾಳಿ ನಡೆಸಿ, ರಸಗೊಬ್ಬರ ಚೀಲ ಜಪ್ತಿ ಮಾಡಲಾಗಿದೆ ಎಂದು ಬೀದರ್ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ತಿಳಿಸಿದ್ದಾರೆ.
ಮಾರಾಟ ಮಳಿಗೆಯಲ್ಲಿ ಕೃಷಿ ಅಧಿಕಾರಿಗಳು ಪರಿಶೀಲನೆ ವೇಳೆ, ರೈತರಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿರುವುದು ಕಂಡುಬಂದಿದೆ. ಇದು ರಸಗೊಬ್ಬರ ನಿಯಂತ್ರಣ ಆದೇಶದ ಉಲ್ಲಂಘನೆಯಾಗಿದೆ. ಅಲ್ಲದೇ ರಸಗೊಬ್ಬರ ಪರವಾನಗಿಯಲ್ಲಿ ಅನುಮತಿಸದೇ ಇರುವ ರಸಗೊಬ್ಬರವು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ ನಿಗದಿತ ದರಕ್ಕಿಂತ ರಸಗೊಬ್ಬರ ಹೆಚ್ಚುವರಿ ಹಣ ಪಡೆದು ಮಾರಾಟ ಮಾಡುವುದು ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಪರಿಶೀಲನೆ ಸಮಯದಲ್ಲಿ ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ) ಮಛೇಂದ್ರನಾಥ ವಡ್ಡಿ, ಬೀದರ್ ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ ಹಾಗೂ ರೈ.ಸಂ.ಕೇಂದ್ರ. ಮನ್ನಳ್ಳಿ ಕೃಷಿ ಅಧಿಕಾರಿ ವಿಜಯಕುಮಾರ ತಂಡ ಉಪಸ್ಥಿತರಿದ್ದರು.
ಕಾಳಸಂತೆಯಲ್ಲಿ ರಸಗೊಬ್ಬರ ಮಾರಿದರೆ ಕಾನೂನು ಕ್ರಮ: ಈಶ್ವರ ಖಂಡ್ರೆ

ಬೀದರ್: ಜಿಲ್ಲೆಯಲ್ಲಿ ಯಾರಾದರೂ ಅಕ್ರಮವಾಗಿ ರಸಗೊಬ್ಬರ ದಾಸ್ತಾನು ಮಾಡಿದ್ದರೆ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ (Eshwar Khandre), ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರಿಗೆ ಲಿಖಿತ ಸೂಚನೆ ನೀಡಿರುವ ಅವರು ಮುಂಗಾರು ಆರಂಭವಾಗಿದ್ದು. ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ರಸಗೊಬ್ಬರದ ಕೊರತೆ ಬಾರದಂತೆ ಕ್ರಮ ವಹಿಸಲು ನಿರ್ದೇಶನ ನೀಡಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಅನ್ನದಾತರಿಗೆ ಅಗತ್ಯವಾದ ರಸಗೊಬ್ಬರ ಪೂರೈಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕ್ರಮವಹಿಸಲು ಸೂಚಿಸಿರುವ ಅವರು, 2025-26ನೇ ಸಾಲಿನಲ್ಲಿ ಜಿಲ್ಲೆಗೆ ಡಿಎಪಿ, ಯೂರಿಯಾ ಸೇರಿದಂತೆ ಯಾವ ಯಾವ ರಸಗೊಬ್ಬರ ಪೂರೈಸಲಾಗಿದೆ ಮತ್ತು ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಪ್ರಸ್ತುತ ದಾಸ್ತಾನಿದೆ ಎಂಬ ಮಾಹಿತಿಯನ್ನು ಒದಗಿಸಲೂ ಸೂಚಿಸಿದ್ದಾರೆ.
2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ಎಷ್ಟು ಮತ್ತು ಯಾವ ಯಾವ ರಸಗೊಬ್ಬರ ಪೂರೈಕೆಯಾಗಿದೆ. ಯಾವ ಯಾವ ತಾಲೂಕಿನಲ್ಲಿ ಎಷ್ಟು ರಸಗೊಬ್ಬರ ದಾಸ್ತಾನಿದೆ, ಕೊರತೆ ಏನಾದರೂ ಇದೆಯೇ ಎಂಬ ಮಾಹಿತಿಯನ್ನು 2 ದಿನಗಳ ಒಳಗಾಗಿ ವರದಿ ಸಲ್ಲಿಸಲು ಮತ್ತು ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.