ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀಟ್‌ ಹೋರಾಟಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಸಿ.ಟಿ. ರವಿಗೆ ಬಿಗ್‌ ರಿಲೀಫ್‌; ಬಂಧನಕ್ಕೆ ಹೈಕೋರ್ಟ್‌ ತಡೆ

CT Ravi: ನೀಟ್ ಪ್ರತಿಭಟನೆ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಪ್ರಕರಣ ಚಿಕ್ಕಮಗಳೂರಿನಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಅಲ್ಲದೆ ಎಫ್ಐಆರ್ ಪ್ರಶ್ನಿಸಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಜುಲೈ 31ಕ್ಕೆ ವಿಚಾರಣೆ ಮುಂದೂಡಿದೆ. ಇದರಿಂದ ಬಂಧನದ ಭೀತಿಯಿಂದ ಅವರು ಪಾರಾಗಿದ್ದಾರೆ.

ಸಿ.ಟಿ. ರವಿ ಮತ್ತು ಕರ್ನಾಟಕ ಹೈಕೋರ್ಟ್‌ (ಸಂಗ್ರಹ ಚಿತ್ರ)

ಬೆಂಗಳೂರು, ಜು. 27: ಬಂಧನದ ಭೀತಿಯಲ್ಲಿದ್ದ ಬಿಜೆಪಿ ನಾಯಕ, ಎಂಎಲ್‌ಸಿ ಸಿ.ಟಿ. ರವಿ (CT Ravi) ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದ್ದು, ನೀಟ್ ಪ್ರತಿಭಟನೆ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಪ್ರಕರಣ ಚಿಕ್ಕಮಗಳೂರಿನಿಂದ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ಅಲ್ಲದೆ ಎಫ್ಐಆರ್ ಪ್ರಶ್ನಿಸಿ ಸಿ.ಟಿ. ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka High Court) ಜುಲೈ 31ಕ್ಕೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದೆ. ಆ ಮೂಲಕ ಅವರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ತಡೆ ನೀಡುವಂತೆ ಕೋರಿ ಸಿ.ಟಿ. ರವಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡುವಂತೆ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು. ಅಲ್ಲದೆ ಅಲ್ಲಿಯವರೆಗೂ ಸಿಟಿ ರವಿ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಪೊಲೀಸರಿಗೆ ಸೂಚಿಸಿತು. ಇದರಿಂದ ಬಿಜೆಪಿ ನಾಯಕನ ಬಂಧನಕ್ಕೆ ಬ್ರೇಕ್‌ ಬಿದ್ದಿದೆ.

ಮುಸ್ಲಿಂ ಸಮಾಜದ ಬಗ್ಗೆ ನಾನು ಎಂದೂ ಮಾತಾಡಿಲ್ಲ, ದುಷ್ಕೃತ್ಯದಲ್ಲಿ ತೊಡಗುವವರ ವಿರುದ್ಧವಷ್ಟೇ ಟೀಕಿಸಿದ್ದೇನೆ: ಸಿ.ಟಿ. ರವಿ ಆಕ್ರೋಶ

ಏನಿದು ಪ್ರಕರಣ?

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ನಡೆದ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ್ದ ಸಿ.ಟಿ. ರವಿ, ‘ʼನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ 3 ಅಕ್ಷರ ಬರಲ್ಲ. ಅವರು ಬಂದು ನೀಟ್ ವಿರುದ್ಧ ಹೋರಾಟ ಮಾಡುತ್ತಿದ್ದರೆ ಅದರ ಅರ್ಥವೇನು?ʼʼ ಎಂದು ಪ್ರಶ್ನಿಸಿದ್ದರು.

ಇದರಿಂದ ಕೆರಳಿದ ಜಾಮಿಯಾ ಮಸೀದಿ ಸಮಿತಿಯ ಅಧ್ಯಕ್ಷ ಮುದಾಸಿರ್ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಪ್ರಿಯಾಂಕ್‌ ಖರ್ಗೆ ಎಕ್ಸ್‌ ಪೋಸ್ಟ್‌:



ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಈ ಮಧ್ಯೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಎಕ್ಸ್‌ ಮೂಲಕ ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼʼತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುತ್ತಾ ಸುಳ್ಳಿನ ಹಾರವನ್ನೇ ಹಾಕಿಕೊಳ್ಳುವ ಸಿ.ಟಿ ರವಿಯಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ. ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲʼʼ ಎಂದು ಹೇಳಿದ್ದಾರೆ.

ʼʼಕಳೆದ 3 ವರ್ಷಗಳಲ್ಲಿ ಯಾವುದೇ ಒಂದು ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿಯವರು ಅಸಹನೀಯರಾಗಿ ವರ್ತಿಸುತ್ತಿದ್ದಾರೆ. ಯಾವುದೇ ವಿಷಯವಿರಲಿ, ಅದಕ್ಕೆ ಪಾಕಿಸ್ತಾನ ಮತ್ತು ಹಿಂದೂ - ಮುಸ್ಲಿಂ ವಿಷಯವನ್ನು ಜೋಡಿಸುವುದು ದ್ವೇಷಸಂಜಾತ ಬಿಜೆಪಿಯ ಹುಟ್ಟುಗುಣ, ಬಿಜೆಪಿಯವರ ಅಸ್ತಿತ್ವ ಇರುವುದೇ ಸಮಾಜ ವಿಭಜನೆಯಲ್ಲಿ ಎನ್ನುವುದನ್ನು ಪದೇ ಪದೇ ಹೇಳಬೇಕಿಲ್ಲ. NEET ವಿದ್ಯಾರ್ಥಿಗಳ ಹೋರಾಟದ ವಿಷಯದಲ್ಲೂ ಧರ್ಮಗಳನ್ನು ಎಳೆದುತಂದ ಸಿ.ಟಿ. ರವಿ ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು NEET ಹೋರಾಟಕ್ಕೆ ಸಂಬಂಧವೇ ಇಲ್ಲದ ವಿಡಿಯೊ ಒಂದನ್ನ ತೋರಿಸಿ ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡಿದ್ದಾರೆʼʼ ಎಂದಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಒಂದು ದಿನದ ಮಟ್ಟಿಗೆ ಸಿಟಿ ರವಿ ಅಮಾನತು

ಸಿ.ಟಿ. ರವಿ ಅವರೇ ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ. ಆದರೆ ಸುಳ್ಳು ಹೇಳಲು ಹಿಂಜರಿಕೆ, ನೈತಿಕ ಭಯ, ಸಾಮಾಜಿಕ ಭಯ ಇರಬೇಕಾಗುತ್ತದೆ, ಅಂತಹದ್ದು ಯಾವುದೂ ತಮಗೆ ಇಲ್ಲ ಎನ್ನುವುದನ್ನು ನಿರೂಪಿಸುತ್ತಲೇ ಇದ್ದೀರಿ. ಈ ಹಿಂದೆ ಸದನದಲ್ಲಿ ತಾವು ಆಡಿದ ಮಾತಿನಿಂದಲೇ ನಿಮ್ಮ ಗುಣ ಏನೆಂದು ರಾಜ್ಯಕ್ಕೆ ತಿಳಿದಿದೆ, ಅಂದು ತಾವು ಆಡಿದ್ದ ಮಾತಿನ ತನಿಖೆಗೆ ಇಂದಿಗೂ ಧ್ವನಿ ಸ್ಯಾಂಪಲ್ ಕೊಡದಿರುವುದು ತಮ್ಮ ಪಲಾಯನವಾದ ಮತ್ತು ಅನೈತಿಕತೆಯನ್ನು ತೋರಿಸುತ್ತದೆ. ಕಾನೂನಿಗೆ ಸವಾಲು ಹಾಕುತ್ತೇನೆ ಎಂಬ ನಿಮ್ಮ ದ್ರಾಷ್ಟ್ಯ ನಡೆಯುವುದಿಲ್ಲ, ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿʼʼ ಎಂದು ಸವಾಲು ಹಾಕಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author