Suresh Kumar: ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ನೇತ್ರ, ದೇಹದಾನ
ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ಅವರ ನೇತ್ರ ಸೇರಿದಂತೆ ದೇಹದಾನ ಮಾಡಲಾಗಿದೆ. ಸೆಪ್ಟೆಂಬರ್ 23ರಂದು ಬೆಳಗ್ಗೆ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ಶಾಸಕ ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ನಿಧನ ಹೊಂದಿದ್ದರು.

ಸುರೇಶ್ ಕುಮಾರ್, ಸುಶೀಲಮ್ಮ -

ಬೆಂಗಳೂರು: ರಾಜಾಜಿನಗರದ (Rajajinagar) ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ (BJP MLA Suresh Kumar) ಅವರ ತಾಯಿ ಸುಶೀಲಮ್ಮ ಅವರ ನೇತ್ರ ಸೇರಿದಂತೆ ದೇಹದಾನ ಮಾಡಲಾಗಿದೆ. ಆ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸೆಪ್ಟೆಂಬರ್ 23ರಂದು ಬೆಳಗ್ಗೆ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ಶಾಸಕ ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ನಿಧನರಾದರು. ಕಳೆದ ಹಲವು ದಿನಗಳಿಂದ ಸುಶೀಲಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು.
ನಾರಾಯಣ ನೇತ್ರಾಯಲಕ್ಕೆ ಸುಶೀಲಮ್ಮ ಅವರ ಕಣ್ಣುಗಳನ್ನು ಮತ್ತು ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವಾಗಿ ನೀಡಲಾಗಿದೆ. ಈ ಕುರಿತಾಗಿ ಎಸ್. ಸುರೇಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ʼʼಮೊನ್ನೆ ನಮ್ಮನ್ನು ಬಿಟ್ಟು ತೆರಳಿದ ನನ್ನಮ್ಮ, ಸುಶೀಲಮ್ಮ ಟೀಚರ್ ಹೆಸರಿಗೆ ಸಿಕ್ಕ ಕೊನೆಯ CERTIFICATES (ನೇತ್ರದಾನ, ದೇಹದಾನ)ʼʼ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Suresh Kumar: ಬಿಜೆಪಿ ಶಾಸಕ ಸುರೇಶ್ ಕುಮಾರ್‌ಗೆ ಮಾತೃ ವಿಯೋಗ
ಸೆಪ್ಟೆಂಬರ್ 23ರಂದು ಫೇಸ್‌ಬುಕ್ ಮೂಲಕ ಸುರೇಶ್ ಕುಮಾರ್ ಮಾತೃ ವಿಯೋಗದ ಸುದ್ದಿ ಹಂಚಿಕೊಂಡಿದ್ದರು. ʼʼನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್...ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರುʼʼ ಎಂದು ಭಾವನಾತ್ಮಕವಾಗಿ ತಿಳಿಸಿದ್ದರು.
ಸುಶೀಲಮ್ಮ ಶಿಕ್ಷಕಿ ಆಗಿದ್ದರು. ಆ ಮೂಲಕ ಹಲವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ್ದರು. ಅಷ್ಟೇ ಅಲ್ಲದೆ ಸಮಾಜದಲ್ಲಿ ವಿವಿಧ ಆಯಾಮಗಳಲ್ಲಿ ಅವರು ಗುರುತಿಸಿಕೊಳ್ಳುವುರೊಂದಿಗೆ ಜನಪ್ರಿಯರಾಗಿದ್ದರು. ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋ-ಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.