ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ: ರಾಘವೇಶ್ವರ ಶ್ರೀ
Navaratra Namasya: ಎದುರಾಳಿಯ ಮೇಲೆ ಪ್ರಹಾರ ಮಾಡುವುದು ಶಕ್ತಿ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಅದು ನಿಜವಾಗಿಯೂ ಶಕ್ತಿಯಲ್ಲ. ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಸಂಯಮದಿಂದ ಎದುರಿಸುವ ಸಹನೆ ತೋರುವುದೇ ನಿಜವಾದ ಶಕ್ತಿ. ಈ ರೀತಿಯ ಸಹನೆ ಬಲ್ಲವನ ಎದುರು ಎಂತಹ ಶಕ್ತಿ ಎದುರಾದರೂ ಅಂತಿಮವಾಗಿ ಸಹನೆಯೇ ಗೆಲ್ಲಲಿದೆ ಎಂದು ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.

-

ಸಾಗರ: ಜಗತ್ತಿನಲ್ಲಿ ಸಹನೆಗಿಂತ ಮತ್ತೊಂದು ದೊಡ್ಡ ಅಸ್ತ್ರ ಇಲ್ಲವೇ ಇಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಸಾಗರದ ಅಗ್ರಹಾರದ ರಾಘವೇಶ್ವರ ಭವನದಲ್ಲಿ ನಡೆಯುತ್ತಿರುವ ʼನವರಾತ್ರ ನಮಸ್ಯಾʼ 4ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀಗಳು, ದೇವಿಯ ಸಹನೆಯನ್ನು ಬಣ್ಣಿಸುವಾಗ ನುಡಿದರು.

ಎದುರಾಳಿಯ ಮೇಲೆ ಪ್ರಹಾರ ಮಾಡುವುದು ಶಕ್ತಿ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಅದು ನಿಜವಾಗಿಯೂ ಶಕ್ತಿಯಲ್ಲ. ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ ಸಂಯಮದಿಂದ ಎದುರಿಸುವ ಸಹನೆ ತೋರುವುದೇ ನಿಜವಾದ ಶಕ್ತಿ. ಈ ರೀತಿಯ ಸಹನೆ ಬಲ್ಲವನ ಎದುರು ಎಂತಹ ಶಕ್ತಿ ಎದುರಾದರೂ ಅಂತಿಮವಾಗಿ ಸಹನೆಯೇ ಗೆಲ್ಲಲಿದೆ ಎಂದ ಅವರು, ಈ ರೀತಿಯ ಸಹನೆಯುಳ್ಳವರು ಎಂತಹ ಕಷ್ಟ ಎದುರಾದರೂ ಸಹಜವಾಗಿಯೇ ಇರುತ್ತಾರೆ. ಹೀಗೆ ಎಲ್ಲ ಸ್ಥಿತಿಯಲ್ಲಿಯೂ ಸಹಜವಾಗಿರುವ ವ್ಯಕ್ತಿಗಳ ಬದುಕು ನೆಮ್ಮದಿಯಿಂದ ಕೂಡಿರಲಿದೆ ಎಂದರು. ಕಷ್ಟ ಎದುರಿಸುವ ಆತ್ಮಸ್ಥೈರ್ಯ ಸದಾ ಬೆಳೆಸಿಕೊಳ್ಳಬೇಕು, ದೇವತೆಗಳಿಗೂ ಕಷ್ಟ ಬಂದಾಗ ಅದನ್ನು ಸಹನೆಯಿಂದ ಕೇಳಿ, ಸ್ಥೈರ್ಯ ನೀಡಿದ ದೇವಿ ಸಹನೆಗೊಂದು ಆದರ್ಶ ಎಂದು ತಿಳಿಸಿದರು.
ವಿಶೇಷವಾಗಿ ಲಲಿತೋಪಾಖ್ಯಾನ ಪ್ರವಚನಕ್ಕೆ ಪೂರಕವಾಗಿರುವ ದೇವಿ ಚಿತ್ರವನ್ನು ಸ್ಥಳದಲ್ಲಿಯೇ ಮೂಡಿಸುವ ಮೂಲಕ ಶ್ರೀ ಲಕ್ಷ್ಮಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಸಮಾಜ ಸಂಭ್ರಮ
ನವರಾತ್ರ ನಮಸ್ಯಾ ಅಂಗವಾಗಿ ಸಮಿತಿ ಕೊಡ ಮಾಡಿದ ಸಮಾಜ ಸಂಭ್ರಮ ಗೌರವವನ್ನು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜುನಾಥ್ ಆಚಾರ್ಯ, ಮಲ್ಲವ ಸಮಾಜದ ರಾಜೇಂದ್ರ ಆವಿನಹಳ್ಳಿ, ಚರೋಡಿ ಕೊಂಕಣಿ ಆಚಾರಿ ಸಮಾಜದ ಚಂದ್ರಶೇಖರ್ ಮತ್ತು ಗಾಣಿಗ ಸಮಾಜದ ಅಧ್ಯಕ್ಷ ನಾಗರಾಜ್ ಸ್ವೀಕರಿಸಿದರು. ನಗರಸಭೆಯ ಉಪಾಧ್ಯಕ್ಷೆ ಸವಿತಾ ವಾಸು, ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ವಿ. ಮಹೇಶ್ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.
ಶ್ರೀ ಮಠದ ಶಾಸನತಂತ್ರದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಎಡಪ್ಪಾಡಿ, ಸುಶಾಸನ ಖಂಡದ ಶ್ರೀ ಸಂಯೋಜಕ ಪ್ರವೀಣ ಭೀಮನಕೋಣೆ, ಮಹಾಮಂಡಲದ ಸಾಗರ ಪ್ರಾಂತ್ಯ ಉಪಾಧ್ಯಕ್ಷ ಶಾಂತರಾಮ ಹಿರೇಮನೆ, ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ರಾಮಚಂದ್ರಾಪುರ ಮಂಡಲದ ಸೇವಾ ಪ್ರಧಾನ ಶ್ರೀಕಾಂತ್ ಭಾಗಿ, ಸುಬ್ರಮಣ್ಯ ಐಸಿರಿ, ಶಾಂತಲಾ ಭಾಸ್ಕರ್, ಶ್ರೀನಾಥ ಸಾರಂಗ, ಎಂ.ಜಿ. ರಾಮಚಂದ್ರ ಮತ್ತಿತರರು ಇದ್ದರು.
ಈ ಸುದ್ದಿಯನ್ನೂ ಓದಿ | ತ್ಯಾಗದಿಂದ ಮಾತ್ರವೇ ಶ್ರೇಷ್ಠತೆ ಪಡೆಯುವುದಕ್ಕೆ ಸಾಧ್ಯ: ರಾಘವೇಶ್ವರ ಶ್ರೀ
ಇದಕ್ಕೂ ಮುನ್ನ ಬೆಳಗ್ಗೆ ನವಾರ್ಣ ಮಂತ್ರ ಹವನ, ಚಂಡಿಕಾ ಹವನ, ಶೈಲಜಾ ಉಪಾಸನೆ, ಶ್ರೀ ಪೂಜೆ, ಕುಂಕುಮಾರ್ಚನೆ, ಸುವರ್ಣ ಪಾದುಕಾ ಪೂಜೆ, ಉಡಿ ಸಮರ್ಪಣೆ, ಸ್ತೋತ್ರ ಸಮರ್ಪಣೆ, ಲಲಿತಾ ಅಷ್ಟೋತ್ತರ, ಭಜನೆ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ಶ್ರೀ ರಾಜರಾಜೇಶ್ವರಿ ಪೂಜೆ ನೆರವೇರಿತು.