Cabinet meeting: ಮೈಸೂರಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ; 3647 ಕೋಟಿ ರೂ. ಕಾಮಗಾರಿಗಳಿಗೆ ಸಂಪುಟ ಒಪ್ಪಿಗೆ
Cabinet meeting: ಬೆಂಗಳೂರು ಕೇಂದ್ರಿತ ಆಡಳಿತ ಮಾದರಿಗೆ ಬದಲಾಗಿ ಕರ್ನಾಟಕದ ವಿಕೇಂದ್ರೀಕೃತ ಆಡಳಿತ ಮಾದರಿಯನ್ನು ಅಳವಡಿಸಿಕೊಳ್ಳಲು ಉದ್ದೇಶಿಸಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ವಿಭಾಗದ ಸಂಪುಟ ಸಭೆ ಬಿಜಾಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.


ಚಾಮರಾಜನಗರ: ಜಿಲ್ಲೆಯ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಐತಿಹಾಸಿಕ ರಾಜ್ಯ ಸಚಿವ ಸಂಪುಟ (Cabinet meeting) ಸಭೆ ನಡೆದಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ಮೈಸೂರು ಕಂದಾಯ ವಿಭಾಗದ ಅಭಿವೃದ್ಧಿಗಾಗಿ ಇಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, 82ಕ್ಕೂ ಹೆಚ್ಚ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಜತೆಗೆ ಸುಮಾರು 3647 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ.
ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸರ್ಕಾರ ರಾಜ್ಯವನ್ನು ಸಮಗ್ರ ಅಭಿವೃದ್ಧಿ ಮಾಡಬೇಕೆಂಬ ದೃಷ್ಟಿಯಿಂದ ಬೆಂಗಳೂರು ಕೇಂದ್ರಿತ ಆಡಳಿತ ಮಾದರಿಗೆ ಬದಲಾಗಿ ಕರ್ನಾಟಕದ ವಿಕೇಂದ್ರೀಕೃತ ಆಡಳಿತ ಮಾದರಿಯನ್ನು ಅಳವಡಿಸಿಕೊಳ್ಳಲು ಉದ್ದೇಶಿಸಿದೆ. ಆದ್ದರಿಂದಲೇ ಕಲ್ಯಾಣ ಕರ್ನಾಟಕ ವಿಮೋಚನಾ ದಿವಸದಂದು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಿ ಆ ಭಾಗದ ಅಭಿವೃದ್ಧಿಗೆ ತೀರ್ಮಾನಿಸಿದ್ದೆವು. ಇದೀಗ ಮೈಸೂರು ಕಂದಾಯ ವಿಭಾಗದ ಅಭಿವೃದ್ಧಿಗಾಗಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ರೀತಿ ಮುಂದಿನ ದಿನಗಳಲ್ಲಿ ಬೆಳಗಾವಿ ವಿಭಾಗದ ಸಂಪುಟ ಸಭೆ ಬಿಜಾಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿ ಬೆಟ್ಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಇನ್ನು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದವರ ಗೌರವಾರ್ಥ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಮಾಹಿತಿ ನೀಡಿದರು.

ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಸಂಪುಟ ಸಭೆಯಲ್ಲಿ ಇಂದು ಕೈಗೊಂಡ ನಿರ್ಣಯಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
- ಸಣ್ಣ ನೀರಾವರಿ ಮತ್ತು ಜಲ ಸಂಪನ್ಮೂಲ ಇಲಾಖೆಗಳ ವತಿಯಿಂದ 29 ಕಾಮಗಾರಿಗಳನ್ನು 1787.87 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಯಿತು. ಇದರಿಂದ ಮೈಸೂರು ಕಂದಾಯ ವಿಭಾಗದ ಜಿಲ್ಲೆಗಳ ಜಲಾಶಯ, ಕೆರೆಗಳು, ಕಾಲುವೆಗಳ ಅಭಿವೃದ್ಧಿ ಮಾಡುವುದರಿಂದ ಈ ಭಾಗದ ನೀರಾವರಿ ಚಟುವಟಿಕೆಗಳನ್ನು ಸಮಗ್ರವಾಗಿ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ.
- ಪರಿಶಿಷ್ಟ ಪಂಗಡದ ಜನರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರಮುಖವಾಗಿ ನಾಲ್ಕು ವಿಷಯಗಳಿಗೆ 203.2 ಕೋಟಿ ರೂ.ಗಳನ್ನು ವಿನಿಯೋಗಿಸಿ ಈ ವರ್ಗಗಳ ಜನರ ಬದುಕಿನ ಸುಧಾರಣೆಗೆ ಮತ್ತು ಏಳಿಗೆಗಾಗಿ ತೀರ್ಮಾನಿಸಲಾಗಿದೆ.
- ಪರೋಕ್ಷವಾಗಿ ಮಾನವ-ಆನೆ ಸಂಘರ್ಷ ತಡೆಗಟ್ಟಲು 210.2 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
- ಈ ಭಾಗದ ನಗರಗಳ ಜನರ ಕುಡಿಯುವ ನೀರಿನ ಯೋಜನೆಗಳಿಗಾಗಿ ನಗರಾಭಿವೃದ್ಧಿ ಇಲಾಖೆ ವತಿಯಿಂದ 315 ಕೋಟಿ ರೂ.ಗಳನ್ನು ಒದಗಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ತೀರ್ಮಾನಿಸಲಾಯಿತು.
- ಈ ಜಿಲ್ಲೆಗಳ ಜನರ ಆರೋಗ್ಯ ಸುಧಾರಣೆಗೆ 228.14 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಯಿತು.
- ಪ್ರವಾಸೋದ್ಯಮ ಇಲಾಖೆ ವತಿಯಿಂದ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸುಮಾರು 300 ಕೋಟಿ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಯಿತು.
- ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕ ಕಲ್ಲೂರಿನಲ್ಲಿ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಹಾಗೂ ಶ್ರೀ ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸಂಪುಟ ಸಭೆ ತೀರ್ಮಾನಿಸಿದೆ.
- ಮೈಸೂರಿನ ಇಲವಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಕ್ಕೆ ಜಾಗ ಒದಗಿಸಲು ಉದ್ದೇಶಿಸಿದೆ.
- ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಗ್ರಾಮಕ್ಕೆ ಮಹಾತ್ಮ ಗಾಂಧಿಯವರೂ ಭೇಟಿ ಕೊಟ್ಟಿದ್ದರು. ಅದರ ನೆನಪಿಗಾಗಿ ಶತಮಾನೋತ್ಸವ ಭವನ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರವನ್ನು ನಿರ್ಮಿಸಲು ತೀರ್ಮಾನಿಸಿದೆ.
- ರನ್ ವೇ ವಿಸ್ತರಣೆ ಸೇರಿದಂತೆ ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿದೆ.
- ಬುಡಕಟ್ಟು ಸಮುದಾಯದ ಜನರು ವಾಸಿಸುವ ಪ್ರದೇಶದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.
- ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆರೆಗಳನ್ನು ತುಂಬಿಸುವ, ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು ವಿಸ್ತರಿಸುವ, ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.
ಉಗ್ರರ ದಾಳಿ ಕುರಿತು ಖಂಡನಾ ನಿರ್ಣಯ
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲು ತೀರ್ಮಾನಿಸಿದೆ. ಉಗ್ರರ ದಾಳಿಗಳು ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯಗಳು ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು.
ಆದರೆ, ಪುಲ್ವಾಮದಿಂದ ಹಿಡಿದು ಪಹಲ್ಗಾವ್ ವರೆಗೆ ನಡೆದಿರುವ ಈ ಭೀಕರ ದಾಳಿಗಳಿಗೆ ಕೇಂದ್ರ ಗೃಹ ಇಲಾಖೆಯ ವೈಫಲ್ಯವೇ ಕಾರಣ. ಗುಪ್ತಚರ ಇಲಾಖೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ದೌರ್ಬ;ಲ್ಯ ಮತ್ತು ವೈಫಲ್ಯಗಳಿಗಾಗಿ ತಲೆ ತಗ್ಗಿಸುವಂತೆ ಆಗಿದೆ. ಜೊತೆಗೆ ನೂರಾರು ಕುಟುಂಬಗಳು ಅನಾಥವಾಗಿವೆ. ಗೃಹ ಇಲಾಖೆಯ ಈ ವೈಫಲ್ಯವನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ.
ಈ ಸುದ್ದಿಯನ್ನೂ ಓದಿ | Pahalgam Terror Attack: ಮೋದಿ ಎಚ್ಚರಿಕೆ ಬೆನ್ನಲ್ಲೇ ಪಾಕ್‌ಗೆ ಹುಟ್ಟಿದ ನಡುಕ; ಕ್ಷಿಪಣಿಗಳ ಪರೀಕ್ಷೆ, ಹೈ ಅಲರ್ಟ್ ಘೋಷಣೆ
ಅಮಾಯಕರ ಮೇಲೆ ನಡೆಯುತ್ತಿರುವ ಉಗ್ರರ ದಾಳಿಗಳನ್ನು ಕೋಮು ಧ್ರುವೀಕರಣದ ದುಷ್ಟ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವುದು ಕೂಡ ಅಮಾನವೀಯ. ಉರಿಯುವ ಮನೆಯಲ್ಲಿ ಗಳ ಇರಿಯುವ ಹಾಗೂ ಬೆಂಕಿ ಕಾಯಿಸಿಕೊಳ್ಳುವ ಕೃತ್ಯ ಎಂದು ನಾವು ಭಾವಿಸಿದ್ದೇವೆ. ಹಾಗೆಯೇ ಈ ವೈಫಲ್ಯಗಳ ಕುರಿತು ಸಮರ್ಥವಾಗಿ ಮತ್ತು ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.