ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಅಕ್ಟೋಬರ್ 31ರವರೆಗೆ ಜಾತಿ ಗಣತಿ ವಿಸ್ತರಣೆ, ಸಮೀಕ್ಷಾದಾರರಿಗೆ ಇಂದಿನಿಂದ ಮೂರು ದಿನ ರಜೆ

ದೀಪಾವಳಿ (Deepavali Festival) ಹಬ್ಬದ ಸಂದರ್ಭದಲ್ಲಿ ಗಣತಿಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಮೂರು ದಿವಸಗಳ ರಜೆ ನೀಡಲಾಗಿದೆ. ರಾಜ್ಯ ಸರ್ಕಾರವು ದೀಪಾವಳಿಯ ನಿಮಿತ್ತ ಅಕ್ಟೋಬರ್ 20ರಿಂದ ಅಕ್ಟೋಬರ್ 22 ರವರೆಗೆ ಸಮೀಕ್ಷೆಯಲ್ಲಿ ಭಾಗವಹಿಸುವ ಎಲ್ಲರಿಗೂ ರಜಾದಿನಗಳನ್ನು ಘೋಷಿಸಿದೆ.

ಜಾತಿ ಗಣತಿ ಅವಧಿ ವಿಸ್ತರಣೆ, ಸಮೀಕ್ಷಾದಾರರಿಗೆ ಇಂದಿನಿಂದ ಮೂರು ದಿನ ರಜೆ

-

ಹರೀಶ್‌ ಕೇರ ಹರೀಶ್‌ ಕೇರ Oct 20, 2025 9:54 AM

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (Caste Census) ಮತ್ತೆ ವಿಸ್ತರಿಸಲಾಗಿದೆ. ಇದೀಗ ರಾಜ್ಯಾದ್ಯಂತ ಅಕ್ಟೋಬರ್ 31ರವರೆಗೆ ಸಮೀಕ್ಷೆ ನಡೆಯಲಿದೆ. ಈ ನಡುವೆ ದೀಪಾವಳಿ (Deepavali Festival) ಹಬ್ಬದ ಸಂದರ್ಭದಲ್ಲಿ ಮೂರು ದಿವಸಗಳ ರಜೆ ನೀಡಲಾಗಿದೆ. ರಾಜ್ಯ ಸರ್ಕಾರವು ದೀಪಾವಳಿಯ ನಿಮಿತ್ತ ಅಕ್ಟೋಬರ್ 20 ರಿಂದ ಅಕ್ಟೋಬರ್ 22 ರವರೆಗೆ ಸಮೀಕ್ಷೆಯಲ್ಲಿ ಭಾಗವಹಿಸುವ ಎಲ್ಲರಿಗೂ ರಜಾದಿನಗಳನ್ನು ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಇದುವರೆಗೆ ಮನೆ-ಮನೆ ಸಮೀಕ್ಷೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಶಿಕ್ಷಕರು, ತಮ್ಮ ಶೈಕ್ಷಣಿಕ ಜವಾಬ್ದಾರಿಗಳಿಗೆ ಮರಳಲಿದ್ದಾರೆ. ಸೆಪ್ಟೆಂಬರ್ 22 ರಂದು (ಜಿಬಿಎ ಪ್ರದೇಶವನ್ನು ಹೊರತುಪಡಿಸಿ) ಪ್ರಾರಂಭವಾದ ಸಮೀಕ್ಷೆಯು ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಾಗಿತ್ತು. ಅದನ್ನು ಅಕ್ಟೋಬರ್ 19 ರವರೆಗೆ ವಿಸ್ತರಿಸಲಾಯಿತು. ಇದೀಗ ಮತ್ತೆ ವಿಸ್ತರಿಸಲಾಗಿದೆ.

ಭಾನುವಾರ ಸಂಜೆಯ ವೇಳೆಗೆ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಪ್ರದೇಶವನ್ನು ಹೊರತುಪಡಿಸಿ ರಾಜ್ಯದಾದ್ಯಂತ ಸುಮಾರು 1.43 ಕೋಟಿ ಕುಟುಂಬಗಳಲ್ಲಿ 5.42 ಕೋಟಿ ಜನರ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ 56.56 ಲಕ್ಷ ಜನರಿದ್ದು, 18.31 ಲಕ್ಷ ಕುಟುಂಬಗಳನ್ನು ಗಣತಿದಾರರು ಸಂಪರ್ಕಿಸುವುದರೊಂದಿಗೆ ಒಟ್ಟಾರೆ 39.83 ಲಕ್ಷ ಜನರ ಸಮೀಕ್ಷೆ ಕಾರ್ಯ ಆಗಿದ್ದು, ಶೇ. 45. 97 ರಷ್ಟು ಪ್ರಗತಿ ಆಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಇದನ್ನೂ ಓದಿ: Caste census: ಜಾತಿ ಸಮೀಕ್ಷೆ ಅವಧಿ ಮತ್ತೆ ವಿಸ್ತರಿಸಿದ ಸರ್ಕಾರ; ಶಿಕ್ಷಕರ ಬದಲು ಇತರ ಇಲಾಖೆಗಳ ಸಿಬ್ಬಂದಿ ಬಳಕೆ

ಮುಖ್ಯಮಂತ್ರಿಗಳ ನಿರ್ದೇಶನದಂತೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 20, 21 ಹಾಗೂ 22 ರಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ರಜೆ ನೀಡಲಾಗಿದೆ. ಅ.23 ಮೂರರಿಂದ ಸಮೀಕ್ಷೆ ಪುನಃ ಪ್ರಾರಂಭವಾಗಲಿದೆ. ಆಯಾ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ವಿವಿಧ ಇಲಾಖೆಯ ಸಿಬ್ಬಂದಿಗಳನ್ನ ಬಳಸಿ ಅಕ್ಟೋಬರ್ 23 ರಿಂದ 31 ರವರೆಗೆ ಸಮೀಕ್ಷೆ ಕಾರ್ಯವನ್ನ ಪೂರ್ಣಗೊಳಿಸಲಿದ್ದಾರೆ ಎಂದು ಸಭೆ ಬಳಿಕ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಸುದ್ದಿಗಾರರಿಗೆ ತಿಳಿಸಿದರು.

ಇದುವರೆಗೆ ಮಂಡ್ಯ, ತುಮಕೂರು, ಹಾವೇರಿ, ಚಿತ್ರದುರ್ಗ, ಉಡುಪಿ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಏಳು ಜಿಲ್ಲೆಗಳು ಶೇ.100ರಷ್ಟು, ಗದಗ, ಕೊಪ್ಪಳ, ಶಿವಮೊಗ್ಗ ಶೇ.99ರಷ್ಟು ಸಮೀಕ್ಷೆ ಆಗಿದೆ. ರಾಯಚೂರು, ಬಾಗಲಕೋಟೆ, ಉತ್ತರ ಕನ್ನಡ, ಹಾಸನ ಜಿಲ್ಲೆಗಳು ಶೇ.97ರಷ್ಟು, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೇ.95ರಷ್ಟು, ರಾಮನಗರ, ಧಾರವಾಡ, ಬೀದರ್‌ನಲ್ಲಿ ಶೇ.86, 88 ಮತ್ತು 79.46 ರಷ್ಟು ಸಮೀಕ್ಷೆ ಆಗಿದ್ದು, ಸ್ವಲ್ಪ ನಿಧಾನಗತಿಯಲ್ಲಿ ಸಾಗಿದೆ. ಇನ್ನೂ ಕೆಲಸ ಬಾಕಿ ಇರುವ ಜಿಲ್ಲೆಗಳಲ್ಲಿ ಮಾತ್ರ ಮುಂದುವರಿಸಲಾಗಿದೆ ಎಂದು ಸಚಿವರು ಹೇಳಿದರು.

ಅಕ್ಟೋಬರ್ 4 ರಂದು ಸಮೀಕ್ಷೆ ಪ್ರಾರಂಭವಾದ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆಯು ಶೇ. 45.97 ರಷ್ಟು ಪ್ರಗತಿಯಾಗಿದೆ. ಬೆಂಗಳೂರಿನಲ್ಲಿ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.