ಬೆಂಗಳೂರು: ಯುಜಿ ಸಿಇಟಿ 2025ರ (KCET Answer Key 2025) ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿ ಏ.16 ಮತ್ತು 17ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. ಇದೀಗ ಪರೀಕ್ಷೆಯ ನಾಲ್ಕು ವಿಷಯಗಳ 16 ವರ್ಷನ್ ಗಳ ಕೀ ಉತ್ತರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ಏ.22ರೊಳಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು.
ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ, ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆನ್‌ಲೈನ್ ಪೋರ್ಟಲ್ https://cetonline.karnataka.gov.in/keaobjections/forms/login.aspx ಲಿಂಕ್ ಮೂಲಕ ಏ.22ರ ಸಂಜೆ 5:00 ರೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು PDF ರೂಪದಲ್ಲಿ ಸಲ್ಲಿಸಬೇಕು. ಪ್ರಶ್ನೆ ಸಂಖ್ಯೆ ಅಥವಾ ವರ್ಷನ್ ಕೋಡ್ ನಮೂದಿಸದೇ ಇರುವ ಅಥವಾ ಆಧಾರರಹಿತವಾಗಿರುವ ಆಕ್ಷೇಪಣೆಗಳನ್ನು ಪರಿಗಣಿಸಲ್ಲ. ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸುವ ಕೀ ಉತ್ತರಗಳು ಅಂತಿಮವಾಗಿರುತ್ತವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಕೀ ಉತ್ತರ ಹೀಗೆ ಚೆಕ್ ಮಾಡಿ
ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ, ಪ್ರವೇಶ (Admissions) ಕೆಟಗರಿಯಲ್ಲಿ ಯುಜಿ ಸಿಇಟಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಸಿಇಟಿ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರ ಹಾಗೂ ಆಕ್ಷೇಪಣೆ ಸಲ್ಲಿಕೆ ಸೇರಿ ವಿವಿಧ ಲಿಂಕ್‌ಗಳು ಕಾಣುತ್ತದೆ. ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಿ ಕೀ ಉತ್ತರದ ಪಿಡಿಎಫ್ ಡೌನ್‌ಲೋಡ್ ಮಾಡಿಕೊಳ್ಳಬಹುದು.