ಚಾಮರಾಜನಗರ, ಜು. 27: ಪ್ರವಾಸಿಗರ ಆಕರ್ಷಣೆಯ ತಾಣ, ರಾಜ್ಯದ ಪ್ರಸಿದ್ಧ ಪ್ರವಾಸಿ ಸ್ಥಳ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ (Bandipur National Park) ತೆರಳುವವರಿಗೆ ಅರಣ್ಯ ಇಲಾಖೆ ಶಾಕ್ ನೀಡಲು ಸಜ್ಜಾಗಿದೆ. ಹೌದು, ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರದ ಎಂಟ್ರಿ ಫೀಸ್ ಸೆಪ್ಟೆಂಬರ್ 1ರಿಂದ ಹೆಚ್ಚಾಗಲಿದೆ. ಸಫಾರಿ ಶುಲ್ಕ, ಖಾಸಗಿ ವಾಹನ, ಕ್ಯಾಮರಾ ಬಳಕೆ ಸೇರಿ ಹಲವು ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಹೊಸ ದರಗಳ ಪ್ರಕಾರ ಹಲವು ಸೇವೆಗಳ ಶುಲ್ಕವು ಬಹುತೇಕ ದ್ವಿಗುಣವಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಬಸ್ ಮತ್ತು ಜೀಪ್ ಸಫಾರಿಯ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ. ಖಾಸಗಿ ವಾಹನಗಳ ಪ್ರವೇಶ ಶುಲ್ಕ, ಬೋಟ್ ಸೇವೆ, ಕ್ಯಾಮರಾ ಬಳಕೆ ಹಾಗೂ ಅರಣ್ಯ ಇಲಾಖೆಯ ಅತಿಥಿಗೃಹಗಳ ಶುಲ್ಕಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ದರ ಹೆಚ್ಚಳದ ವಿವರ
ಅರಣ್ಯ ಇಲಾಖೆಯ ಬಸ್ ಸಫಾರಿಗೆ ಪ್ರಸ್ತುತ ಇದ್ದ 650 ರುಪಾಯಿ ವಯಸ್ಕರ ಟಿಕೆಟ್ ದರವನ್ನು ಬರೋಬ್ಬರಿ 350 ರುಪಾಯಿ ಹೆಚ್ಚಿಸಲಾಗಿದ್ದು, 1,000 ರುಪಾಯಿಗೆ ತಲುಪಿದೆ. 12 ವರ್ಷದೊಳಗಿನ ಮಕ್ಕಳ ಶುಲ್ಕವನ್ನು 350 ರುಪಾಯಿಯಿಂದ 500 ರುಪಾಯಿಗೆ ಏರಿಸಲಾಗಿದೆ. ಇನ್ನು ಜೀಪ್ ಸಫಾರಿ ವಯಸ್ಕರ ದರವನ್ನು 750 ರುಪಾಯಿಯಿಂದ 1,500 ರುಪಾಯಿ ಏರಿಕೆ ಮಾಡಿದ್ದು, ಮಕ್ಕಳ ಶುಲ್ಕವೂ ದುಬಾರಿಯಾಗಿದೆ. 750 ರುಪಾಯಿ ದರ ನಿಗದಿಪಡಿಸಲಾಗಿದೆ.
ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸಿಎಂ ಸೂಚನೆ
ಇನ್ನು ಖಾಸಗಿ ಜೀಪ್ ಪ್ರವೇಶ ಶುಲ್ಕ-2,500 ರುಪಾಯಿ, ಲಘು ವಾಣಿಜ್ಯ ವಾಹನ-3,500 ರುಪಾಯಿ, ಬೋಟ್- 3,500 ರುಪಾಯಿ, ಸ್ವಂತ ವಾಹನ ಶುಲ್ಕ 600 ರುಪಾಯಿಗೆ ಏರಿಸಲಾಗಿದೆ. ಕ್ಯಾಮರಾ ಬಳಕೆಯೂ ಇನ್ಮುಂದೆ ದುಬಾರಿಯಾಗಲಿದೆ. 200 ಮಿ.ಮೀ.ವರೆಗಿನ ಲೆನ್ಸ್ ಹೊಂದಿರುವ ಕ್ಯಾಮರಾಗಳಿಗೆ ಶುಲ್ಕವಿಲ್ಲ. 200 ಮಿ.ಮೀ.ಗಿಂತ ಹೆಚ್ಚಿನ ಝೂಮ್ ಲೆನ್ಸ್ ಹೊಂದಿರುವ ಕ್ಯಾಮರಾಗಳಿಗೆ 1,500 ರುಪಾಯಿ ಜತೆಗೆ ಶೇಕಡಾ 18 ಜಿಎಸ್‌ಟಿ ಪಾವತಿಸುವುದು ಕಡ್ಡಾಯ.
ವಿಶ್ವವಾಣಿ ವರದಿಯಿಂದ ಸಫಾರಿ ಪುನರಾರಂಭ
ಹಲವು ದಿನಗಳಿಂದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಬಂದ್ ಆಗಿದ್ದ ಜಂಗಲ್ ಸಫಾರಿ ಇತ್ತೀಚೆಗೆ ಪುನರಾರಂಭಗೊಂಡಿತ್ತು. ತಜ್ಞರು ಮತ್ತು ಅಧಿಕಾರಿಗಳ ತಾಂತ್ರಿಕ ಸಮಿತಿಯ ವರದಿ ಶಿಫಾರಸ್ಸಿನ ಅನ್ವಯ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜಂಗಲ್ ಸಫಾರಿ (ಉದ್ಯಾನ ಪ್ರವಾಸ) ಪುನರಾರಂಭಿಸಲು ರಾಜ್ಯ ಸರ್ಕಾರವು ನಿರ್ಧರಿಸಿತ್ತು.
ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಮರು ಆರಂಭಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ಗಮನ ಸೆಳೆಯಲು ವಿಶ್ವವಾಣಿ ಪತ್ರಿಕೆಯಲ್ಲಿ ವಿಶೇಷ ವರದಿಗಳು ಪ್ರಕಟವಾಗಿದ್ದವು. ಸಫಾರಿ ಬಂದ್‌ನಿಂದ ಪ್ರವಾಸೋದ್ಯಮಕ್ಕೆ ಆಗುತ್ತಿರುವ ನಷ್ಟ, ರೆಸಾರ್ಟ್ ಹೋಮ್ ಸ್ಟೇ ಮಾಲಕರು, ನೌಕರರು, ಸಫಾರಿ ಚಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದೀಗ ಸರ್ಕಾರ ಪೂರ್ಣ ಪ್ರಮಾಣದ ಜಂಗಲ್ ಸಫಾರಿಗೆ ಅವಕಾಶ ನೀಡಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.