ಚಾಮರಾಜನಗರ: ಕೊರೊನಾ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ನಡೆದ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳ ಹೋರಾಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ. 21 ಮಂದಿಗೆ ಸರ್ಕಾರಿ ಕೆಲಸ ಘೋಷಣೆ ಮಾಡಲಾಗಿದ್ದು, ಏ.21ರಂದು ಸಿಎಂ ಸಿದ್ದರಾಮಯ್ಯ ಅವರು ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ.
ಹೌದು, ಗಡಿ ಜಿಲ್ಲೆ ಚಾಮರಾಜನಗರದಲ್ಲಿ 2021ರ ಮೇ 2ರಂದು ಕೊರೊನಾ ಸಮಯದಲ್ಲಿ ಸಂಭವಿಸಿದ ಆಕ್ಸಿಜನ್ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ವೇಳೆ 36 ಜನರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರು. ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಕೊಡುವಂತೆ ಅಂದಿನಿಂದಲೂ ಹೋರಾಟ ಮಾಡಲಾಗುತ್ತಿತ್ತು. ಇದೀಗ ಸಂತ್ರಸ್ತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.
ಏ.21 ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ 21 ಕ್ಕೂ ಹೆಚ್ಚು ಮಂದಿಗೆ ಸರ್ಕಾರಿ ಕೆಲಸದ ಆದೇಶ ಪತ್ರ ವಿತರಿಸಲಿದ್ದಾರೆ.
Yogesh gowda Murder Case: ಯೋಗೇಶ್ ಗೌಡ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ
ಏನಿದು ಘಟನೆ?
2021ರ ಮೇ 2ರಂದು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿತ್ತು. ಕೊರೊನಾ ಎರಡನೇ ಅಲೆಯ ವೇಳೆ ಆಕ್ಸಿಜನ್ ಕೊರತೆಯಿಂದಾಗಿ ಒಂದೇ ರಾತ್ರಿಯಲ್ಲಿ ಸುಮಾರು 36ಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭಗಳನ್ನೇ ಕಳೆದುಕೊಂಡ ಕುಟುಂಬಗಳು ಬೀದಿಗೆ ಬಿದ್ದಿದ್ದವು. ಅಂದಿನಿಂದ ಇಂದಿನವರೆಗೆ ಈ ಕುಟುಂಬಗಳು ತಮಗೆ ನ್ಯಾಯ ಬೇಕು ಮತ್ತು ಜೀವನೋಪಾಯಕ್ಕಾಗಿ ಸರ್ಕಾರಿ ನೌಕರಿ ನೀಡಬೇಕು ಎಂದು ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದರು.