ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈತರ ಆದಾಯ ಹೆಚ್ಚಿಸಲು ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ; ಅನುಷ್ಠಾನಕ್ಕೆ ಸಚಿವ ಸಂಪುಟ ಅನುಮೋದನೆ

Chief Minister Krishi Vistara Yojana: ರೈತರ ಆದಾಯ ಹೆಚ್ಚಿಸುವುದು ಹಾಗೂ ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವ ನಿಟ್ಟಿನಲ್ಲಿ ʼಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ವರ್ಷಗಳಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.

ಡಾ. ಜಿ. ಪರಮೇಶ್ವರ

ಬೆಂಗಳೂರು, ನ. 19: ರೈತರ ಆದಾಯ ಹೆಚ್ಚಿಸುವ ಗುರಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗುರುವಾರ (ನವೆಂಬರ್‌ 19) ಮುಖ್ಯಮಂತರಿ ಡಿ.ಕೆ. ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು. ರೈತರ ಆದಾಯ ಹೆಚ್ಚಿಸುವುದು ಹಾಗೂ ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸುವ ನಿಟ್ಟಿನಲ್ಲಿ ʼಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು (Chief Minister Krishi Vistara Yojana) ಮುಂದಿನ ವರ್ಷಗಳಲ್ಲಿ ₹75 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ನಿರ್ಣಯಿಸಲಾಗಿದೆ.

ಜತೆಗೆ ಈ ಸಚಿವ ಸಂಪುಟದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ವಿವರ ಇಲ್ಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 7 ನಿಗಮಗಳಿಂದ 2012-13ರಿಂದ 2020-21ರವರೆಗೆ ವಿತರಿಸಲಾದ ಸಾಲದ ಅಸಲನ್ನು ಪೂರ್ಣವಾಗಿ ಮರುಪಾವತಿಸುವ ಸುಮಾರು 2.83 ಲಕ್ಷ ಫಲಾನುಭವಿಗಳಿಗೆ ಒಟ್ಟು 236.04 ಕೋಟಿ ರೂ. ಬಡ್ಡಿ ಮನ್ನಾ ಮಾಡಲು ‘ಒಂದಾವರ್ತಿ ತೀರುವಳಿ’ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಸೌಲಭ್ಯವನ್ನು 6 ತಿಂಗಳೊಳಗೆ ಪಡೆದುಕೊಳ್ಳಲು ಸೂಚಿಸಲಾಗಿದೆ.

2025-26ನೇ ಸಾಲಿನ ಆಯವ್ಯಯ ಘೋಷಣೆಯಂತೆ ಕರ್ನಾಟಕದಲ್ಲಿ ಸುಟ್ಟುಗಾಯಗಳಿಂದ ಬದುಕುಳಿದವರ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಾಮಾಜಿಕ ಪುನರ್‌ ಸಂಘಟನೆಯ ನೀತಿ 2025 ಜಾರಿಗೊಳಿಸಲು ನಿರ್ಧಾರ.

2026-27ನೇ ಸಾಲಿನ ಆಯವ್ಯಯ ಘೋಷಣೆಯಂತೆ ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ಹಾಗೂ ನಷ್ಟವನ್ನು ತಡೆಗಟ್ಟಲು 52-54 ಮೀಟರ್‌ ಎತ್ತರಕ್ಕೆ ತಲುಪಬಲ್ಲ ಒಂದು ಏರಿಯಲ್‌ ಲ್ಯಾಡರ್‌ ಪ್ಲಾಟ್‌ಫಾರಂ ವಾಹನವನ್ನು ₹16 ಕೋಟಿ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಯ ಯೋಜನಾ ವೆಚ್ಚವನ್ನು ₹193.65 ಕೋಟಿಗಳಿಂದ ₹542.96 ಕೋಟಿಗಳಿಗೆ ಪರಿಷ್ಕರಿಸಿ ಹೆಚ್ಚುವರಿ ₹349.31 ಕೋಟಿ ಅನುದಾನದ ಅಗತ್ಯ ಹಾಗೂ ಹೆಚ್ಚುವರಿ ಜಮೀನು ಸ್ವಾಧೀನಕ್ಕೆ ಅನುಮೋದನೆ.

2026-27ನೇ ಸಾಲಿನ ಆಯವ್ಯಯ ಘೋಷಣೆಯಂತೆ ಅಲ್ಪಸಂಖ್ಯಾತ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 5,000 ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ ಅನ್ನು ₹25 ಕೋಟಿಗಳ ಅಂದಾಜು ವೆಚ್ಚದಲ್ಲಿ ಖರೀದಿಸಿ ವಿತರಿಸಲು ತೀರ್ಮಾನ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನಲ್ಲಿ ಪ್ರಜಾಸೌಧ, ತಾಲೂಕು ಆಡಳಿತ ಕೇಂದ್ರ ಕಟ್ಟಡದ ಎರಡನೇ ಹಂತದ ಕಾಮಗಾರಿಗೆ ₹5 ಕೋಟಿಗಳ ಅಂದಾಜು ವೆಚ್ಚಕ್ಕೆ ಅನುಮೋದನೆ; ಮೊದಲ ಹಂತದಲ್ಲಿ ₹10 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ 2026ಕ್ಕೆ ಅನುಮೋದನೆ; ಮುಂಬರುವ ವಿಧಾನ ಮಂಡಲದಲ್ಲಿ ಮಂಡಿಸಲು ತೀರ್ಮಾನ.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಮೂರನೇ ತಿದ್ದುಪಡಿ) ವಿಧೇಯಕ 2026ಕ್ಕೆ ಅನುಮೋದನೆ ಮತ್ತು ಶಾಸಕಾಂಗದ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಲು ತೀರ್ಮಾನ.

2026-27ನೇ ಸಾಲಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ₹27.97 ಕೋಟಿ ಅನುದಾನ ಮಂಜೂರು ಮಾಡಲು ತೀರ್ಮಾನ; ಒಟ್ಟು 1.39 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನುಕೂಲ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ಕ್ಕೆ ಎರಡನೇ ತಿದ್ದುಪಡಿ ವಿಧೇಯಕ 2026ಕ್ಕೆ ಅನುಮೋದನೆ.

ಬೆಂಗಳೂರಿನ ಯಶವಂತಪುರದಿಂದ ಹಳೆ ಮದ್ರಾಸ್‌ ರಸ್ತೆ ಮತ್ತು ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆವರೆಗೆ ʼಸಿʼ ವರ್ಗದ ಅಡಿಯಲ್ಲಿ ಬರುವ ಎರಡು ಎಲೆವೇಟೆಡ್‌ ಕಾರಿಡಾರ್‌ಗಳ ನಿರ್ಮಾಣಕ್ಕೆ ನಿಧಿ ರಚನೆಯ ಸಂಬಂಧ ಆದೇಶ ಮಾರ್ಪಾಡು ಮಾಡಲು ತೀರ್ಮಾನ.

2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ ಸಂಖ್ಯೆ 71ರಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಪ್ರಾರಂಭಿಸಲು ಅನುಮೋದನೆ.

ಆಯವ್ಯಯ ಘೋಷಣೆಯಂತೆ ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿ-ಸ್ಮೈಲ್‌) ಸಂಸ್ಥೆಯಿಂದ ಹೊಸ ವೈಟ್‌ ಟಾಪಿಂಗ್‌ ಕಾಮಗಾರಿ 2026-27 ಯೋಜನೆಯ ಮೊದಲ ಹಂತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ.

ಬಿ-ಸ್ಮೈಲ್‌ ವತಿಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರವರ್ತುಲ ರಸ್ತೆಯನ್ನು ಜಾಗತಿಕ ರೂಪದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆಯ ₹486.79 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ ತ್ಯಾಜ್ಯದ ಸಂಗ್ರಹಣೆ, ಪ್ರಾಥಮಿಕ ಸಾಗಾಣಿಕೆ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುವ ಈಗಾಗಲೇ ಅನುಮೋದನೆಯಾಗಿರುವ 10 ಪ್ಯಾಕೇಜ್‌ಗಳ ₹1,379.62 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ಸನ್ನಡತೆ ಆಧಾರದ ಮೇಲೆ 28 ಜೀವಾವಧಿ ಶಿಕ್ಷಾ ಬಂಧಿಗಳ ಅವಧಿಪೂರ್ವ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ನೊಣವಿನಕೆರೆಯನ್ನು ಮೂಲವಾಗಿಟ್ಟುಕೊಂಡು ತಿಪಟೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೆಚ್ಚುವರಿ ಯೋಜನೆಯ ₹39.35 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

ಕೇಂದ್ರ ಪುರಸ್ಕೃತ ಪೊಲೀಸ್‌ ಪಡೆಗಳ ಆಧುನೀಕರಣ ಯೋಜನೆಯಡಿ ಪೊಲೀಸ್‌ ಇಲಾಖೆಗೆ ಅಗತ್ಯವಿರುವ 134 Emergency Response Support System ವಾಹನಗಳನ್ನು ಒಟ್ಟು ₹11 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ.

ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರು ನಗರದ ಕೆಂಗೇರಿ ಬಳಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂಕೀರ್ಣ / ಮಲ್ಟಿಫ್ಲೆಕ್ಸ್‌ ಕಟ್ಟಡದ ಎರಡನೇ ಹಂತದ ಕಾಮಗಾರಿಗಳನ್ನು ₹68.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ.

ಆಯವ್ಯಯ ಘೋಷಣೆಯಂತೆ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಧಾರಿತವಾಗಿ ಒಂದು ಲಕ್ಷ ಹೊಸ ಮನೆಗಳ ನಿರ್ಮಾಣದ ಗುರಿಯನ್ನು ಜಾರಿಗೊಳಿಸಲು ತೀರ್ಮಾನ; ಈ ಗುರಿಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳ ಸಹಾಯಧನ ₹1.20 ಲಕ್ಷಗಳಿಂದ ₹2 ಲಕ್ಷಗಳಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ₹2 ಲಕ್ಷಗಳಿಂದ ₹3 ಲಕ್ಷಗಳಿಗೆ ಹೆಚ್ಚಿಸಲು ತೀರ್ಮಾನ.

ಮುಖ್ಯಮಂತ್ರಿ ಅವರ ʼನಮ್ಮ ಮನೆʼ ಯೋಜನೆಯಡಿ ರಾಜ್ಯಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನು (30 ಅಡಿ X 40 ಅಡಿ ಅಳತೆ) ಒದಗಿಸಲು ತೀರ್ಮಾನ.

ಕೆಶಿಪ್‌ - IV ಯೋಜನೆಯಡಿ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕಿನ ನೆರವಿನೊಂದಿಗೆ ₹10,252.58 ಕೋಟಿಗಳ ಅಂದಾಜು ವೆಚ್ಚದಲ್ಲಿ 9 ರಸ್ತೆಗಳ ಒಟ್ಟಾರೆ 730.01 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನ.

ವಿಶ್ವ ಬ್ಯಾಂಕಿನ ಸಹಯೋಗದೊಂದಿಗೆ ₹1,700 ಕೋಟಿಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ವಿದ್ಯುತ್‌ ಬಸ್‌ ಕಾರ್ಯಕ್ರಮ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತವರು ಜಿಲ್ಲೆ ಕಲಬುರಗಿಗೆ ರಾಜ್ಯ ಸರ್ಕಾರದಿಂದ ಬಂಪರ್‌ ಕೊಡುಗೆ

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹುಬ್ಬಳ್ಳಿಯ ಹೃದ್ರೋಗ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳನ್ನು ಖರೀದಿಸಲು ₹36.597 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.

ಭಾರತ್‌ ಜೋಡೋ ಯುವಸಂಘ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಯುವ ಸಮಿತಿ ರಚಿಸಲು ಹಾಗೂ ಪೂರ್ಣಾವಧಿ ಸಂಯೋಜಕರು ಮತ್ತು ಪ್ರೇರಕರನ್ನು ನೇಮಿಸಲು ಅನುಮೋದನೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author