ಚಿಕ್ಕಬಳ್ಳಾಪುರ: ತಾಲೂಕಿನ ಪೆರೇಸಂದ್ರದ ಜೋಳದ ಉದ್ಯಮಿ ರಾಮಕೃಷ್ಣಪ್ಪಗೆ ಹೈದರಾಬಾದ್‌ನಲ್ಲಿ ಜೋಳದ ವ್ಯಾಪಾರ ನಡೆಸುವ ಅಕ್ಬರ್ ಎಂಬಾತ 1.89 ಕೋಟಿ ರೂ. ವಂಚಿಸಿರುವ ಪ್ರಕರಣ (Fraud Case) ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ಈ ಸಂಬಂಧ ಉದ್ಯಮಿ ರಾಮಕೃಷ್ಣಪ್ಪ ಪೆರೇಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿ ಅಕ್ಬರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪೆರೇಸಂದ್ರ ಪಿಎಸ್‌ಐ ಜಗದೀಶ್‌ರೆಡ್ಡಿಗೆ, ಸಚಿವ ಜಮೀರ್ ಅಹ್ಮದ್ (Minister Zameer Ahmed) ಕರೆಮಾಡಿ ಆತ ನಮ್ಮ ಸಂಬಂಧಿ, ಅವರಿಗೆ ಸಹಾಯ ಮಾಡಿ, ಈ ಪ್ರಕರಣವನ್ನು ರಾಜಿ ಮಾಡಿಸಿ ಎಂದು ಸೂಚಿಸಿದ್ದು, ಈ ಕುರಿತ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಪೆರೇಸಂದ್ರದ ಜೋಳದ ಉದ್ಯಮಿ ರಾಮಕೃಷ್ಣಪ್ಪ, ಸಚಿವ ಜಮೀರ್ ಅಹ್ಮದ್ ಅನ್ಯಾಯಕ್ಕೆ ಒಳಗಾಗಿರುವ ರೈತರ ಪರವಾಗಿ ಮಾತನಾಡಿ ಆರೋಪಿಯಿಂದ ಹಣ ವಾಪಸ್ ಬರುವಂತೆ ಮಾಡಿ ನೆರವಾಗುವ ಬದಲು, ವಂಚನೆ ಕೇಸಲ್ಲಿ ಬಂಧನವಾಗಿರುವ ಆರೋಪಿಗಳ ರಕ್ಷಣೆ ಮಾಡುವಂತೆ ಪಿಎಸ್‌ಐ ಅವರಿಗೆ ಪೋನ್ ಕರೆ ಮಾಡಿ ಮಾತನಾಡುವುದು ಸರಿಯಲ್ಲ. ಅವರು ಆರೋಪಿಗಳಿಗೆ ಸಹಾಯ ಮಾಡುವುದಾದರೆ ನಾವು ರೈತರೊಡಗೂಡಿ ಜಮೀರ್ ಅಹ್ಮದ್ ಖಾನ್ ಮನೆ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಮನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಬಂದಿದ್ದಾರೆ. ನೀವು ನಮ್ಮ ಪಕ್ಷದಲ್ಲಿ ಸಚಿವರಾಗಿದ್ದು ವಂಚಕರ ಪರ ನಿಲ್ಲೋದಕ್ಕಾ ಜಮೀರ್ ಅಹಮದ್ ಖಾನ್ ಅವರೇ ಎಂದು ಪ್ರಶ್ನಿಸಿರುವ ರಾಮಕೃಷ್ಣಪ್ಪ ಅವರು ನಮಗೆ ನ್ಯಾಯ ಸಿಗದೇ ಹೋದರೆ ನಿಮ್ಮ ನಿವಾಸಕ್ಕೆ ಮುತ್ತಿಗೆ ಹಾಕ್ತಿವಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಿಯೋದಲ್ಲಿ ಏನಿದೆ?
ಪೆರೇಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ್‌ರೆಡ್ಡಿ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ನಡುವೆ ನಡೆದಿರುವ ಮಾತುಕತೆಯ ಆಡಿಯೊ ವೈರಲ್ ಆಗುತ್ತಿದೆ. ಜಮೀರ್ ಅಹ್ಮದ್‌ಖಾನ್ ಅವರು ತಮ್ಮ ಕಚೇರಿಯ ಆಪ್ತಸಹಾಯಕ ಲಕ್ಷ್ಮೀನಾರಾಯಣ ಅವರ ಪೋನ್ ಮೂಲಕ ಮಾತನಾಡಿದ್ದಾರೆ. ಒಂದು ಕೇಸಿಗೆ ಸಂಬಂಧಪಟ್ಟಂತೆ ಸಾಹೇಬರು ತಮ್ಮೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದ ಲಕ್ಷ್ಮೀನಾರಾಯಣ್ ಪೋನ್ ಅನ್ನು ಸಚಿವ ಜಮೀರ್ ಅಹ್ಮದ್‌ಗೆ ಕೊಡುತ್ತಾರೆ.
ಆಗ ಮಾತನಾಡುವ ಸಚಿವರು, ನಮಸ್ತೆ ಬ್ರದರ್ ಏನಿಲ್ಲ... ನಮ್ಮ ಹೈದರಾಬಾದ್‌ನ ಅಕ್ಬರ್ ಬಿಲ್ ತಬರ್ ಅಂತ. ನಮ್ಮ ಸಬಂಧಿ ಯಾವುದೋ ಒಂದು ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಯಾರಿಗೋ ಒಂದಷ್ಟು ದುಡ್ಡು ಕೊಡಬೇಕಾಗಿತ್ತಂತೆ. ಅಕ್ಬರ್ ಪಾಷಾ ಅಂತ ಹೈದರಾಬಾದ್‌ನಿಂದ ತಾವು ಕರೆದುಕೊಂಡು ಬಂದಿದ್ದಿರಂತೆ. ಏನದು ಕೇಸು ಎಂದು ಪಿಎಸ್‌ಐ ಅವರನ್ನು ಕೇಳುತ್ತಾರೆ. ಸಚಿವರಿಗೆ ಮಾಹಿತಿ ನೀಡುವ ಪಿಎಸ್‌ಐ ಜಗದೀಶ್‌ರೆಡ್ಡಿ ಚೀಟಿಂಗ್ ಕೇಸಲ್ಲಿ ಎಫ್‌ಐಆರ್ ಆಗಿದೆ. ಹೀಗಾಗಿ ಬಂಧಿಸಿ ಕರೆತರಲಾಗಿದೆ ಎನ್ನುತ್ತಾರೆ.
ನೀವು ಹೇಳುತ್ತಿರುವಷ್ಟು ಹಣ ತಗೊಂಡಿಲ್ಲ ಅವರು, ಒಂಚೂರು ಸಹಾಯ ಮಾಡಿ ಬ್ರದರ್ ಅವರು ನಮಗೆ ಬಹಳ ಬೇಕಾದವರು ಎನ್ನುತ್ತಾರೆ ಸಚಿವರು. ಪಿಎಸ್‌ಐ ಸರಿ ಸರ್ ಎನ್ನುತ್ತಾರೆ. ನಂತರ ಮಾತನಾಡುವ ಸಚಿವ ಜಮೀರ್ ಅಹ್ಮದ್ ಖಾನ್ ಈಗ ಏನು ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಪಿಎಸ್‌ಐ ದೂರು ಬಂದ ಕೂಡಲೇ ಹೈದರಾಬಾದ್‌ಗೆ ಹೋಗಿ ಸಮಯಕೊಟ್ಟು ಸೆಟಲ್ ಮಾಡಿಕೊಳ್ಳುವಂತೆ ಹೇಳಿದ್ದೆವು. ಆರೋಪಿಯನ್ನು ಪೆರೇಸಂದ್ರಕ್ಕೆ ಕೂಡ ಕರೆಸಿ ಇಲ್ಲಿಯೂ ಮಾತುಕತೆ ಮೂಲಕ ಸೆಟಲ್ ಮಾಡಿಕೊಂಡರೆ ನಾನು ಬಿ ರಿಪೋರ್ಟ್ ಹಾಕುವುದಾಗಿ ಹೇಳಿದ್ದೆ. ಇಬ್ಬರಿಗೂ ಕೂಡ ಈಗೋ ಪ್ರಶ್ನೆ. ಅವರೂ ಒಪ್ಪುತ್ತಿಲ್ಲ, ಇವರೂ ಒಪ್ಪುತ್ತಿಲ್ಲ ಎನ್ನುತ್ತಾರೆ.
ಆಗ ಮಾತನಾಡುವ ಸಚಿವರು ಈಗೊಂದು ಚಾನ್ಸ್ ಕೊಟ್ಟು ಸೆಟಲ್ ಮಾಡಿಕೊಳ್ಳಲು ಹೇಳಿ ಎನ್ನುತ್ತಾರೆ. ಪಿಎಸ್‌ಐ ಮಾತನಾಡಿ ರಾಮಕೃಷ್ಣಪ್ಪ, ಅಕ್ಬರ್ ಅವರಿಗೆ ಜೋಳದ ಲೋಡುಗಳನ್ನು ಕಳಿಸಿರುವುದು ನಿಜ. ಅವರು ಅದನ್ನು ಪಡೆದುಕೊಂಡಿರುವುದೂ ನಿಜ. ಎರಡಕ್ಕೂ ದಾಖಲೆಯಿದೆ. ಇಬ್ಬರೂ ಕೂತು ಸೆಟಲ್ ಮಾಡಿಕೊಂಡರೆ ಮಾಡಿಕೊಳ್ಳಲಿ. ಹೈದರಾಬಾದಿನ ಸೈಬರಾಬಾದಿನಲ್ಲಿ ಕುಳಿತುಕೊಂಡು ಅವರಿಗೆ ಇದನ್ನೇ ಹೇಳಿದ್ದೇನೆ ಎನ್ನುತ್ತಾರೆ. ಆಗ ಮಾತನಾಡಿದ ಜಮೀರ್ ಅಹ್ಮದ್, ಇದೊಂದು ಬಾರಿ ಅವಕಾಶ ಮಾಡಿಕೊಡಿ, ರಾಮಕೃಷ್ಣಪ್ಪ ಹೇಳಿದಷ್ಟು ಹಣ ಅವರು ಕೊಡಬೇಕಾಗಿಲ್ಲ. ಅಕ್ಬರ್ ಅವರೊಂದಿಗೆ ಮಾತನಾಡಿ ಹಣ ಸೆಟಲ್ ಮಾಡಿಸುತ್ತೇನೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Cheating Case: ₹5 ಕೋಟಿ ವಂಚನೆ ಆರೋಪ; ಬಾಲಿವುಡ್ ನಟರು ಸೇರಿ 22 ಜನರ ವಿರುದ್ಧ ಪ್ರಕರಣ ದಾಖಲು
ಈ ಆಡಿಯೋ ಸಕತ್ ವೈರಲ್ ಆಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಜಂಗಿ ಕುಸ್ತಿಗೆ ಅಖಾಡ ನಿರ್ಮಾಣ ಮಾಡಿಕೊಟ್ಟಂತೆ ಆಗಿದೆ. ಮೇಲಾಗಿ ಸಚಿವರು ಆರೋಪಿಗಳ ಪರವಹಿಸಿರುವುದು ರೈತಾಪಿ ವರ್ಗವನ್ನು ಕೆರಳಿ ಕೆಂಡವಾಗುವಂತೆ ಮಾಡಿದ್ದು, ಇದು ಮುಂದೆ ಯಾವ ಆಯಾಮ ಪಡೆದುಕೊಳ್ಳುವುದೋ ಕಾದು ನೋಡಬೇಕಿದೆ.