ಬಾಗೇಪಲ್ಲಿ(ಭಾಗ್ಯನಗರ) : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ತನಿಖೆಗೆ ಸರ್ಕಾರ ಮತ್ತೊಂದು ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ಕಾನೂನು ಕ್ರಮ ಕೈಗೊಳ್ಳ ಬೇಕು ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡರಾದ ಗುಂಜೂರು ಆರ್ ಶ್ರೀನಿವಾಸರೆಡ್ಡಿ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಡಾ.ವಿರೇಂದ್ರ ಹೆಗಡೆ ರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಮೂಲಕ ಸರ್ಕಾರ ಮಾಡದ ಹಲವಾರು ಜನಪರ ಕೆಲಸ ಮಾಡುತ್ತಿದೆ. ಮದ್ಯವರ್ಜನ ಶಿಬಿರ, ಕೆರೆಕಟ್ಟೆಗಳ ಸಂರಕ್ಷಣೆ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ, ಅನ್ನದಾನ, ಮಾಶಾಸನ ಹೀಗೆ ನೂರಾರು ಸಮಾಜ ಸೇವೆ ಮಾಡುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳದ ಪಾತ್ರ ಬಹಳ ದೊಡ್ಡದ್ದು, ಅಂಥವರ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ.
ಇದನ್ನೂ ಓದಿ: Chikkanayakanahalli News: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು
ಎಸ್‌ಐಟಿ ತನಿಖಾ ವರದಿ ಬರದೇ ಇದ್ದರೂ, ಧರ್ಮಸ್ಥಳ, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಪುರಾಣ ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರಕ್ಕೆ ಧಕ್ಕೆ ತರುವ, ಸುಳ್ಳು ನಿಂದನೆ, ಅಪಪ್ರಚಾರ ಅವಹೇಳನ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳಕ್ಕೆ ಪ್ರತೀ ದಿನಕ್ಕೆ ಲಕ್ಷಾಂತರ ಭಕ್ತರು ಬರುತ್ತಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಿರುದ್ಧ ವಿನಾಕಾರಣ ಅಪಪ್ರಚಾರ ನಡೆಸಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಕಿಡಿಗೇಡಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ ಅಪಪ್ರಚಾರ ಮಾಡುತ್ತಿದ್ದು ಧಾರ್ಮಿಕ ನಂಬಿಕೆ, ಸಾಮಾಜಿಕ ಸಾಮರಸ್ಯ ಹಾಗು ಶಾಂತಿ ಕೆಡಿಸುತ್ತಿದ್ದಾರೆ. ಇಂಥವರ ವಿರುದ್ಧ ದೂರು ದಾಖಲಿಸಿ ಕೊಂಡು ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಶ್ರೀ ಕ್ಷೇತ್ರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ಪವಿತ್ರ ಧರ್ಮ ಸ್ಥಳಕ್ಕೆ ಬಂದು, ಮಂಜುನಾಥ ದೇವರ ಆಶೀರ್ವಾದ ಪಡೆಯುತ್ತಾರೆ. ಇಂಥ ಸುಕ್ಷೇತ್ರದ ಹೆಸರಿಗೆ ಹಾನಿ ಮಾಡುವ ಕೆಲಸಗಳು ಆಗುತ್ತಿರುವುದು ಸರಿಯಲ್ಲ. ಸಮಾಜಘಾತುಕ ಶಕ್ತಿಗಳು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ಅವಮಾನ ಮಾಡುತ್ತಿರುವುದು ನಮಗೆ ತೀವ್ರ ನೋವು ತಂದಿದೆ. ಹಾಗಾಗಿ, ಸರ್ಕಾರ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ಕೊಡಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.